- ರೀಲ್ಸ್ ನೋಡುವುದು ಮೆದುಳಿನ ಕಾರ್ಯವೈಖರಿಯನ್ನು ಬದಲಾಯಿಸಿ ವ್ಯಸನಕ್ಕೆ ದೂಡುತ್ತಿದೆ
- ಸಣ್ಣ ವಿಡಿಯೋಗಳ ಪ್ರಭಾವದಿಂದ ದೀರ್ಘಾವಧಿಯ ಏಕಾಗ್ರತೆ ಸಾಧ್ಯವಾಗುತ್ತಿಲ್ಲ.
- ನಿದ್ರಾಹೀನತೆ, ಆತಂಕ ಮತ್ತು ಮಾನಸಿಕ ಅಸ್ಥಿರತೆಗೆ ಇದು ಪ್ರಮುಖ ಕಾರಣ
Reels Side Effects: ಕೋವಿಡ್ ನಂತರ ಮಕ್ಕಳು ಸೇರಿದಂತೆ ಹಿರಿಯರು ಮೊಬೈಲ್ ಅನ್ನು ತಮ್ಮ ಅರ್ಧಾಂಗಿಯಂತೆ ಕಾಣುತ್ತಿದ್ದಾರೆ. ಬೆಳಗ್ಗೆ ಕಣ್ಬಿಟ್ಟು ಹಾಸಿಗೆಯಿಂದ ಮೇಲೆ ಏಳುವ ತನಕ ಒಂದೆರಡು ರೀಲ್ಸ್ ನೋಡಿ..ಆಫೀಸ್ಗೆ ಹೋಗುವಾಗ, ತಿನ್ನುವಾಗ..ಫ್ರೀ ಟೈಂನಲ್ಲಿ ರೀಲ್ಸ್ ನೋಡದೆ ಬಿಟ್ಟಿರಲಾರದಷ್ಟು ಸಂಬಂಧವನ್ನು ಅದರೊಂದಿಗೆ ಬೆಳೆಸಿಕೊಂಡಿದ್ದೇವೆ.
ಫ್ಯಾಷನ್, ಹಾಸ್ಯ, ಫಿಟ್‌ನೆಸ್, ವೈರಲ್ ವಿಡಿಯೋಸ್, ಡ್ಯಾನ್ಸ್, ಅಡುಗೆ ಹೀಗೆ ಎಲ್ಲ ರೀತಿಯ ರೀಲ್ಸ್ಗಳು ಎಲ್ಲಾ ವಯೋಮಾನದವರಲ್ಲಿ ಹೆಚ್ಚು ಬಳಕೆಯಾಗುವ ಡಿಜಿಟಲ್ ಮನರಂಜನೆಯ ರೂಪಗಳಲ್ಲಿ ಒಂದಾಗಿದೆ. ಕೆಲವು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಅನ್ನು ಫೋಟೋ ಮತ್ತು ಸವಿ ಕ್ಷಣ ಹಂಚಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇಂದು, ಸೆಕೆಂಡುಗಳಲ್ಲಿ ಗಮನ ಸೆಳೆಯಲು ನಾನಾ ರೀತಿಯಲ್ಲಿ ಬಳಕೆಯಾಗುತ್ತಿದೆ.
ಆದರೆ, ನಿತ್ಯ ರೀಲ್ಸ್ ಸಮಯ ಎಷ್ಟರ ಮಟ್ಟಿಗೆ ವ್ಯರ್ಥಮಾಡಿದೆ ಎಂದು ತಿಳಿಯದೇ ಸ್ಕ್ರೋಲ್ ಮಾಡುತ್ತಲೇ ಇರುವುದು ಹವ್ಯಾಸವಾಗಿ ಬದಲಾಗಿದೆ. ರೀಲ್ಸ್ನಲ್ಲಿ ಸೆಕೆಂಡಿಗೆ ಬದಲಾಗುವ ವಿಚಾರಗಳು ಮೆದುಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು. ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ
ರೀಲ್ಸ್ ನೋಡಿದ್ರೆ ಏನಾಗುತ್ತದೆ?
ತಜ್ಞರ ಪ್ರಕಾರ ನಿತ್ಯ ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಯೂಟ್ಯೂಬ್ ಶಾರ್ಟ್ಸ್ ನೋಡುವ ಅಭ್ಯಾಸವು ಮಾನವನ ಮೆದುಳನ್ನು 'ರಿವೈರ್' ಮತ್ತು ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.
15-20 ಸೆಕೆಂಡಿನ ವಿಡಿಯೋ ನೋಡುತ್ತಾ ಇದ್ದರೆ. ಇದು ಮಾನವನ ಭಾವನಾತ್ಮಕ ಚಿಂತನೆಗಳ ಮೇಲೂ ಸಮಸ್ಯೆಯನ್ನುಂಟು ಮಾಡುತ್ತದೆ. ಮೆದುಳು ಅಲ್ಪಾವಧಿ ತೃಪ್ತಿಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಕಾರಣ, ದೀರ್ಘ ಕಾಲ ಒಂದು ವಿಚಾರದ ಮೇಲೆ ಕೇಂದ್ರಿಕರಿಸಲು ಕಷ್ಟವಾಗುತ್ತದೆ. ಓದುವುದು, ಕೆಲಸ ಮಾಡುವುದು ಅಥವಾ ದೀರ್ಘ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರೋದು ಹೇಗೆ?
ವೇಗವಾಗಿ ಮಾಹಿತಿ ನೀಡುವ ರೀಲ್ಸ್ಗಳನ್ನು ನೋಡಿ ನೋಡಿ ದೀರ್ಘ ಕಾಲ ಓದುವ ಅಥವಾ ಸಿನಿಮಾ ನೋಡಲು, ಕೆಲಸ ಮಾಡಲು ಕಡಿಮೆ ಮಾಡಿ, ಪ್ರತಿ ಗಂಟೆಗೂ ನವೀನತೆಯನ್ನು ಮೆದುಳು ಆಶಿಸುತ್ತದೆ. ಪ್ರತಿ ಬಾರಿ ಹೆಚ್ಚೆಚ್ಚು ಹೊಸ ರೀಲ್ ನೋಡಿದಾಗ ನಮ್ಮ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ನಮಗೆ ಕ್ಷಣಿಕ ಸಂತೋಷವನ್ನು ನೀಡುತ್ತದೆ.
ಸತತವಾಗಿ ಇಂತಹ ಸಣ್ಣ ತುಣುಕುಗಳನ್ನು ನೋಡುವುದರಿಂದ ಮೆದುಳು ವೇಗವಾದ ಮತ್ತು ಸಣ್ಣ ಮಾಹಿತಿಗಳಿಗಷ್ಟೇ ಸ್ಪಂದಿಸಲು ಕಲಿಯುತ್ತದೆ.ಇದರಿಂದಾಗಿ ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಆಳವಾದ ಆಲೋಚನಾ ಶಕ್ತಿ ಕಡಿಮೆಯಾಗುತ್ತದೆ. ದಿನವಿಡೀ ಕಿರು ವಿಡಿಯೋಗಳನ್ನು ನೋಡುವುದರಿಂದ ಮೆದುಳು ಸತತವಾಗಿ ಪ್ರಚೋದನೆಗೆ ಒಳಗಾಗಿ ಬೇಗನೆ ಸುಸ್ತಾಗುತ್ತದೆ.
ಯುವಜನರಿಗೆ ಕಾಡ್ತಿದೆ ನಿದ್ರೆಯ ಸಮಸ್ಯೆ
ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಓದಿನ ಕಡೆ ಗಮನ ಹರಿಸಲು ಸಾಧ್ಯವಾಗದಿರುವುದು, ಅಷ್ಟೇ ಅಲ್ಲದೇ ಕಣ್ಣಿಗೆ ವಿಶ್ರಾಂತಿ ನೀಡದೆ ಸ್ಕ್ರೀನ್ ಸ್ಕ್ರೋಲ್ ಮಾಡುವ ಕಾರಣ ಕಿರಿಕಿರಿ ಮತ್ತು ನಿದ್ರಾಹೀನತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಕೇವಲ ಮನರಂಜನೆಯಲ್ಲ, ಬದಲಾಗಿ ಒಂದು ರೀತಿಯ 'ಡಿಜಿಟಲ್ ವ್ಯಸನ'ವಾಗಿ ಪರಿಣಮಿಸುತ್ತಿದೆ ಎಂದು ವೈದ್ಯರು ವಿವರಿಸಿದ್ದಾರೆ, (ಏಜೆನ್ಸೀಸ್).