packet food : ಮಕ್ಕಳಿಗೆ ಚಿಪ್ಸ್, ಬಿಸ್ಕೆಟ್, ಇನ್ಸ್ಟಂಟ್ ನೂಡಲ್ಸ್, ಪ್ಯಾಕೆಟ್ ತಿಂಡಿಗಳನ್ನು ಕೊಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಶಾಲೆಯಿಂದ ಮನೆಗೆ ಬಂದ ತಕ್ಷಣ ಇಂತಹ ತಿಂಡಿಗಳನ್ನು ಕೇಳುವ ಮಕ್ಕಳಿಗೆ ಪೋಷಕರು ಕೂಡ ಖುಷಿಯಿಂದಲೇ ಕೊಡುತ್ತಾರೆ. ಆದರೆ ಅತಿಯಾಗಿ ಸಂಸ್ಕರಿಸಿದ ಆಹಾರಗಳ ಸೇವನೆ ಮಕ್ಕಳ ದೇಹದ ತೂಕದ ಮೇಲೆ ಮಾತ್ರವಲ್ಲ, ಆಹಾರದ ಬಗ್ಗೆ ಮೆದುಳು ಪ್ರತಿಕ್ರಿಯಿಸುವ ರೀತಿಯ ಮೇಲೂ ಪರಿಣಾಮ ಬೀರಬಹುದೇ? ಇಂತಹ ಕುತೂಹಲಕಾರಿ ಪ್ರಶ್ನೆಗೆ ಹೊಸ ಅಧ್ಯಯನವೊಂದು ಮಹತ್ವದ ಸುಳಿವು ನೀಡಿದೆ.
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕೆಕ್ ಸ್ಕೂಲ್ ಆಫ್ ಮೆಡಿಸಿನ್ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಸೇವಿಸುವ ಮಕ್ಕಳ ಮೆದುಳಿನಲ್ಲಿರುವ ಪ್ರತಿಫಲ ಮತ್ತು ಪ್ರೇರಣೆಗೆ ಸಂಬಂಧಿಸಿದ ಭಾಗವು ಆಹಾರದ ಚಿತ್ರಗಳನ್ನು ನೋಡಿದಾಗ ಹೆಚ್ಚು ಸಕ್ರಿಯವಾಗಿರುವುದು ಕಂಡುಬಂದಿದೆ. ಈ ಮೆದುಳಿನ ಪ್ರತಿಕ್ರಿಯೆ ಮುಂದಿನ ಒಂದು ವರ್ಷದಲ್ಲಿ ದೇಹದ ಕೊಬ್ಬು ಮತ್ತು ತೂಕ ಹೆಚ್ಚಳದೊಂದಿಗೆ ಸಂಬಂಧ ಹೊಂದಿರುವುದೂ ಬೆಳಕಿಗೆ ಬಂದಿದೆ.
ಈ ಸಂಶೋಧನೆಯಲ್ಲಿ 7ರಿಂದ 10 ವರ್ಷದೊಳಗಿನ 46 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನ ಆರಂಭವಾದಾಗ ಎಲ್ಲ ಮಕ್ಕಳೂ ಆರೋಗ್ಯಕರ ತೂಕ ಹೊಂದಿದ್ದರು. ಸಂಶೋಧಕರು ಮಕ್ಕಳ ಆಹಾರ ಪದ್ಧತಿಯನ್ನು ದಾಖಲಿಸುವುದರ ಜತೆಗೆ ಎಂಆರ್ಐ ಸ್ಕ್ಯಾನಿಂಗ್ ಮೂಲಕ ಮೆದುಳಿನ ಪ್ರತಿಕ್ರಿಯೆಯನ್ನೂ ಪರಿಶೀಲಿಸಿದರು.
ಈ ವೇಳೆ ಮಕ್ಕಳಿಗೆ ಬಿಸ್ಕೆಟ್, ಫ್ರೆಂಚ್ ಫ್ರೈಸ್ನಂತಹ ಆಕರ್ಷಕ ಆಹಾರಗಳ ಚಿತ್ರಗಳನ್ನು ತೋರಿಸಲಾಯಿತು. ಆಗ ಮೆದುಳಿನ ಯಾವ ಭಾಗ ಹೆಚ್ಚು ಸಕ್ರಿಯವಾಗುತ್ತದೆ ಎಂಬುದನ್ನು ಗಮನಿಸಲಾಯಿತು. ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ಮಕ್ಕಳಲ್ಲಿ ಮೆದುಳಿನ ಡಾರ್ಸಲ್ ಸ್ಟ್ರೈಟಮ್ ಎಂಬ ಭಾಗ ಹೆಚ್ಚು ಸಕ್ರಿಯವಾಗಿರುವುದು ಕಂಡುಬಂದಿದೆ. ಈ ಭಾಗವು ಆಹಾರದಿಂದ ದೊರೆಯುವ ಸಂತೋಷ, ಆಸಕ್ತಿ, ಪ್ರೇರಣೆ ಮತ್ತು ಪ್ರತಿಫಲದ ಭಾವನೆಗಳಿಗೆ ಸಂಬಂಧಿಸಿದೆ. ಅಂದರೆ, ಇಂತಹ ಆಹಾರಗಳ ಚಿತ್ರಗಳನ್ನು ನೋಡಿದಾಗ ಕೆಲವು ಮಕ್ಕಳ ಮೆದುಳು ಹೆಚ್ಚು ಬಲವಾದ ಪ್ರತಿಕ್ರಿಯೆ ನೀಡುತ್ತಿತ್ತು.
ಸಂಶೋಧನೆಯಲ್ಲಿ ಉಲ್ಲೇಖಿಸಿರುವ ಅಲ್ಟ್ರಾ ಪ್ರೊಸೆಸ್ಡ್ ಫುಡ್ಸ್ ಎಂದರೆ ಕೈಗಾರಿಕಾ ವಿಧಾನದಲ್ಲಿ ಹಲವು ಹಂತಗಳಲ್ಲಿ ಸಂಸ್ಕರಿಸಿ ತಯಾರಿಸುವ ಆಹಾರಗಳು. ಇವುಗಳಲ್ಲಿ ಹೆಚ್ಚುವರಿ ಸಕ್ಕರೆ, ಉಪ್ಪು, ಕೃತಕ ಸಿಹಿಕಾರಕಗಳು, ಬಣ್ಣಗಳು, ಸ್ವಾದವರ್ಧಕಗಳು ಮತ್ತು ಇತರ ಸೇರ್ಪಡೆ ಪದಾರ್ಥಗಳು ಇರಬಹುದು. ಪ್ಯಾಕೆಟ್ ಚಿಪ್ಸ್, ಕೆಲವು ಬಗೆಯ ಬಿಸ್ಕೆಟ್ಗಳು, ಸಕ್ಕರೆ ಹೆಚ್ಚಿರುವ ಸಿದ್ಧ ಉಪಾಹಾರ ಧಾನ್ಯಗಳು, ಇನ್ಸ್ಟಂಟ್ ನೂಡಲ್ಸ್, ಸಿದ್ಧ ಸೂಪ್ಗಳು ಮತ್ತು ಕೆಲವು ಪ್ಯಾಕೆಟ್ ಬ್ರೆಡ್ಗಳು ಇದಕ್ಕೆ ಉದಾಹರಣೆಗಳಾಗಿವೆ. ಆದರೆ ಪ್ಯಾಕೆಟ್ನಲ್ಲಿ ಮಾರಾಟವಾಗುವ ಪ್ರತಿಯೊಂದು ಆಹಾರವೂ ಅಲ್ಟ್ರಾ ಪ್ರೊಸೆಸ್ಡ್ ಆಹಾರವಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.
ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕೆಂಬ ಸಂದೇಶವನ್ನು ಈ ಸಂಶೋಧನೆ ನೀಡಿದೆ. ಮನೆಯಲ್ಲಿ ತಯಾರಿಸಿದ ತಾಜಾ ಆಹಾರ, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಪೌಷ್ಟಿಕಾಂಶಯುಕ್ತ ಆಹಾರಗಳಿಗೆ ಆದ್ಯತೆ ನೀಡುವುದು ಉತ್ತಮ. ಪ್ಯಾಕೆಟ್ ತಿಂಡಿಗಳನ್ನು ಪ್ರತಿದಿನದ ಆಹಾರದ ಪ್ರಮುಖ ಭಾಗವನ್ನಾಗಿಸದೆ, ಅವುಗಳ ಸೇವನೆಯನ್ನು ಮಿತಿಗೊಳಿಸುವುದು ಅಗತ್ಯ.
ಈ ಅಧ್ಯಯನವು ಕೇವಲ 46 ಮಕ್ಕಳನ್ನು ಒಳಗೊಂಡಿದ್ದು, ಇದು ವೀಕ್ಷಣಾ ಆಧಾರಿತ ಸಂಶೋಧನೆಯಾಗಿದೆ. ಹೀಗಾಗಿ ಪ್ಯಾಕೆಟ್ ಆಹಾರವೇ ನೇರವಾಗಿ ಮೆದುಳಿನಲ್ಲಿ ಬದಲಾವಣೆ ಉಂಟುಮಾಡುತ್ತದೆ ಅಥವಾ ಬೊಜ್ಜಿಗೆ ಕಾರಣವಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದನ್ನು ದೃಢಪಡಿಸಲು ಇನ್ನಷ್ಟು ದೊಡ್ಡ ಪ್ರಮಾಣದ ಅಧ್ಯಯನಗಳ ಅಗತ್ಯವಿದೆ.
ಈ ಸಂಶೋಧನೆಯ ಫಲಿತಾಂಶಗಳು ಜಾಮಾ ನೆಟ್ವರ್ಕ್ ಓಪನ್ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾಗಿವೆ. ಮಕ್ಕಳ ಆಹಾರ ಪದ್ಧತಿ ಮತ್ತು ಬೆಳೆಯುತ್ತಿರುವ ಮೆದುಳಿನ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಈ ಸಂಶೋಧನೆ ಹೊಸ ದಾರಿಯನ್ನು ತೆರೆದಿದೆ.( ಏಜೆನ್ಸಿಸ್)