ಸಾಂದರ್ಭಿಕ ಚಿತ್ರ 
ಆರೋಗ್ಯ

ರಕ್ತದಾನ ಮಹಾದಾನ: ಸುಳ್ಳು ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ರಕ್ತದಾನದ ಹಿಂದಿನ ವೈಜ್ಞಾನಿಕ ಸತ್ಯಗಳೇನು? Blood Donation

ಪ್ರಮುಖ ಮುಖ್ಯಾಂಶಗಳು

  • ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ
  • ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು
  • ಅನೇಕರು ರಕ್ತದಾನವನ್ನು ಹಿಂದೇಟು ಹಾಕುತ್ತಾರೆ
ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ಅಂದರೆ ನಮ್ಮ ದೇಹದಲ್ಲಿರುವ ರಕ್ತವು ಇನ್ನೊಬ್ಬರ ಜೀವವನ್ನು ಉಳಿಸುವ ಶಕ್ತಿಯನ್ನು ಹೊಂದಿದೆ. ವೈದ್ಯರ ಪ್ರಕಾರ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದು ಹೇಳಲಾಗುತ್ತದೆ. ಆದರೂ ಸಹ ಅನೇಕರು ರಕ್ತದಾನವನ್ನು (Blood Donation) ಮಾಡಲು ಹಿಂದೇಟು ಹಾಕುತ್ತಾರೆ.
ರಕ್ತದಾನದ ಕುರಿತು ಹರಡಲಾಗಿರುವ ಸುಳ್ಳು ಅಥವಾ ತಪ್ಪಾದ ಮಾಹಿತಿಗಳೇ ಇದಕ್ಕೆ ನೇರ ಕಾರಣ ಎಂದು ಹೇಳಬಹುದು. ಆದ್ದರಿಂದ ನಾವು ಇಂದು ರಕ್ತದಾನ ಕುರಿತು ಹಬ್ಬಿರುವ ವದಂತಿಗಳ ಸತ್ಯಾಸತ್ಯೆಯ ಬಗ್ಗೆ ತಿಳಿದುಕೊಳ್ಳೋಣ.

ವದಂತಿ 1: ರಕ್ತದಾನ ಮಾಡಿದರೆ ದೇಹದ ಶಕ್ತಿ ಕುಂದುತ್ತದೆ

ಇದು ಸಂಪೂರ್ಣ ಸುಳ್ಳು. ರಕ್ತದಾನ ಮಾಡಿದ ನಂತರ ನಮ್ಮ ದೇಹವು ಕೇವಲ 24 ರಿಂದ 48 ಗಂಟೆಗಳಲ್ಲಿ ಕಳೆದುಕೊಂಡ ದ್ರವದ ಪ್ರಮಾಣವನ್ನು ಮರುಪೂರಣ ಮಾಡುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ರಕ್ತದ ಕಣಗಳು ಉತ್ಪತ್ತಿಯಾಗುತ್ತವೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತದ ಉತ್ಪತ್ತಿ ವೇಗವಾಗಿ ನಡೆಯುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಹೊರತು ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ.

ವದಂತಿ 2: ರಕ್ತದಾನ ಮಾಡುವಾಗ ಅತಿಯಾದ ನೋವಾಗುತ್ತದೆ

ರಕ್ತದಾನ ಮಾಡುವಾಗ ಒಂದು ಸಣ್ಣ ಇರುವೆ ಕಚ್ಚಿದಷ್ಟೇ ನೋವು ಉಂಟಾಗುತ್ತದೆ. ಸೂಜಿ ಚುಚ್ಚಿದಾಗ ಸ್ವಲ್ಪ ಕ್ಷಣಗಳವರೆಗೆ ಮಾತ್ರ ನೋವು ಗ್ರಾಸವಾಗುತ್ತದೆ. ದಾನ ಪ್ರಕ್ರಿಯೆಯ ನಂತರ ಯಾವುದೇ ನೋವು ಇರುವುದಿಲ್ಲ. ರಕ್ತದಾನ ಮಾಡಿದ ಬಳಿಕ ನೀಡುವ ಉಪಹಾರ ಮತ್ತು ವಿಶ್ರಾಂತಿ ನಿಮ್ಮನ್ನು ಮತ್ತೆ ಮೊದಲಿನ ಸ್ಥಿತಿಗೆ ತರುತ್ತದೆ.

ವದಂತಿ 3: ರಕ್ತದಾನ ಬಹಳ ಸಮಯ ತೆಗೆದು ಕೊಳ್ಳುತ್ತದೆ

ರಕ್ತ ಪಡೆಯುವ ಪ್ರಕ್ರಿಯೆಗೆ ಕೇವಲ 8 ರಿಂದ 10 ನಿಮಿಷಗಳಷ್ಟೇ ಸಾಕು. ನೋಂದಣಿ, ವೈದ್ಯಕೀಯ ತಪಾಸಣೆ ಮತ್ತು ದಾನದ ನಂತರದ ಸ್ವಲ್ಪ ಸಮಯದ ವಿಶ್ರಾಂತಿ ಎಲ್ಲವನ್ನೂ ಸೇರಿಸಿ ಸುಮಾರು 45 ನಿಮಿಷದಿಂದ ಒಂದು ಗಂಟೆಯ ಒಳಗೆ ನೀವು ಹೊರಬರಬಹುದು. ನಿಮ್ಮ ಜೀವನದ ಈ ಒಂದು ಗಂಟೆ ಮತ್ತೊಬ್ಬರ ಜೀವವನ್ನೇ ಉಳಿಸಬಹುದು ಎನ್ನುವುದನ್ನು ಮರೆಯದಿರಿ.

ವದಂತಿ 4: ರಕ್ತದಾನ ಮಾಡುವುದರಿಂದ ಸೋಂಕು ಹರಡುತ್ತದೆ

ಪ್ರತಿ ಬಾರಿ ರಕ್ತದಾನ ಮಾಡುವಾಗಲೂ ಹೊಸ ಮತ್ತು ಕ್ರಿಮಿನಾಶಕ (Sterilized) ಸೂಜಿಗಳನ್ನು ಬಳಸಲಾಗುತ್ತದೆ. ಒಂದು ಬಾರಿ ಬಳಸಿದ ಸೂಜಿಯನ್ನು ಕೂಡಲೇ ವಿಲೇವಾರಿ ಮಾಡಲಾಗುತ್ತದೆ. ಹಾಗಾಗಿ ರಕ್ತದಾನದ ಮೂಲಕ ಯಾವುದೇ ರೀತಿಯ ಸೋಂಕು ಹರಡುವ ಸಾಧ್ಯತೆ ಇರುವುದಿಲ್ಲ.

ವದಂತಿ 5: ಸಸ್ಯಾಹಾರಿಗಳು ರಕ್ತದಾನ ಮಾಡಬಾರದು

ಇದು ತಪ್ಪು ತಿಳುವಳಿಕೆ. ರಕ್ತದಾನಕ್ಕೂ ನೀವು ಸೇವಿಸುವ ಆಹಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ. ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ (ಕನಿಷ್ಠ 12.5 g/dL) ಸರಿಯಾಗಿದ್ದರೆ ಮತ್ತು ನೀವು ಆರೋಗ್ಯವಂತರಾಗಿದ್ದರೆ, ನೀವು ಸಸ್ಯಾಹಾರಿಯಾಗಿರಲಿ ಅಥವಾ ಮಾಂಸಾಹಾರಿಯಾಗಿರಲಿ ರಕ್ತದಾನ ಮಾಡಬಹುದು.

ವದಂತಿ 6: ಮಹಿಳೆಯರು ರಕ್ತದಾನ ಮಾಡಬಾರದು

ಮಹಿಳೆಯರು ಕೂಡ ರಕ್ತದಾನ ಮಾಡಬಹುದು. ಆದರೆ ಗರ್ಭಿಣಿಯರಿಗೆ,ಬಾಣಂತಿಯರಗೆ ಮತ್ತು ಋತುಚಕ್ರದ ಸಮಯದಲ್ಲಿ ಮಹಿಳೆಯರು ರಕ್ತದಾನ ಮಾಡದಂತೆ ಸೂಚಿಸಲಾಗುತ್ತದೆ. ಉಳಿದ ಸಮಯಗಳಲ್ಲಿ ಸರಿಯಾದ ಹಿಮೋಗ್ಲೋಬಿನ್ ಮತ್ತು ತೂಕವಿದ್ದರೆ ಮಹಿಳೆಯರು ಧಾರಾಳವಾಗಿ ರಕ್ತದಾನ ಮಾಡಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.