- ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರವೃತ್ತಿ ಹೆಚ್ಚಾಗಿದೆ
- ನಾವು ಮೊದಲಿನಂತೆ ಹೆಚ್ಚು ತಿನ್ನುವುದಿಲ್ಲ, ಆದರೆ ತೂಕ ಕಡಿಮೆಯಾಗುವ ಬದಲು ದಿನದಿಂದ ದಿನಕ್ಕೆ ಏರುತ್ತಲೇ ಇದೆ
- ಕೇವಲ ಕ್ಯಾಲರಿಗಳ ಲೆಕ್ಕಾಚಾರವಷ್ಟೇ ತೂಕ ಇಳಿಸಲು ಕೆಲಸ ಮಾಡುವುದಿಲ್ಲ
Weight Loss: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಇವರಲ್ಲಿ ಅನೇಕ ಜನ ಹೆಚ್ಚಾಗಿ ಕೇಳುವ ಪ್ರಶ್ನೆ ಒಂದಿದೆ ಅದೇ ನಾವು ಮೊದಲಿನಂತೆ ಹೆಚ್ಚು ತಿನ್ನುವುದಿಲ್ಲ, ಆದರೆ ತೂಕ ಕಡಿಮೆ (Weight Loss) ಯಾಗುವ ಬದಲು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳುವಲ್ಲೇ ಜೀವನ ಸಾಕೆನ್ನುಸುತ್ತದೆ ಎಂದು ಹೇಳುವುದನ್ನು ನಾವು ಕೇಳಿರುತ್ತೆವೆ.
ಸಾಮಾನ್ಯವಾಗಿ ತೂಕ ಏರಿಕೆಗೆ ಅತಿಯಾದ ಆಹಾರ ಸೇವನೆಯೇ ಕಾರಣ ಎಂದು ನಾವು ಭಾವಿಸುತ್ತೇವೆ. ಆದರೆ ವೈಜ್ಞಾನಿಕವಾಗಿ ನೋಡಿದರೆ, ಕೇವಲ ಕ್ಯಾಲರಿಗಳ ಲೆಕ್ಕಾಚಾರವಷ್ಟೇ ಇಲ್ಲಿ ಕೆಲಸ ಮಾಡುವುದಿಲ್ಲ. ನಮ್ಮ ದೇಹದ ಹಾರ್ಮೋನುಗಳು, ಮಾನಸಿಕ ಸ್ಥಿತಿ ಮತ್ತು ಚಯಾಪಚಯ ಕ್ರಿಯೆ (ಮೆಟಾಬಾಲಿಸಂ) ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಊಟ ಬಿಟ್ಟರು ತೂಕ ಏಕೆ ಏರುತ್ತದೆ?
ನಾವು ಆಹಾರವನ್ನು ತೀವ್ರವಾಗಿ ಕಡಿಮೆ ಮಾಡಿದಾಗ ನಮ್ಮ ದೇಹವು ಒಂದು ರೀತಿಯ ರಕ್ಷಣಾತ್ಮಕ ಸ್ಥಿತಿಗೆ (Survival Mode) ತಲುಪುತ್ತದೆ. ಈ ಹಂತದಲ್ಲಿ ದೇಹವು ತನಗೆ ಶಕ್ತಿಯ ಮೂಲವಾದ ಆಹಾರ ಸಿಗುತ್ತಿಲ್ಲ ಎಂದು ತಿಳಿದ ತಕ್ಷಣ, ತನ್ನಲ್ಲಿರುವ ಕೊಬ್ಬನ್ನು ಕರಗಿಸುವ ಬದಲು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಮೆಟಾಬಾಲಿಕ್ ಅಡಾಪ್ಟೇಶನ್' ಎಂದು ಕರೆಯಲಾಗುತ್ತದೆ.
ಅಂದರೆ, ನೀವು ಕಡಿಮೆ ತಿಂದಷ್ಟೂ ನಿಮ್ಮ ದೇಹವು ಶಕ್ತಿಯನ್ನು ವ್ಯಯಿಸುವ ವೇಗವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅಲ್ಪ ಪ್ರಮಾಣದಲ್ಲಿ ತಿಂದ ಆಹಾರವೂ ಸಹ ಶಕ್ತಿಯಾಗಿ ಬದಲಾಗುವ ಬದಲು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗತೊಡಗುತ್ತದೆ. ಇದು ಕಡಿಮೆ ಆಹಾರ ಸೇವಿಸಿದರೂ ತೂಕ ಹೆಚ್ಚಾಗಲು ಇರುವ ಮೊದಲ ಮತ್ತು ಪ್ರಮುಖ ಕಾರಣವಾಗಿದೆ.
ದೇಹದ ತೂಕಕ್ಕೂ ಮಾನಸಿಕ ಆರೋಗ್ಯಕ್ಕೂ ಇವರು ಸಂಬಂಧವೇನು?
ಜೀವನಶೈಲಿಯ ಮತ್ತೊಂದು ಪ್ರಮುಖ ಅಂಶವೆಂದರೆ ನಿದ್ರೆಯ ಕೊರತೆ ಮತ್ತು ಮಾನಸಿಕ ಒತ್ತಡ. ಇಂದಿನ ಧಾವಂತದ ಬದುಕಿನಲ್ಲಿ ಸರಿಯಾದ ನಿದ್ರೆ ಇಲ್ಲದಿರುವುದು ಹಾರ್ಮೋನುಗಳ ಏರುಪೇರಿಗೆ ಕಾರಣವಾಗುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹದಲ್ಲಿ 'ಘ್ರೆಲಿನ್' ಎಂಬ ಹಸಿವು ಹೆಚ್ಚಿಸುವ ಹಾರ್ಮೋನ್ ಅಧಿಕವಾಗುತ್ತದೆ.
ಇದರ ಜೊತೆಗೆ ಅತಿಯಾದ ಕೆಲಸದ ಒತ್ತಡ ಅಥವಾ ಆತಂಕದಿಂದ ದೇಹದಲ್ಲಿ 'ಕಾರ್ಟಿಸೋಲ್' ಎಂಬ ಸ್ಟ್ರೆಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಕಾರ್ಟಿಸೋಲ್ ಹಾರ್ಮೋನ್ ನೇರವಾಗಿ ನಿಮ್ಮ ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಾಗುವಂತೆ ಮಾಡುತ್ತದೆ. ನೀವು ಎಷ್ಟೇ ಕಡಿಮೆ ತಿಂದರೂ, ನಿಮ್ಮ ಮನಸ್ಸು ಶಾಂತವಾಗಿಲ್ಲದಿದ್ದರೆ ಮತ್ತು ದೇಹಕ್ಕೆ ವಿಶ್ರಾಂತಿ ಸಿಗದಿದ್ದರೆ ತೂಕ ಇಳಿಸಲು ಸಾಧ್ಯವೇ ಇಲ್ಲ.
ತೂಕ ಇಳಿಕೆಯಲ್ಲಿ ಹಾರ್ಮೋನ್ಗಳ ಪಾತ್ರವೇನು?
ಇನ್ನು ವೈದ್ಯಕೀಯ ಕಾರಣಗಳನ್ನು ನೋಡುವುದಾದರೆ, ಹಾರ್ಮೋನ್ ವ್ಯತ್ಯಯಗಳು ತೂಕ ಏರಿಕೆಯಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬರುವ ಥೈರಾಯ್ಡ್ ಸಮಸ್ಯೆ (Hypothyroidism) ಅಥವಾ ಪಿಸಿಓಡಿ (PCOD) ಸಮಸ್ಯೆಗಳು ದೇಹದ ತೂಕವನ್ನು ಅನಾವಶ್ಯಕವಾಗಿ ಹೆಚ್ಚಿಸುತ್ತವೆ.
ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದ ಚಯಾಪಚಯ ಕ್ರಿಯೆ ಸಂಪೂರ್ಣವಾಗಿ ನಿಧಾನಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅನಿವಾರ್ಯ. ಇದರೊಂದಿಗೆ ವಯಸ್ಸಾದಂತೆ ನಮ್ಮ ಸ್ನಾಯುಗಳ ದ್ರವ್ಯರಾಶಿ (Muscle Mass) ಕಡಿಮೆಯಾಗುತ್ತಾ ಹೋಗುತ್ತದೆ. ಸ್ನಾಯುಗಳು ಕಡಿಮೆಯಾದಷ್ಟೂ ದೇಹವು ಕ್ಯಾಲರಿಗಳನ್ನು ಸುಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಇದು ಕೂಡ ತೂಕ ಏರಿಕೆಗೆ ದಾರಿ ಮಾಡಿಕೊಡುತ್ತದೆ.
ನಾವು ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಹೇಗೆ ತಿನ್ನುತ್ತೇವೆ ಎಂಬುದು ಮುಖ್ಯ. ಕೆಲವರು ದಿನವಿಡೀ ಏನೂ ತಿನ್ನದೆ ರಾತ್ರಿ ವೇಳೆ ಅತಿಯಾಗಿ ತಿನ್ನುತ್ತಾರೆ ಅಥವಾ ಪ್ರೊಟೀನ್ ಇಲ್ಲದ ಬರಿ ಕಾರ್ಬೋಹೈಡ್ರೇಟ್ ಯುಕ್ತ ಆಹಾರ ಸೇವಿಸುತ್ತಾರೆ. ಕೇವಲ ಆಹಾರದ ಪ್ರಮಾಣ ಕಡಿಮೆ ಮಾಡುವುದಕ್ಕಿಂತ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮದ ಕಡೆಗೆ ಗಮನ ಹರಿಸುವುದು ಉತ್ತಮ.
ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ನಿದ್ರೆ, ಸಾಕಷ್ಟು ನೀರು ಕುಡಿಯುವುದು ಮತ್ತು ಯೋಗದಂತಹ ಚಟುವಟಿಕೆಗಳ ಮೂಲಕ ಒತ್ತಡ ಕಡಿಮೆ ಮಾಡಿಕೊಂಡರೆ ಮಾತ್ರ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ. ನೆನಪಿಡಿ, ತೂಕ ಇಳಿಸುವುದು ಎಂದರೆ ಉಪವಾಸ ಇರುವುದಲ್ಲ, ಬದಲಿಗೆ ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ,(ಏಜನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.