Raw Onions  
ಆರೋಗ್ಯ

Raw Onions: ಬೇಸಿಗೆಯ ಬಿಸಿಲಿಗೆ ಹಸಿ ಈರುಳ್ಳಿ ರಾಮಬಾಣವೇ ಅಥವಾ ಆರೋಗ್ಯಕ್ಕೆ ಕಂಟಕವೇ? ಇಲ್ಲಿದೆ ಅಸಲಿ ಸತ್ಯ!

ಬೆಂಗಳೂರು: ದೇಶಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಭೀಕರ ಹೀಟ್‌ವೇವ್ (ಬಿಸಿಗಾಳಿ) ತಡೆಯಲು ಸಾರ್ವಜನಿಕರು ಆಮ್ ಪನ್ನಾ, ಮಜ್ಜಿಗೆ, ಸಬ್ಜಾ ಬೀಜಗಳ ಜೊತೆಗೆ ಸಾಂಪ್ರದಾಯಿಕ ದೇಶಿ ಆಹಾರ ಪದ್ಧತಿಗಳ ಮೊರೆ ಹೋಗುತ್ತಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು 'ಹಸಿ ಈರುಳ್ಳಿ'(Raw Onions). ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿಂದರೆ ದೇಹ ತಂಪಾಗುತ್ತದೆ ಎಂದು ಕೆಲವರು ವಾದಿಸಿದರೆ, ಇದು ಅಸಿಡಿಟಿ ಹೆಚ್ಚಿಸುತ್ತದೆ ಎಂದು ಇನ್ನು ಕೆಲವರು ದೂರವಿಡುತ್ತಾರೆ. ಹಾಗಾದರೆ, ಈ ಕಡು ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿನ್ನಬೇಕೇ ಬೇಡವೇ? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೀಟ್‌ಸ್ಟ್ರೋಕ್ ಮತ್ತು ‘ಲೂ’ ಗಾಳಿಗೆ ಈರುಳ್ಳಿ ರಕ್ಷಣೆ!

ನಮ್ಮ ದೇಶದಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ತಲೆಮಾರುಗಳಿಂದಲೂ ಈರುಳ್ಳಿಯನ್ನು ಬೇಸಿಗೆಯ ಅತ್ಯುತ್ತಮ ರಕ್ಷಕ ಎಂದು ನಂಬಲಾಗಿದೆ. ಉತ್ತರ ಭಾರತ ಮತ್ತು ರಾಜಸ್ಥಾನದಂತಹ ಅತಿಯಾದ ಉಷ್ಣಾಂಶವಿರುವ ಪ್ರದೇಶಗಳಲ್ಲಿ, ಬಿಸಿಗಾಳಿ ಅಥವಾ 'ಲೂ' (Loo) ಇಂದ ರಕ್ಷಣೆ ಪಡೆಯಲು ಜನರು ಪ್ರಯಾಣಿಸುವಾಗ ತಮ್ಮ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುವ ವಾಡಿಕೆ ಇಂದಿಗೂ ಇದೆ. ಇನ್ನು ರಾಜಸ್ಥಾನದ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ, ದೇಹವನ್ನು ತಂಪಾಗಿಸಲು ಈರುಳ್ಳಿ ಪೇಸ್ಟ್ ಅನ್ನು ಎದೆ ಹಾಗೂ ಕಿವಿಗಳ ಹಿಂಭಾಗಕ್ಕೆ ಹಚ್ಚಿಕೊಳ್ಳುತ್ತಾರೆ.

ವಿಜ್ಞಾನ ಮತ್ತು ಪೌಷ್ಟಿಕ ತಜ್ಞರು ಏನು ಹೇಳುತ್ತಾರೆ?

ಖ್ಯಾತ ಪೌಷ್ಟಿಕಾಂಶ ತಜ್ಞರಾದ ರೂಪಾಲಿ ದತ್ತಾ ಅವರ ಪ್ರಕಾರ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಈರುಳ್ಳಿಗೆ ದೇಹವನ್ನು ತಂಪಾಗಿಸುವ ಗುಣವಿದೆ ಎಂದು ಹೇಳಲಾಗುತ್ತದೆ. ಹಸಿ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ (Water Content) ಇರುವುದರಿಂದ, ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದ ದೇಹದ ನೀರಂಶ ಕಡಿಮೆಯಾಗದಂತೆ ತಡೆಯಲು ಇದು ಸಹಕಾರಿಯಾಗಿದೆ. ಇದಲ್ಲದೆ, ಈರುಳ್ಳಿಯಲ್ಲಿ 'ಕ್ವೆರ್ಸೆಟಿನ್' (Quercetin) ಎಂಬ ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ ಹಾಗೂ ಪ್ರೀಬಯಾಟಿಕ್‌ಗಳು ಸಮೃದ್ಧವಾಗಿವೆ. ಆದರೆ, ನೆನಪಿರಲಿ, ಹಸಿ ಈರುಳ್ಳಿ ಕೇವಲ ದೇಹದ ಪೋಷಕಾಂಶಗಳನ್ನು ಹೆಚ್ಚಿಸಬಲ್ಲದೇ ಹೊರತು, ಇದು ಹೀಟ್‌ಸ್ಟ್ರೋಕ್‌ಗೆ ಯಾವುದೇ ಮ್ಯಾಜಿಕಲ್ ಔಷಧಿಯಲ್ಲ. ಧಾರಾಳವಾಗಿ ನೀರು ಕುಡಿಯುವುದಕ್ಕೆ ಇದು ಪರ್ಯಾಯವಲ್ಲ.

ಅತಿಯಾದರೆ ಅಮೃತವೂ ವಿಷ: ಹಸಿ ಈರುಳ್ಳಿಯ ಅಡ್ಡಪರಿಣಾಮಗಳು!

ಹಸಿ ಈರುಳ್ಳಿ ಎಲ್ಲರ ದೇಹ ಪ್ರಕೃತಿಗೆ ಹೊಂದುವುದಿಲ್ಲ. ಮೆಡಿಕೋವರ್ ಆಸ್ಪತ್ರೆಯ ವರದಿಯ ಪ್ರಕಾರ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಅತಿಯಾಗಿ ಹಸಿ ಈರುಳ್ಳಿ ಸೇವಿಸಿದರೆ ಈ ಕೆಳಗಿನ ತೊಂದರೆಗಳು ಕಾಣಿಸಿಕೊಳ್ಳಬಹುದು:
ಅಸಿಡಿಟಿ ಮತ್ತು ಎದೆಯುರಿ: ಹಸಿ ಈರುಳ್ಳಿಯಲ್ಲಿರುವ ಕೆಲವು ಅಂಶಗಳು ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಿ ಎದೆಯುರಿ ಉಂಟುಮಾಡಬಹುದು.
ಗ್ಯಾಸ್ ಮತ್ತು ಹೊಟ್ಟೆ ಉಬ್ಬರ: ಕೆಲವರಲ್ಲಿ ಇದು ಅಜೀರ್ಣವನ್ನು ಉಂಟುಮಾಡಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
ಬಾಯಿ ದುರ್ವಾಸನೆ: ಹಸಿ ಈರುಳ್ಳಿ ತಿಂದ ತಕ್ಷಣ ಬಾಯಿ ದುರ್ವಾಸನೆ ಬರುವುದು ಸಾಮಾನ್ಯ.
ಬೇಸಿಗೆಯ ಬಿಸಿಲಿನಿಂದಾಗಿ ಈಗಾಗಲೇ ದೇಹವು ಸುಸ್ತಾಗಿರುವಾಗ, ಇಂತಹ ಜೀರ್ಣಕ್ರಿಯೆಯ ತೊಂದರೆಗಳು ಎದುರಾದರೆ ಮನುಷ್ಯ ಮತ್ತಷ್ಟು ಸುಸ್ತಾಗುತ್ತಾನೆ.
ಹಸಿ ಈರುಳ್ಳಿ ತಿನ್ನುವುದರಿಂದ ನೇರವಾಗಿ ಹೀಟ್‌ಸ್ಟ್ರೋಕ್ ಆಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಒಂದು ವೇಳೆ ನಿಮಗೆ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದಿದ್ದರೆ, ಮಧ್ಯಾಹ್ನದ ಊಟದ ಜೊತೆಗೆ ಮಿತವಾಗಿ ಹಸಿ ಈರುಳ್ಳಿ ಸವಿಯುವುದು ಆರೋಗ್ಯಕ್ಕೆ ಉತ್ತಮ. ಆದರೆ, ಈಗಾಗಲೇ ಹೊಟ್ಟೆಯ ಕಾಯಿಲೆ ಇರುವವರು ಬೇಸಿಗೆ ಮುಗಿಯುವವರೆಗೂ ಹಸಿ ಈರುಳ್ಳಿಯಿಂದ ಸ್ವಲ್ಪ ದೂರವಿರುವುದೇ ಜಾಣತನ,(ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.