ಒತ್ತಡದ ಬದುಕಿನಲ್ಲಿ ಕೆಲವೊಮ್ಮೆ ಮಾನಸಿಕ ಒತ್ತಡವು ಹೆಚ್ಚಾದಾಗ ಮನಸ್ಸು ತೀವ್ರವಾದ ಆಂತರಿಕ ತಳಮಳದಿಂದ ಒಮ್ಮೆಲೇ ಸಂಪೂರ್ಣ ಶೂನ್ಯ ಅಥವಾ 'ಭಾವನಾತ್ಮಕ ಸ್ತಬ್ಧತೆ'ಯ ಸ್ಥಿತಿಗೆ ಜಾರಬಹುದು. ಇದನ್ನು ಅರ್ಥಮಾಡಿಕೊಳ್ಳಲು ನಮ್ಮ ಮನಸ್ಸನ್ನು ಮನೆಯೊಂದರ ವಿದ್ಯುತ್ ವ್ಯವಸ್ಥೆಗೆ ಹೋಲಿಸಿ. ಒತ್ತಡ, ಆತಂಕ ಅಥವಾ ನೋವಿನ ನೆನಪುಗಳು ಒಮ್ಮೆಲೇ ಮಿತಿಮೀರಿ ಬಂದಾಗ, ಮೆದುಳಿನ ವ್ಯವಸ್ಥೆ ಅತಿಯಾಗಿ ಬಿಸಿಯಾಗುತ್ತದೆ. ಆಗ ಸಂಪೂರ್ಣ ವ್ಯವಸ್ಥೆ ಕುಸಿದುಬೀಳುವುದನ್ನು ತಡೆಯಲು, ನಿಮ್ಮ ನರಮಂಡಲವು ತನ್ನದೇ ಆದ 'ಸೇಫ್ಟಿ ಸರ್ಕ್ಯೂಟ್ ಬ್ರೇಕರ್' ಅನ್ನು ಟ್ರಿಪ್ ಮಾಡಿ, ಪವರ್ ಆಫ್ ಮಾಡುತ್ತದೆ.
ಜೈವಿಕವಾಗಿ ಹೇಳುವುದಾದರೆ, ಭಾರಿ ಒತ್ತಡ ಎದುರಾದಾಗ ನಿಮ್ಮ ದೇಹವು ಮೊದಲು ʼಹೋರಾಡು ಅಥವಾ ಓಡಿಹೋಗುʼ ಸ್ಥಿತಿಗೆ ತಲುಪುತ್ತದೆ. ಈ ಹಂತದಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ ಮತ್ತು ಆಲೋಚನೆಗಳು ಚದುರಿಹೋಗುತ್ತವೆ. ಆದರೆ, ಆ ಆಂತರಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದಾಗ, ನಿಮ್ಮ ನರಮಂಡಲವು 'ಹೈಪೋಅರೌಸಲ್' (Hypoarousal) ಅಥವಾ 'ಭಾವನಾತ್ಮಕ ಪ್ರತ್ಯೇಕತೆ' (Dissociation) ಎಂಬ ಪ್ರಾಚೀನ ರಕ್ಷಣಾ ವ್ಯವಸ್ಥೆಗೆ ಜಾರುತ್ತದೆ. ಸರಳವಾಗಿ ಹೇಳಬೇಕೆಂದರೆ, ಯಾವುದೇ ನೋವು ತಿಳಿಯದಂತೆ ನಿಮ್ಮ ಮೆದುಳು ಎಮರ್ಜೆನ್ಸಿ ಬ್ರೇಕ್ ಹಾಕುತ್ತದೆ. ಇದರಿಂದ ನೀವು ಎಲ್ಲದರಿಂದಲೂ ದೂರವಾದಂತೆ ಮತ್ತು ಸಂಪೂರ್ಣ ಶೂನ್ಯವಾದಂತೆ ಭಾಸವಾಗುತ್ತದೆ.
ಮನಸ್ಸು ದಿಢೀರನೆ ಹೀಗೆ ಮರಗಟ್ಟುವಿಕೆಗೆ ಜಾರುವುದು ಆಕಸ್ಮಿಕವಲ್ಲ. ಇದು ಹೆಚ್ಚಾಗಿ ನಮ್ಮ ಹಿಂದಿನ ಕಹಿ ಅನುಭವಗಳು ಅಥವಾ ಆಘಾತಗಳಿಗೆ ಮೆದುಳು ಕಂಡುಕೊಂಡ ಒಂದು ರಕ್ಷಣಾ ತಂತ್ರವಾಗಿರುತ್ತದೆ. ಬಾಲ್ಯದಲ್ಲಿ ಅನುಭವಿಸಿದ ನಿರ್ಲಕ್ಷ್ಯ, ಅಸ್ಥಿರ ವಾತಾವರಣ ಅಥವಾ ಭಾವನೆಗಳನ್ನು ವ್ಯಕ್ತಪಡಿಸಿದಾಗ ಸಿಕ್ಕ ಶಿಕ್ಷೆ ಮತ್ತು ಅವಮಾನಗಳು ಇದಕ್ಕೆ ಮುಖ್ಯ ಕಾರಣವಾಗುತ್ತವೆ.
ಹೀಗಾಗಿ, ವಯಸ್ಸಾದ ಮೇಲೂ ಕಚೇರಿಯ ಗಲಾಟೆ ಅಥವಾ ಸಂಗಾತಿಯೊಂದಿಗಿನ ಜಗಳದಂತಹ ಸಾಮಾನ್ಯ ಒತ್ತಡಗಳನ್ನೂ ಮೆದುಳು 'ದೊಡ್ಡ ಅಪಾಯ' ಎಂದು ತಪ್ಪಾಗಿ ಭಾವಿಸಿ, ನಿಮ್ಮನ್ನು ಕಾಪಾಡಲು ತಾನಾಗಿಯೇ ಭಾವನೆಗಳನ್ನು ಸ್ತಬ್ಧಗೊಳಿಸುತ್ತದೆ.
ಈ ಸಂದರ್ಭಗಳಲ್ಲಿ ನಮ್ಮ ಅರಿವಿಗೆ ಬಾರದ ಸುಪ್ತ ಮನಸ್ಸಿನ (Unconscious mind) ಪಾತ್ರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಪ್ರಜ್ಞಾಹೀನ ಮನಸ್ಸಿಗೆ ಹಿಂದಿನ ಅನೇಕ ಕಹಿ ಅನುಭವಗಳ ಅರಿವಿರುತ್ತದೆ, ಆದರೆ ಅದು ನಮ್ಮ ಜಾಗೃತ ಮನಸ್ಸಿಗೆ (Conscious mind) ತಿಳಿದಿರುವುದಿಲ್ಲ.
ಭಾವನಾತ್ಮಕ ಸ್ತಬ್ಧತೆ ಎಂಬುದು ಸ್ವತಃ ಒಂದು ಪ್ರತ್ಯೇಕ ಕಾಯಿಲೆಯಲ್ಲ, ಬದಲಾಗಿ ಅದೊಂದು 'ಬದುಕುಳಿಯುವ ಪ್ರತಿಕ್ರಿಯೆ' (Survival response). ಇದು ಸಾಮಾನ್ಯವಾಗಿ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ), ತೀವ್ರ ಆತಂಕ, ಭಾರಿ ಖಿನ್ನತೆ ಅಥವಾ ಪರಿಹರಿಸಲಾಗದ ಹಿಂದಿನ ಆಘಾತಗಳ ಲಕ್ಷಣವಾಗಿರುತ್ತದೆ.
ಜೀವನದಲ್ಲಿ ಎಂದೋ ಒಮ್ಮೆ ಭಾರಿ ಬಿಕ್ಕಟ್ಟು ಎದುರಾದಾಗ ಮಾತ್ರ ಮನಸ್ಸು ಹೀಗೆ ಸ್ತಬ್ಧವಾದರೆ, ಅದು ಮೆದುಳಿನ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಎನ್ನಬಹುದು. ಆದರೆ, ನೀವೋ ಅಥವಾ ನಿಮ್ಮ ಆಪ್ತರೋ ಪದೇ ಪದೇ ಶೂನ್ಯಕ್ಕೆ ಜಾರುತ್ತಿದ್ದರೆ, ಪ್ರೀತಿಪಾತ್ರರಿಂದ ದೂರ ಸರಿಯುತ್ತಿದ್ದರೆ, ನರಮಂಡಲವು ದೀರ್ಘಕಾಲದ ಒತ್ತಡಕ್ಕೆ ಸಿಲುಕಿದೆ ಮತ್ತು ಅದಕ್ಕೆ ತಜ್ಞರ ಆರೈಕೆಯ ಅಗತ್ಯವಿದೆ ಎಂದರ್ಥ.
ಇದರಿಂದ ಸಂಬಂಧಗಳಲ್ಲಿ ಅಂತರ ಸೃಷ್ಟಿಯಾಗುತ್ತದೆ. ನಿಮ್ಮ ಮೌನವನ್ನು ನಿಮ್ಮ ಆಪ್ತರು 'ಪ್ರೀತಿಯ ಕೊರತೆ' ಅಥವಾ 'ನಿರ್ಲಕ್ಷ್ಯ' ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಜೊತೆಗೆ, ಹೀಗೆ ಮಾಡುವುದರಿಂದ ಮೂಲ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದೆ, ಆಂತರಿಕ ಒತ್ತಡ ಹಾಗೆಯೇ ಉಳಿಯುತ್ತದೆ.
ಭಾವನಾತ್ಮಕ ಸ್ತಬ್ಧತೆ ಎಂಬುದು ಮೆದುಳಿನ ರಕ್ಷಣಾ ವ್ಯವಸ್ಥೆಯೇ ಹೊರತು, ನಿಮ್ಮ ವೈಯಕ್ತಿಕ ದೋಷವಲ್ಲ ಎಂಬುದನ್ನು ಅರಿತುಕೊಳ್ಳುವುದೇ ಚೇತರಿಕೆಯ ಮೊದಲ ಹೆಜ್ಜೆ.
ಮೊದಲನೇ ಪರಿಹಾರ ಸೋಮ್ಯಾಟಿಕ್ ಗ್ರೌಂಡಿಂಗ್ (Somatic Grounding). ಮಾನಸಿಕ ಒತ್ತಡದ ಬಿರುಗಾಳಿ ಶುರುವಾಗುತ್ತಿದೆ ಎನಿಸಿದ ಕೂಡಲೇ, ನಿಮ್ಮ ಪಾದಗಳನ್ನು ನೆಲದ ಮೇಲೆ ಗಟ್ಟಿಯಾಗಿ ಊರಿರಿ. ಕೈಗಳ ಮೇಲೆ ತಣ್ಣೀರು ಹರಿಸಿಕೊಳ್ಳಿ ಅಥವಾ ಉಪ್ಪು ನೀರಿನ ಧ್ಯಾನ ಮಾಡಿ.
ಎರಡನೆಯದ್ದು ತಜ್ಞರ ನೆರವು. ನಿಮ್ಮ ಹಿಂದಿನ ಆಘಾತಗಳನ್ನು ಸುರಕ್ಷಿತವಾಗಿ ನಿಭಾಯಿಸಲು ಸಿಬಿಟಿ, ಇಎಮ್‌ಡಿಆರ್, ಅಥವಾ ಸೋಮ್ಯಾಟಿಕ್ ಎಕ್ಸ್‌ಪೀರಿಯೆನ್ಸಿಂಗ್‌ನಂತಹ ಚಿಕಿತ್ಸೆಗಳನ್ನು ನೀಡುವ ಪರಿಣಿತ ಮನೋವೈದ್ಯರ ನೆರವು ಪಡೆಯಿರಿ.
ಮೂರನೆಯದಾಗಿ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಆಳವಾದ ಉಸಿರಾಟದ ವ್ಯಾಯಾಮ, ನಿಯಮಿತ ದೈಹಿಕ ಚಟುವಟಿಕೆ ಮೂಲಕ ನಿಮ್ಮ ನರಮಂಡಲವನ್ನು ಪ್ರತಿದಿನ ಬೆಂಬಲಿಸಿ.
ನೀವು ಇತರರಿಗೆ ಹೇಗೆ ನೆರವಾಗಬಹುದು? ನಿಮ್ಮ ಆಪ್ತರು ದಿಢೀರನೆ ಮೌನಕ್ಕೆ ಶರಣಾಗಿದ್ದರೆ, ತಕ್ಷಣವೇ "ಮಾತನಾಡು" ಎಂದು ಬಲವಂತ ಮಾಡಬೇಡಿ. ಅವರನ್ನು ಯಾವುದೇ ರೀತಿ ಜಡ್ಜ್ ಮಾಡದೆ, ಶಾಂತವಾಗಿ ಅವರ ಜೊತೆಗಿರಿ. ಅವರು ಮತ್ತೆ ಸಹಜ ಸ್ಥಿತಿಗೆ ಮರಳಲು ಅವರ ದೇಹಕ್ಕೆ ಸ್ವಲ್ಪ ಸಮಯ ಮತ್ತು ಅವಕಾಶ ನೀಡಿ. ಕೇವಲ ಅವರ ಜೊತೆಗಿರುವುದೇ ಅವರಿಗೆ ಅತ್ಯಂತ ಸುರಕ್ಷಿತ ಭಾವನೆ ತಂದುಕೊಡುತ್ತದೆ.
ಗಮನಿಸಿ: ಈ ಮಾಹಿತಿಯನ್ನು ವೈದ್ಯರಾದ ಸಾಲ್ ಪೆರೇರಾ ಅವರು ಕೊಟ್ಟಿರುವ ಮಾಹಿತಿಯಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.