ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಮೊಸರಿಗೆ ಮಹತ್ವದ ಸ್ಥಾನವಿದೆ. ಆದರೂ ಕೆಲವು ದಶಕಗಳಿಂದ ಇದು ಹಲವು ತಪ್ಪು ಕಲ್ಪನೆಗಳಿಗೆ ತುತ್ತಾಗಿದೆ. ಮೊಸರಿನಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಹಲವರು ಆತಂಕ ಪಡುತ್ತಾರೆ. ಆದರೆ ಆಧುನಿಕ ವಿಜ್ಞಾನದ ಹೊಸ ಸಂಶೋಧನೆಗಳು ಸಾಂಪ್ರದಾಯಿಕವಾಗಿ ಹೆಪ್ಪು ಹಾಕಿ ತಯಾರಿಸಿದ ನೈಸರ್ಗಿಕ ಮೊಸರು ಹೃದಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಸರಿಯಾದ ರೀತಿಯಲ್ಲಿ ಸೇವಿಸಿದರೆ, ಇದು ಜೀರ್ಣಕ್ರಿಯೆ, ರಕ್ತನಾಳಗಳು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಆಹಾರವಾಗಿದೆ.
ಆಹಾರದಲ್ಲಿನ ಸ್ಯಾಚುರೇಟೆಡ್ ಕೊಬ್ಬು ನೇರವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಹಳೆಯ ಸಿದ್ಧಾಂತದಿಂದ ಈ ಭಯ ಹುಟ್ಟಿಕೊಂಡಿದೆ. ಆದರೆ ಕೊಬ್ಬಿಗೆ ಸಂಬಂಧಿಸಿದ ಈಚಿನ ವಿಜ್ಞಾನವು ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ಗಳಲ್ಲಿ ಪ್ರಕಟವಾದ ದೀರ್ಘಕಾಲೀನ ಅಧ್ಯಯನಗಳ ಪ್ರಕಾರ, ಮೊಸರಿನಂತಹ ಹುದುಗಿಸಿದ ಡೈರಿ ಉತ್ಪನ್ನಗಳು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಇವುಗಳ ನಿಯಮಿತ ಸೇವನೆಯು ಪಾರ್ಶ್ವವಾಯು, ಹೃದಯದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತವೆ.
ಮೊಸರಿನಲ್ಲಿರುವ ಕೊಬ್ಬು ಮುಖ್ಯವಾಗಿ ದೊಡ್ಡದಾದ ಮತ್ತು ಹಗುರವಾದ ಪ್ಯಾಟರ್ನ್ ಎ ಎಲ್ಡಿಎಲ್ ಕಣಗಳನ್ನು ಹೆಚ್ಚಿಸುತ್ತದೆ. ಇವು ಆಕ್ಸಿಡೀಕರಣಕ್ಕೆ ಒಳಗಾಗದೆ ರಕ್ತನಾಳಗಳಲ್ಲಿ ಸುರಕ್ಷಿತವಾಗಿ ಚಲಿಸುತ್ತವೆ. ರಕ್ತನಾಳಗಳಲ್ಲಿ ಬ್ಲಾಕೇಜ್ (ಪ್ಲೇಕ್) ಉಂಟುಮಾಡುವ ಸಣ್ಣದಾದ, ಅಪಾಯಕಾರಿ ಪ್ಯಾಟರ್ನ್ ಬಿಎಲ್ಡಿಎಲ್ ಕಣಗಳು ಹೆಚ್ಚಾಗುವುದು ಅತಿಯಾದ ಸಕ್ಕರೆ, ಮೈದಾ ಮತ್ತು ಸಂಸ್ಕರಿಸಿದ ಎಣ್ಣೆಗಳಿಂದಲೇ ಹೊರತು ನೈಸರ್ಗಿಕ ಮೊಸರಿನಿಂದಲ್ಲ. ಮೊಸರಿನಲ್ಲಿ ಸುಲಭವಾಗಿ ದೇಹ ಹೀರಿಕೊಳ್ಳುವ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿವೆ. ಈ ಖನಿಜಗಳು ರಕ್ತನಾಳಗಳ ಸ್ನಾಯುಗಳನ್ನು ಸಡಿಲಗೊಳಿಸಿ, ಅಧಿಕ ಸೋಡಿಯಂ ಹೊರಹಾಕುವ ಮೂಲಕ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತವೆ.
ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾಗಳು (ಪ್ರೋಬಯಾಟಿಕ್ಸ್) ಜೀವಂತವಾಗಿರುತ್ತವೆ. ಇವು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ, ಜೀರ್ಣಾಂಗವ್ಯೂಹದ ಪ್ರಮುಖ ಪದರವನ್ನು ಬಲಪಡಿಸುತ್ತವೆ. ಹಾಲಿನ ಪ್ರೋಟೀನ್ ಮತ್ತು ಸಕ್ಕರೆ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಜತೆಗೆ ಕ್ಯಾಲ್ಸಿಯಂ, ರಂಜಕ, ಸತು ಮತ್ತು ವಿಟಮಿನ್ ಬಿ12 ದೇಹಕ್ಕೆ ಸುಲಭವಾಗಿ ಹೀರಲ್ಪಡುತ್ತವೆ. ಮೊಸರು ತಿಂದರೆ ಬೊಜ್ಜು ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಕೇವಲ ಸಾದಾ ಮೊಸರು ತಿನ್ನುವುದರಿಂದ ಬೊಜ್ಜು ಬರುವುದಿಲ್ಲ. ಮೊಸರಿಗೆ ಸಕ್ಕರೆಯಂತಹ ಸಿಹಿ ಪದಾರ್ಥಗಳನ್ನು ಬೆರೆಸಿ ತಿಂದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಮೊಸರು ತಿಂದರೆ ಶೀತ ಮತ್ತು ಕೀಲು ನೋವು ಬರುತ್ತದೆ ಎಂಬುದು ಕೂಡ ತಪ್ಪು ಕಲ್ಪನೆಯೇ. ಮೊಸರು ಯಾವುದೇ ವೈರಸ್ ಉಂಟುಮಾಡುವುದಿಲ್ಲ. ಆದರೆ ಇದು ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸ್ವಭಾವ ಹೊಂದಿರುವುದರಿಂದ, ಸೂಕ್ಷ್ಮ ಶರೀರದವರಿಗೆ ತಪ್ಪು ಸಮಯದಲ್ಲಿ ತಿಂದಾಗ ಕಫ ಹೆಚ್ಚಾಗಬಹುದಷ್ಟೇ.
ಚರಕ ಮತ್ತು ವಾಗ್ಭಟ ಮಹರ್ಷಿಗಳು ಕೂಡ ಮೊಸರನ್ನು ಬಲವರ್ಧಕವೆಂದು ಪರಿಗಣಿಸಿದ್ದಾರೆ. ಆದರೆ ಅದರ ಸೇವನೆಗೆ ನಿಯಮಗಳನ್ನು ವಿಧಿಸಿದ್ದಾರೆ. ಸೂರ್ಯಾಸ್ತದ ನಂತರ ಜೀರ್ಣಕ್ರಿಯೆ ನಿಧಾನವಾಗುವ ಕಾರಣ ಮೊಸರಿನ ಸೇವನೆ ನಿರ್ಬಂಧಿಸಿದ್ದಾರೆ. ಮೊಸರನ್ನು ಬಿಸಿ ಮಾಡಬಾರದು ಎಂದು ಆಯುರ್ವೆದ ಹೇಳುತ್ತದೆ. ಕೇವಲ ಮೊಸರನ್ನು ತಿನ್ನುವ ಬದಲು ಜೀರಿಗೆ ಪುಡಿ, ಸೈಂಧವ ಲವಣ (ಕಲ್ಲುಪ್ಪು), ಹೆಸರುಬೇಳೆ ಕಟ್ಟು, ಪಾಲಿಶ್ ಮಾಡದ ಅಕ್ಕಿಯ ಅನ್ನ ಅಥವಾ ನೆಲ್ಲಿಕಾಯಿಯೊಂದಿಗೆ ಬೆರೆಸಿ ಸೇವಿಸುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವಿಸುವ ಬದಲು ಊಟದ ಕೊನೆಯಲ್ಲಿ ಸೇವಿಸಿದರೆ ಒಳ್ಳೆಯದು. ಒಟ್ಟಿನಲ್ಲಿ ಮೊಸರಿನಲ್ಲಿರುವ ಕೊಬ್ಬಿಗೆ ಹೆದರಿ ಅದರ ಸೇವನೆಯನ್ನು ಬಿಡುವುದಲ್ಲ; ಬದಲಿಗೆ ಆರೋಗ್ಯದಾಯಕ ಎಂಬುದನ್ನು ಅರ್ಥ ಮಾಡಿಕೊಂಡು ಬಳಸಬೇಕು.