- ಕಿವಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು
- ಕಿವಿಗೆ ಇಯರ್ ಬಡ್ಸ್ ತೂರುವುದನ್ನು ಇಂದೇ ಬಿಟ್ಟುಬಿಡಿ
- ವೈದ್ಯರ ಸಲಹೆ ಇಲ್ಲದೆ ಎಣ್ಣೆ ಬಿಡುವುದು ಬೇಡ
- ಈ ಮಿಸ್ಟೇಕ್ಗಳನ್ನು ಎಂದಿಗೂ ಮಾಡಬೇಡಿ
Ear Care: ನಮ್ಮಿಷ್ಟದ ಕನ್ನಡ ಅಥವಾ ಯಾವುದಾದರೂ ಇಂಪಾದ, ಎವರ್ಗ್ರೀನ್ ಹಾಡು ಕೇಳಲು, ಬೆಳಗೆದ್ದ ಕೂಡಲೇ ಪೋಷಕರು, ಸಂಗಾತಿ, ಗೆಳೆಯ-ಗೆಳತಿ ಸೇರಿ ಕುಟುಂಬಸ್ಥರ ಜೊತೆ ಮಾತನಾಡಲು ದೇವರು ಕೊಟ್ಟ ಈ ಕಿವಿ ಬೇಕೇ ಬೇಕು ಸ್ವಾಮಿ. ಆದರೆ, ಈ ಸಣ್ಣ ಮೂಳೆಯನ್ನು ಹೊಂದಿರುವ ಪುಟ್ಟ ಕಿವಿ ನೆನಪಾಗೋದೆ ಅದಕ್ಕೆ ನೋವಾದಾಗ ಅಥವಾ ಅದರಲ್ಲೇನೋ ಸಣ್ಣಗೆ ಗುಯ್ಗುಟ್ಟಿದಾಗ ಮಾತ್ರ.
ಮಾನವನ ದೇಹದ ಪಂಚ ಜ್ಞಾನೇಂದ್ರಿಯಗಳಲ್ಲಿ ಬರುವ ನಾಲಗೆ, ಚರ್ಮ, ಮೂಗು, ಕಣ್ಣಿನಂತೆ ಕಿವಿ ನಮ್ಮ ದೇಹದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಹಾಗೂ ನಿರ್ವಹಿಸುತ್ತದೆ. ಕಿವಿ ದೇಹದ ಸಮತೋಲನವನ್ನು ಕಾಪಾಡುವುದರಲ್ಲಿ ಮುಂಚೂಣಿ. ಕಿವಿಯಲ್ಲಿ ಏನೋ ನೋವೆಂದು ಪಿನ್ ಹಾಕುವುದು, ಕಾಗೆ ಅಥವಾ ಕಡ್ಡಿಯಲ್ಲಿ ತಿರುವುದು, ಮನಬಂದಂತೆ ಬಡ್ಸ್ ತುರುಕುವುದು ಬಹಳ ಡೇಂಜರ್.
ಕಿವಿಯ ಆರೋಗ್ಯ ಕಾಪಾಡುಕೊಳ್ಳುವ ವಿಚಾರದಲ್ಲಿ ಈ ನಾಲ್ಕು ತಪ್ಪುಗಳನ್ನು ಎಂದಿಗೂ ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದ್ರೆ, ಕಿವಿ ಬಗ್ಗೆ ಕಾಳಜಿ ವಹಿಸೋದು ಹೇಗೆ? ಏನೆಲ್ಲ ಮಾಡಬೇಕು, ಯಾವುದು ಆ ನಾಲ್ಕು ಮಿಸ್ಟೇಕ್? ಎಂಬುದರ ಮಾಹಿತಿ ಹೀಗಿದೆ ನೋಡಿ.
ಬಡ್ಸ್ ಹಾಕೋದು ಮೊದಲು ಬಿಡಿ
ಕೆಲವೊಮ್ಮೆ ನಾವು ತಿಳಿಯದೇ ಮಾಡುವ ತಪ್ಪು ನಮ್ಮ ಕಿವಿಯ ಆರೋಗ್ಯಕ್ಕೆ ದೊಡ್ಡ ರೀತಿಯಲ್ಲಿ ಡ್ಯಾಮೇಜ್ ಮಾಡುತ್ತದೆ. ಅನೇಕರು ಕಿವಿಯಲ್ಲಾಗುವ ಸಮಸ್ಯೆಯನ್ನು ನಿರ್ಲಕ್ಷ್ಯಿಸಿದರೆ ಮುಂದೊಂದು ದಿನ ಶ್ರವಣ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಕಿವಿಗೆ ಬಡ್ಸ್, ಪಿನ್ ತುರುಕಲೇ ಬೇಡಿ. ಏಕೆಂದರೆ, ಬಡ್ಸ್ಗಳು ಕಿವಿಯಲ್ಲಿರುವ ಮೇಣವನ್ನು ಇನ್ನಷ್ಟು ಒಳಕ್ಕೆ ತಳ್ಳುತ್ತದೆಯೇ ವಿನಃ ಹೊರಗೆ ಬರೋದಿಲ್ಲ. ಪದೇ ಪದೇ ವ್ಯಾಕ್ಸ್ ಹೆಚ್ಚಾಗುತ್ತಿದ್ದರೆ, ಇಎನ್ಟಿ (ENT) ವೈದ್ಯರನ್ನು ಭೇಟಿ ಮಾಡಿ, ಕ್ಲೀನ್ ಮಾಡಿಸಿಕೊಳ್ಳಿ.
ವೈದ್ಯರು ಹೇಳಿದ್ರೆ ಮಾತ್ರ ಕಿವಿಗೆ ಎಣ್ಣೆ ಹಾಕಿ
ಹಿಂದಿನ ಕಾಲದಲ್ಲಿ ಕಿವಿ ನೋವು ಎಂದರೆ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಕಾಯಿಸಿ ಬೆಚ್ಚಗಾದ ನಂತರ ಅದನ್ನು ಕಿವಿಗೆ ಹಾಕುತ್ತಿದ್ದರು ನಮ್ಮ ಹಿರಿಯರು. ಆದರೆ ಆ ಕ್ರಮವೇ ತಪ್ಪು ಎನ್ನುತ್ತಾರೆ ವೈದ್ಯರು. ಕಿವಿಗೆ ಎಣ್ಣೆ ಹಾಕುವುದರಿಂದ ಬ್ಯಾಕ್ಟೀರಿಯಾ ಉದ್ಭವಿಸಿ, ಸೋಂಕು ಸಂಭವಿಸಬಹುದು.
ಡ್ರಾಪ್ಸ್, ಮಾತ್ರೆ ನುಂಗಬೇಡಿ
ಕಿವಿಯಲ್ಲಿ ಸೋರಿಕೆ, ಕಿರಿಕಿರಿಯಾಗುವ ಸಮಯದಲ್ಲಿ ಮೆಡಿಕಲ್ಸ್ನಲ್ಲಿ ಸಿಗುವ ಇಯರ್ ಡ್ರಾಪ್ಸ್ ಅಥವಾ ನೋವು ತಡೆಯಲಾಗದೆ ಮಾತ್ರೆಯನ್ನು ತೆಗೆದುಕೊಂಡು ನುಂಗಬೇಡಿ. ಅದು ವೈದ್ಯರ ಸಲಹೆ ಇಲ್ಲದೆ. ಕಾರಣ, ಇದು ಶಾಶ್ವತವಾಗಿ ಶ್ರವಣ ದೋಷಕ್ಕೆ ಕಾರಣವಾಗಬಹುದು.
ಏನಿದು 60:60 ಅನುಪಾತ?
ವಾಕಿಂಗ್ ಮಾಡುವಾಗ, ಕೆಲಸ, ಬಸ್ ಪ್ರಯಾಣ, ಲಾಂಗ್ ರೈಡ್ ಹೀಗೆ ಎಲ್ಲ ಸಮಯದಲ್ಲೂ ಹೆಚ್ಚು ಸೌಂಡ್ ಹಾಕಿಕೊಂಡು ಸಾಂಗ್ ಕೇಳುವುದೊಂದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಇಂತಹ ಕ್ರಮ ಕಿವಿಗೆ ಹಾನಿ ಮಾಡುತ್ತದೆ. ಹೀಗಾಗಿ, 60:60 ಅನುಪಾತವನ್ನು ಫಾಲೋ ಮಾಡಿ. ಅರವತ್ತು ಪರ್ಸೆಂಟ್ಗಿಂತ ಕಡಿಮೆ ವಾಲ್ಯೂಮ್ ಇಟ್ಟು, ಹಾಡು ಕೇಳುವುದು ಮತ್ತು 60 ನಿಮಿಷಗಳ ಅನುಸಾರ ಕಿವಿಗೆ ಬ್ರೇಕ್ ಕೊಡುವುದು ಉತ್ತಮ ಎನ್ನಲಾಗಿದೆ.
ಕಿವಿಗೂ ಬೇಕು ವ್ಯಾಯಾಮ
ಕಿವಿಯಲ್ಲಿ ಸಮಸ್ಯೆಯಾಗುವುದನ್ನು ತಡೆಗಟ್ಟಲು ಆಗಾಗ್ಗೆ ಅದಕ್ಕೊಂದಷ್ಟು ವ್ಯಾಯಾಮ ಮಾಡಿ. ಕಿವಿ ಮಸಾಜ್ ಮಾಡುವುದು, ಸಮಯ ಸಿಕ್ಕಾಗ ದವಡೆ ಮತ್ತು ಕುತ್ತಿಗೆ ಭಾಗದಲ್ಲಿ ಮಸಾಜ್ ಮಾಡುವುದು. ಒಂದು ಬದಿಯಿಂದ ಮತ್ತೊಂದು ಬದಿಗೆ ಕುತ್ತಿಗೆ ತಿರುಗಿಸುವುದು. 10 ನಿಮಿಷ ಕಿವಿ ಮುಚ್ಚಿಕೊಳ್ಳುವಂತಹ ಅಭ್ಯಾಸಗಳು ನಿಮ್ಮ ಕಿವಿಯ ಆರೋಗ್ಯವನ್ನು ಕಾಪಾಡುತ್ತದೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.