Sleep Health (ಸಾಂದರ್ಭಿಕ ಚಿತ್ರ) 
ಆರೋಗ್ಯ

ರಾತ್ರಿ ಪೂರ್ತಿ ಎಚ್ಚರವಿರುವ ಅಭ್ಯಾಸವಿದೆಯೇ? ಈ ಮಾರಕ ಕಾಯಿಲೆಗಳು ನಿಮ್ಮನ್ನು ಕಾಡಬಹುದು.. ಎಚ್ಚರ! Sleep Health

ಪ್ರಮುಖ ಮುಖ್ಯಾಂಶಗಳು

  • ಒತ್ತಡ ಜೀವನಶೈಲಿ, ಅಪೌಷ್ಟಿಕ ಆಹಾರ, ಚಿಂತೆಗಳಿಂದ ಹೆಚ್ಚಿನ ಜನರು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ
  • ಸರಿಯಾದ ನಿದ್ರೆಯಿಲ್ಲದಿರುವಾಗ ಬೆಳಿಗ್ಗೆ ಎದ್ದ ತಕ್ಷಣ ದಣಿದ ಅನುಭವವಾಗುವುದು ಬಹುತೇಕರ ಸಮಸ್ಯೆ
  • ಆರೋಗ್ಯಕರ ದೇಹಕ್ಕೆ ಸಮತೋಲಿತ ಆಹಾರ ಮತ್ತು ವ್ಯಾಯಾಮದಷ್ಟೇ ಸಾಕಷ್ಟು ನಿದ್ರೆ ಕೂಡಾ ಅಗತ್ಯ
  • ಪ್ರತಿಯೊಬ್ಬ ಮನುಷ್ಯನೂ ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ ಎಂದು ವಿಜ್ಞಾನ ತಿಳಿಸುತ್ತೆ
Sleep Health: ಇತ್ತೀಚಿನ ದಿನಗಳಲ್ಲಿ ಒತ್ತಡ ಜೀವನಶೈಲಿ, ಅಪೌಷ್ಟಿಕ ಆಹಾರ, ಚಿಂತೆಗಳಿಂದ ಹೆಚ್ಚಿನ ಜನರು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರಿಯಾದ ನಿದ್ರೆಯಿಲ್ಲದಿರುವಾಗ ಬೆಳಿಗ್ಗೆ ಎದ್ದ ತಕ್ಷಣ ದಣಿದ ಅನುಭವವಾಗುವುದು, ಕೆಲಸದಲ್ಲಿ ಗಮನ ಹರಿಸಲಾಗದಿರುವುದು ಮತ್ತು ದಿನವಿಡೀ ಆಲಸ್ಯ ಕಾಡುವುದು ಬಹುತೇಕರ ಸಮಸ್ಯೆಯಾಗಿದೆ.
ಆರೋಗ್ಯಕರ ದೇಹಕ್ಕೆ ಸಮತೋಲಿತ ಆಹಾರ ಮತ್ತು ವ್ಯಾಯಾಮದಷ್ಟೇ ಸಾಕಷ್ಟು ನಿದ್ರೆ ಕೂಡಾ ಅಗತ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನೂ ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ ಎಂದು ವಿಜ್ಞಾನ ತಿಳಿಸುತ್ತದೆ. 
ಆದಾಗ್ಯೂ, ಆಧುನಿಕ ಜೀವನಶೈಲಿ ಮತ್ತು ಪರದೆಗಳ ಮುಂದೆ ಕಳೆಯುವ ಅತಿಯಾದ ಸಮಯವು ಜನರ ನಿದ್ರೆಯನ್ನು ಕಸಿದುಕೊಂಡು ದೇಹಕ್ಕೆ ಒತ್ತಡ ನೀಡಲು ಪ್ರಾರಂಭಿಸುತ್ತದೆ.  ನಿದ್ರೆಯ ಸಮಯದಲ್ಲಿ, ದೇಹದ ವಿವಿಧ ಅಂಗಗಳು ದುರಸ್ಥಿ ಕೆಲಸವನ್ನು ಪೂರ್ಣಗೊಳಿಸುತ್ತವೆ.  ನೀವೇನಾದರೂ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಮುಖ್ಯ.

ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳು

ದೀರ್ಘಕಾಲದ ನಿದ್ರಾಹೀನತೆಯು ನಿಮ್ಮ ಮಾನಸಿಕ ಏಕಾಗ್ರತೆಯನ್ನು ಹಾನಿ ಮಾಡುವುದಲ್ಲದೇ, ನಿಮ್ಮ ದೇಹದ ಚಯಾಪಚಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಚಿಕಿತ್ಸೆ ಪಡೆದರೂ ಕಡಿಮೆಯಾಗದೇ ಇರುವಂತಹ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.

ಹೃದಯ ರೋಗ

ನಿದ್ರೆಯ ಕೊರತೆಯು ರಕ್ತದೊತ್ತಡವನ್ನು ಹೆಚ್ಚಿಸಿ, ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇದು ರಕ್ತನಾಳಗಳ ಕಾರ್ಯಕ್ಷಮತೆಯನ್ನು ಕುಗ್ಗಿಸಿ, ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ದೀರ್ಘಕಾಲದ ನಿದ್ರಾ ಹೀನತೆಯು ಪಾರ್ಶ್ವವಾಯು, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಟೈಪ್ 2 ಮಧುಮೇಹ

ನಿದ್ರೆಯ ಕೊರತೆಯು ದೇಹದಲ್ಲಿ 'ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಸರಿಯಾಗಿ ನಿದ್ರಿಸದಿದ್ದಾಗ ದೇಹವು ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾಗುತ್ತದೆ. ಇದು ಹಸಿವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಪ್ರೇರೇಪಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಬೊಜ್ಜು

ನಿದ್ರೆ ಅಪೂರ್ಣವಾದಾಗ 'ಲೆಪ್ಟಿನ್' ಮತ್ತು 'ಗ್ರೆಲಿನ್' ನಂತಹ ಹಾರ್ಮೋನುಗಳ ಸಮತೋಲನವನ್ನು ಹೆಚ್ಚಿಸುತ್ತದೆ. ಇದರಿಂದ ಅತಿಯಾದ ಆಹಾರ ಸೇವನೆ, ಜಂಕ್​ಫುಡ್​ ಮೇಲೆ ಅವಲಂಬನೆ ಹೆಚ್ಚಾಗುತ್ತದೆ. ಅಲ್ಲದೆ, ನಿದ್ರೆಯಿಲ್ಲದ ದೇಹವು ಕ್ಯಾಲೊರಿಗಳನ್ನು ದಹಿಸಲು ವಿಫಲವಾಗಿ, ದೇಹದ ತೂಕ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ. 

ಮಾನಸಿಕ ಸಮಸ್ಯೆಗಳು

ನಿದ್ರಾಹೀನತೆ ಮೆದುಳಿನ ಭಾವನಾತ್ಮಕ ನಿಯಂತ್ರಣ ಕೇಂದ್ರದ ಮೇಲೆ ಪರಿಣಾಮ ಬೀರಲಿದ್ದು, ಅತಿಯಾದ ಕೋಪ, ಹತಾಶೆ, ದುಃಖ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುವಂತೆ ಮಾಡುತ್ತದೆ. ಇದರಿಂದ ಗಂಭೀರ ಮಾನಸಿಕ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.

ದುರ್ಬಲ ರೋಗನಿರೋಧಕ ಶಕ್ತಿ

ನಿದ್ರೆಯ ಸಮಯದಲ್ಲಿ ನಮ್ಮ ದೇಹವು ಸೈಟೋಕಿನ್ ಎಂಬ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಸೋಂಕು ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿದ್ರೆಯ ಕೊರತೆಯಿಂದ ಈ ಪ್ರೋಟೀನ್‌ಗಳ ಉತ್ಪಾದನೆ ಕಡಿಮೆಯಾಗಿ, ದೇಹದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ದೇಹವು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.