ಸಾಂದರ್ಭಿಕ ಚಿತ್ರ  
ಆರೋಗ್ಯ

ಹಸುವಿನ ಹಾಲಿನ ಮೂಲಕ ರೇಬೀಸ್ ಹರಡುತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ...Cow Milk

ಪ್ರಮುಖ ಮುಖ್ಯಾಂಶಗಳು

  • ರೇಬೀಸ್​ ಸೋಂಕಿತ ಹಸುವಿನ ಹಾಲು ಕುಡಿದರೆ ರೇಬೀಸ್​ ಹರಡುತ್ತಾ?
  • ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಹೀಗೊಂದು ಚರ್ಚೆ
  • ಹಾಲನ್ನು ಪಾಶ್ಚರೀಕರಿಸಿದರೆ ಯಾವುದೇ ಸೋಂಕು ತಗುಲುವುದಿಲ್ಲ ಎಂದ ತಜ್ಞರು
Cow Milk : ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಹಸುವೊಂದು ರೇಬೀಸ್‌ನಿಂದ ಸಾವಿಗೀಡಾಗಿತ್ತು. ಮೂರು ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದ ಹಸು ಮೃತಪಟ್ಟ ಸುದ್ದಿ ಕೇಳಿ ಗ್ರಾಮಸ್ಥರಲ್ಲಿ ಭಾರಿ ಆತಂಕ ಮೂಡಿತು. ಏಕೆಂದರೆ, ಧಾರ್ಮಿಕ ಸಮಾರಂಭವೊಂದರಲ್ಲಿ ಸತ್ತು ಹಸುವಿನ ಹಾಲಿನಿಂದ ಪಂಚಾಮೃತವನ್ನು ತಯಾರಿಸಲಾಗಿತ್ತು. ಗ್ರಾಮದಲ್ಲಿ ಸುಮಾರು 200 ಜನರು ಆ ಪಂಚಾಮೃತವನ್ನು ಸೇವಿಸಿದ್ದರು. ಇದನ್ನರಿತ ಆರೋಗ್ಯ ತಜ್ಞರು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಸ್ಥರಿಗೆ ತಕ್ಷಣವೇ ರೇಬೀಸ್ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದರು.
ವರದಿಗಳ ಪ್ರಕಾರ, ಗೋರಖ್‌ಪುರದ 170ಕ್ಕೂ ಹೆಚ್ಚು ಗ್ರಾಮಸ್ಥರು ರೇಬೀಸ್ ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (PEP) ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದಾರೆ. ಇಷ್ಟೊಂದು ತಳಮಳಕ್ಕೆ ಇನ್ನೊಂದು ಕಾರಣವಿದೆ. ಅದೇನೆಂದರೆ, ಕಳೆದ ಮಾರ್ಚ್‌ ತಿಂಗಳಲ್ಲಿ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ರೇಬೀಸ್​ ಸೋಂಕಿತ ಹಸುವಿನ ಹಾಲು ಕುಡಿದು ಮೃತಪಟ್ಟರು ಎಂಬ ಸುದ್ದಿ ಹರಿದಾಡಿತು. ಆದಾಗ್ಯೂ, ಆ ಮಹಿಳೆ ರೇಬೀಸ್​ ಹಸುವಿನ ಹಾಲು ಕುಡಿದು ಸಾವಿಗೀಡಾಗಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆ ಮಹಿಳೆ ಸೇವಿಸಿದ ಹಾಲು ಪಾಶ್ಚರೀಕರಿಸಲ್ಪಟ್ಟಿದೆಯೇ? ಅಥವಾ ಕಚ್ಛಾ ಹಾಲೇ? ಎಂಬುದನ್ನು ವರದಿಗಳು ಸ್ಪಷ್ಟಪಡಿಸಿಲ್ಲ. ಮಹಿಳೆಗೆ ಹಾಲಿನಿಂದಲೇ ರೇಬೀಸ್ ವೈರಸ್ ಬಂದಿದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಅಧಿಕೃತ ದೃಢೀಕರಣ ಅಥವಾ ವೈದ್ಯಕೀಯ ಸಾಕ್ಷ್ಯವಿರಲಿಲ್ಲ. ಆದರೆ, ಸ್ಥಳೀಯವಾಗಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು ಮತ್ತು ಜನರಲ್ಲಿ ಭಾರೀ ಆತಂಕ ಮೂಡಿತು.

ಹಾಲಿನಿಂದ ರೇಬೀಸ್​ ಬರುತ್ತಾ?

ಈ ಹಿಂದೆಯೂ ರೇಬೀಸ್​ ಸೋಂಕಿತ ಹಸುಗಳಿಂದ ಕಚ್ಛಾ ಹಾಲು ಸೇವಿಸಿದ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)ನ ಅಧಿಕೃತ ವೆಬ್‌ಸೈಟ್‌ನಲ್ಲಿ 1999 ಮಾರ್ಚ ತಿಂಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮ್ಯಾಸಚೂಸೆಟ್ಸ್‌ನಲ್ಲಿ ಎರಡು ಪ್ರತ್ಯೇಕ ಘಟನೆಗಳು ಸಂಭವಿಸಿವೆ. ಒಂದು 1996 ರಲ್ಲಿ ಮತ್ತು ಇನ್ನೊಂದು 1998 ರಲ್ಲಿ ನಡೆದ ಘಟನೆಗಳಾಗಿವೆ. ರೇಬೀಸ್ ಸೋಂಕಿತ ಹಸುಗಳ ಹಾಲನ್ನು ಡಜನ್‌ಗಟ್ಟಲೆ ಜನರು ಸೇವಿಸಿದರು. 1996 ರ ಘಟನೆಯಲ್ಲಿ 66 ಜನರು ಪಾಶ್ಚರೀಕರಿಸದ ಹಾಲನ್ನು ಸೇವಿಸಿದರು ಮತ್ತು 1998 ರಲ್ಲಿ 14 ಜನರು ಅದೇ ರೀತಿ ಮಾಡಿದರು. ಆ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾರ್ಷಿಕವಾಗಿ ಸರಾಸರಿ 150 ಜಾನುವಾರುಗಳು ರೇಬೀಸ್‌ನಿಂದ ಸಾಯುತ್ತಿದ್ದವು ಎಂದು ಸಿಡಿಸಿಗೆ ವರದಿ ಮಾಡಲಾಗುತ್ತಿತ್ತು. ಆದರೆ, ಹಸುಗಳ ಹಾಲನ್ನಾಗಲಿ ಅಥವಾ ಸ್ತನ ಅಂಗಾಂಶವನ್ನಾಗಲಿ ಪರೀಕ್ಷೆ ಮಾಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಅದೇ ಸಮಯದಲ್ಲಿ ಹಾಲಿನ ಮೂಲಕ ರೇಬೀಸ್ ವೈರಸ್ ಹರಡುವ ಸಾಧ್ಯತೆಯಿದೆ ಎಂದು ವರದಿ ಹೇಳಿತು. ಅಲ್ಲದೆ, ಹಾಲನ್ನು ಸರಿಯಾಗಿ ಪಾಶ್ಚರೀಕರಿಸಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ವರದಿ ಸೂಚಿಸಿತು.
ಇನ್ನು ಔಷಧ ತಜ್ಞ ಡಾ. ಅನುಜ್ ತಿವಾರಿ ಕೂಡ ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಇದೇ ವಿಷಯವನ್ನು ತಿಳಿಸಿದರು. ಹಾಲನ್ನು ಸರಿಯಾಗಿ ಪಾಶ್ಚರೀಕರಿಸಿದರೆ, ರೇಬೀಸ್ ವೈರಸ್ ಹರಡುವುದಿಲ್ಲ ಎಂದರು. ಇನ್ನು 1999ರ ಸಿಡಿಸಿ ವರದಿಯ ಪ್ರಕಾರ, ಪಾಶ್ಚರೀಕರಿಸದ ಹಾಲು ಕುಡಿಯುವುದರಿಂದ ರೇಬೀಸ್ ಸೋಂಕು ಸಂಭವಿಸಿದೆ ಎಂಬುದಕ್ಕೆ ಯಾವುದೇ ವರದಿಗಳಿಲ್ಲ ಹೇಳಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ವೆಬ್‌ಸೈಟ್ ಕೂಡ ಇದೇ ಮಾಹಿತಿಯನ್ನು ಉಲ್ಲೇಖಿಸಿದೆ. ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಂತರ ಯಾರೂ ರೇಬೀಸ್ ಸೋಂಕಿಗೆ ಒಳಗಾಗಿಲ್ಲ ಎಂದು ವರದಿ ಹೇಳುತ್ತದೆ. ಆದ್ದರಿಂದ, ರೇಬೀಸ್ ಹಸುಗಳಿಂದ ಹಾಲು ಕುಡಿಯುವುದಕ್ಕೆ ಲಸಿಕೆ ಹಾಕುವ ಅಗತ್ಯವಿಲ್ಲ. ರೇಬೀಸ್ ಹಸುಗಳಿಂದ ಹಾಲು ಕುಡಿಯುವುದರಿಂದ ರೇಬೀಸ್ ಸೋಂಕು ಹರಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳಲು ಮತ್ತು ವೈದ್ಯರನ್ನು ಭೇಟಿ ಮಾಡಲು ಸೂಚಿಸಲಾಗಿದೆ.

ಪಾಶ್ಚರೀಕರಣ ಎಂದರೇನು?

ಪಾಶ್ಚರೀಕರಣವು ಆಹಾರವನ್ನು ನಿರ್ದಿಷ್ಟ ತಾಪಮಾನಕ್ಕೆ ಬಿಸಿ ಮಾಡುವ ಮೂಲಕ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಪ್ರಕ್ರಿಯೆಯಾಗಿದೆ. ಇದನ್ನು ಮುಖ್ಯವಾಗಿ ಹಾಲು ಮತ್ತು ದ್ರವ ಆಹಾರ ಹಾಗೂ ಪಾನೀಯಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಫ್ರೆಂಚ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಕಂಡುಹಿಡಿದರು. ಹೀಗಾಗಿ ಅವರ ಹೆಸರನ್ನು ಇಡಲಾಗಿದೆ. ಈ ವಿಧಾನವು ಆಹಾರವನ್ನು ನಿರ್ದಿಷ್ಟ ತಾಪಮಾನಕ್ಕೆ (ಉದಾಹರಣೆಗೆ, 72 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ಸೆಕೆಂಡುಗಳ ಕಾಲ) ಬಿಸಿ ಮಾಡಿ ನಂತರ ಅದನ್ನು ತ್ವರಿತವಾಗಿ ತಂಪು ಮಾಡುವುದಾಗಿದೆ. ಈ ರೀತಿ ಮಾಡುವುದರಿಂದ ಆಹಾರದಿಂದ ಹರಡುವ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, (ಏಜೆನ್ಸೀಸ್​).