Colon Cancer In Women ಸಾಂದರ್ಭಿಕ ಚಿತ್ರ
- ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಕುರಿತು ಸೂಕ್ತ ಅರಿವಿನ ಕೊರತೆ ಎದ್ದುಕಾಣುತ್ತಿದೆ
- ದೇಹದಲ್ಲಿ ಕಂಡುಬರುವ ಆರಂಭಿಕ ಬದಲಾವಣೆ ಸಾಮಾನ್ಯ ಅನಾರೋಗ್ಯವೆಂದು ಭಾವಿಸಿ ನಿರ್ಲಕ್ಷಿಸುವುದೇ ಮುಂದೆ ದೊಡ್ಡ ಅಪಾಯಕ್ಕೆ ದಾರಿ
- ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ
Colon Cancer In Women: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಕುರಿತು ಸೂಕ್ತ ಅರಿವಿನ ಕೊರತೆ ಎದ್ದುಕಾಣುತ್ತಿದೆ. ದೇಹದಲ್ಲಿ ಕಂಡುಬರುವ ಆರಂಭಿಕ ಬದಲಾವಣೆ ಅಥವಾ ಲಕ್ಷಣಗಳನ್ನು ಸಾಮಾನ್ಯ ಅನಾರೋಗ್ಯವೆಂದು ಭಾವಿಸಿ ನಿರ್ಲಕ್ಷಿಸುವುದೇ ಮುಂದೆ ದೊಡ್ಡ ಅಪಾಯಕ್ಕೆ ದಾರಿಯಾಗುತ್ತದೆ. ವಿಶೇಷವಾಗಿ ಕೊಲೊನ್ ಕ್ಯಾನ್ಸರ್ (ಬೃಹತ್ ಕರುಳಿನ ಕ್ಯಾನ್ಸರ್) ಪ್ರಕರಣಗಳಲ್ಲಿ ಈ ರೀತಿಯ ನಿರ್ಲಕ್ಷ್ಯವೇ ಕಾಯಿಲೆ ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದೆ.
ಆದಾಗ್ಯೂ, ಕೊಲೊನ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದಾಗ ದೇಹವು ನೀಡುವ ಸೂಚನೆಗಳನ್ನು ಸರಿಯಾದ ಸಮಯಕ್ಕೆ ಗುರುತಿಸಿ ಚಿಕಿತ್ಸೆ ಪಡೆದರೆ, ರೋಗವು ದೇಹದಾದ್ಯಂತ ಹರಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ತಮ್ಮ ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಆದರೆ, ಕ್ಯಾನ್ಸರ್ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯ ಅತ್ಯಂತ ದುಬಾರಿಯಾಗಬಹುದು. ಹಾಗಾಗಿ ಮಹಿಳೆಯರು ತಮ್ಮ ದೇಹದಲ್ಲಿ ಕಂಡುಬರುವ ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ನೋಡೋಣ...
ಕೊಲೊನ್ ಕ್ಯಾನ್ಸರ್ ಹೇಗೆ ಪ್ರಾರಂಭವಾಗುತ್ತದೆ?
ಬೃಹತ್ ಕರುಳಿನ (ಕೊಲೊನ್) ಒಳಪದರದಲ್ಲಿ ಸಣ್ಣ ಜೀವಕೋಶಗಳ ಗುಂಪುಗಳು ಬೆಳೆಯಲು ಪ್ರಾರಂಭಿಸಿದಾಗ ಈ ಕ್ಯಾನ್ಸರ್ ಆರಂಭವಾಗುತ್ತದೆ. ಈ ಗಡ್ಡೆಗಳಂತಹ ರಚನೆಯನ್ನು 'ಪಾಲಿಪ್ಸ್' (Polyps) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರಂಭದಲ್ಲಿ ಎಲ್ಲಾ ಪಾಲಿಪ್ಸ್‌ಗಳು ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಆದರೆ, ಕಾಲಕ್ರಮೇಣ ಇವುಗಳಲ್ಲಿ ಕೆಲವು ಕ್ಯಾನ್ಸರ್ ಆಗಿ ಮಾರ್ಪಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕೊಲೊನ್‌ನಲ್ಲಿ ಬೆಳೆಯುವ ಪಾಲಿಪ್ಸ್‌ಗಳನ್ನು ನಿಯಮಿತವಾಗಿ ತಪಾಸಣೆಗೊಳಪಡಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಒಂದು ವೇಳೆ ಈ ಪಾಲಿಪ್ಸ್‌ಗಳು ಕ್ಯಾನ್ಸರ್ ಆಗಿ ಬದಲಾಗಲು ಪ್ರಾರಂಭಿಸಿದರೆ, ಮಹಿಳೆಯರಲ್ಲಿ ಕೆಲವು ನಿರ್ದಿಷ್ಟ ಲಕ್ಷಣಗಳು ಕಂಡುಬರುತ್ತವೆ.
ಕೊಲೊನ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು
ಮಹಿಳೆಯರಲ್ಲಿ ಕೊಲೊನ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಮುಟ್ಟಿನ ಸಮಸ್ಯೆಗಳಂತೆಯೇ ಇರಬಹುದು. ಇವುಗಳಲ್ಲಿ ಹೊಟ್ಟೆ ನೋವು ಮತ್ತು ಉಬ್ಬರದಂತಹ ಸಮಸ್ಯೆಗಳು ಕೂಡಾ ಸೇರಿವೆ. ಇದರ ಜೊತೆಗೆ ಕರುಳಿನ ಅಭ್ಯಾಸದಲ್ಲಿನ ಬದಲಾವಣೆಗಳು ಮತ್ತು ಮಲದಲ್ಲಿ ರಕ್ತ ಕೂಡಾ ಕಾಣಿಸಿಕೊಳ್ಳಬಹುದು. ಆರಂಭದಲ್ಲಿ ಸಂಭವಿಸುವ ಬದಲಾವಣೆಗಳು ಸಾಮಾನ್ಯವೆಂದು ತೋರುತ್ತವೆಯಾದರೂ ಕ್ರಮೇಣ ಕ್ಯಾನ್ಸರ್ ಮುಂದುವರೆದ ಹಂತವನ್ನು ತಲುಪುತ್ತದೆ. ದಿನವಿಡೀ ಇರುವ ಆಯಾಸ, ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ತೂಕ ನಷ್ಟದಂತಹ ಲಕ್ಷಣಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕು.
ಮಹಿಳೆಯರಲ್ಲಿ ಕೊಲೊನ್ ಕ್ಯಾನ್ಸರ್ ಕಾರಣಗಳು
ವೈದ್ಯರ ಪ್ರಕಾರ, ಮಹಿಳೆಯರಲ್ಲಿ ಕೊಲೊನ್ ಕ್ಯಾನ್ಸರ್‌ಗೆ ದೊಡ್ಡ ಕಾರಣವೆಂದರೆ ಆಹಾರದಲ್ಲಿ ನಾರಿನ ಕೊರತೆ. ಹೆಚ್ಚಿನ ಮಹಿಳೆಯರು ತಮ್ಮ ದಿನಿನಿತ್ಯದ ಆಹಾರದಲ್ಲಿ ನಾರಿನ ಸೇವನೆಯಲ್ಲಿ ಕೇವಲ ಶೇ.15 ರಷ್ಟು ಮಾತ್ರ ಸೇವಿಸುತ್ತಾರೆ. ಆದಾಗ್ಯೂ, ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಶೇ. 25 ಪ್ರತಿಶತದಷ್ಟು ನಾರಿನ ಅಗತ್ಯವಿರುತ್ತದೆ. ದೇಹದಲ್ಲಿ ಕಡಿಮೆ ನಾರಿನಂಶವಿದ್ದಾಗ, ಕರುಳುಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಮತ್ತು ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ (ಏಜೆನ್ಸೀಸ್).
ದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.