ಸಾಂದರ್ಭಿಕ ಚಿತ್ರ 
ಆರೋಗ್ಯ

ಕೇಸರಿ ಖರೀದಿಸುವ ಮುನ್ನ ಎಚ್ಚರ! ಅಸಲಿ ಯಾವುದು? ನಕಲಿ ಯಾವುದು? ಪತ್ತೆ ಹಚ್ಚಲು ಇಲ್ಲಿದೆ ಸುಲಭ ದಾರಿ.. Saffron

Saffron: ಕೇಸರಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ತಾಯ್ತನವನ್ನು ಅನುಭವಿಸುವ ಪ್ರತಿಯೊಂದು ಮಹಿಳೆಯು ತನ್ನ ಮಗು ಸುಂದರವಾದ ಬಣ್ಣವನ್ನು ಹೊಂದಬೇಕು ಎಂದು ಕೇಸರಿಯನ್ನು ಸೇವಿಸುತ್ತಾರೆ. ಅದೇ ರೀತಿ ಇದನ್ನು ಭಾರತೀಯ ಪಾಕದಲ್ಲೂ ಬಳಸಲಾಗುತ್ತಿದ್ದು, ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇಸರಿ ಎಲ್ಲೆಡೆ ಲಭ್ಯವಿದ್ದರೂ, ಅದು ನಿಜವಾದದ್ದೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. 
ಇಂದಿನ ದಿನಗಳಲ್ಲಿ ಕಲಬೆರಕೆ ಎನ್ನುವುದು ವೇಗವಾಗಿ ಮುಂದುವರೆಯುತ್ತಿದೆ. ಅದರಲ್ಲಿ ನಿಜವಾದ ಕೇಸರಿಯನ್ನು ಹುಡುಕುವುದು ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಆದ್ದರಿಂದ, ಕೇಸರಿಯನ್ನು ಖರೀದಿಸುವ ಮೊದಲು, ನೀವು ಖರೀದಿಸುತ್ತಿರುವ ಕೇಸರಿ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಿದ್ದರೆ, ಅಸಲಿ ಕೇಸರಿ ಗುರುತಿಸುವುದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ನೀರಿನಿಂದ ಗುರುತಿಸಿ

ನೀರಿನಲ್ಲಿ ನಿಜವಾದ ಕೇಸರಿಯನ್ನು ಗುರುತಿಸುವುದು ತುಂಬಾ ಸುಲಭ. ಇದನ್ನು ಮಾಡಲು ಮೊದಲು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಕೇಸರಿಯನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಹಾಗೇ ಬಿಡಿ. ಆದರೆ ಅದು ಅಸಲಿ ಕೇಸರಿಯಾಗಿದ್ದರೆ, ನಿಧಾನವಾಗಿ ಅದು ತನ್ನ ಬಣ್ಣವನ್ನು ಬಿಡುತ್ತದೆ. 

ಸುವಾಸನೆಯಿಂದಲೂ ಗುರಿತಿಸಿ

ಕೇಸರಿಯನ್ನು ಅದರ ಸುವಾಸನೆಯಿಂದ ಗುರುತಿಸಬಹುದು. ನಿಜವಾದ ಕೇಸರಿಯು ಸುವಾಸನೆಯನ್ನು ಬೀರುತ್ತದೆ. ಆದರೆ, ಕಲಬೆರಕೆ ಕೇಸರಿಯು ಸುವಾಸನೆ ಬೀರುವುದಿಲ್ಲ. ಜೊತೆಗೆ ದುರ್ಬಲವಾಗಿರುತ್ತದೆ.

ಕೈಯಿಂದ ಒತ್ತಿರಿ

ನೀವು ಕೇಸರಿಯನ್ನು ಖರೀದಿಸಲು ಹೋದಾಗ, ಅದನ್ನು ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಒತ್ತಿರಿ. ಅಸಲಿ ಕೇಸರಿ ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಒತ್ತಿದಾಗ ಸುಲಭವಾಗಿ ಒಡೆಯುತ್ತದೆ. ಮತ್ತೊಂದೆಡೆ, ನಕಲಿ ಕೇಸರಿ ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ ಮತ್ತು ಒತ್ತಿದಾಗ ಸುಲಭವಾಗಿ ಮುರಿಯುವುದಿಲ್ಲ.

ಪೇಪರ್ ಪರೀಕ್ಷೆ

ಪೇಪರ್​ ಬಳಸಿ ಕೇಸರಿಯನ್ನು ಗುರುತಿಸಬಹುದು. ಅಂದರೆ, ಒಂದು ಕಾಗದವನ್ನು ತೆಗೆದುಕೊಂಡು ಅದರ ಮೇಲೆ ಕೇಸರಿ ದಳಗಳನ್ನು ಇರಿಸಿರಿ. ನಂತರ ಅದರ ಮೇಲೆ ಸ್ವಲ್ಪ ನೀರನ್ನು ಸುರಿಯಿರಿ. ಈ ವೇಳೆ ಕೇಸರಿ ಕೆಂಪು ಬಣ್ಣಕ್ಕೆ ತಿರುಗಿದರೆ, ಅದು ನಕಲಿ ಎಂದು ತಿಳಿದುಬರುತ್ತದೆ.

ಹಾಲಿನೊಂದಿಗೆ ಪ್ರಯತ್ನಿಸಿ

ನಿಜವಾದ ಕೇಸರಿಯನ್ನು ಗುರುತಿಸಲು, ಮೊದಲು ಹಾಲನ್ನು ಬಿಸಿ ಮಾಡಿ ಕೇಸರಿ ದಳವನ್ನು ಸೇರಿಸಿರಿ. ಈ ವೇಳೆ ಹಾಲು ತಿಳಿ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಅಸಲಿ ಕೇಸರಿ. ಆದರೆ, ಹಾಲು ಕೆಂಪು ಅಥವಾ ಗಾಢ ಹಳದಿ ಬಣ್ಣ ತಿರುಗಿದರೆ, ಅದು ನಕಲಿ ಎಂದು ತಿಳಿದುಬರುತ್ತದೆ.

ಅಡಿಗೆ ಸೋಡಾ ಪರೀಕ್ಷೆ

ನಿಜವಾದ ಕೇಸರಿಯನ್ನು ಗುರುತಿಸಲು ನೀವು ಅಡಿಗೆ ಸೋಡಾ ಪರೀಕ್ಷೆಯನ್ನು ಸಹ ಬಳಸಬಹುದು. ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ಸೇರಿಸಿ ಅದಕ್ಕೆ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ ಸ್ವಲ್ಪ ಕೇಸರಿ ಎಳೆಗಳನ್ನು ಸೇರಿಸಿ. ಕೇಸರಿ ಅಸಲಿಯಾಗಿದ್ದರೆ, ದ್ರಾವಣವು ಹಳದಿ ಬಣ್ಣಕ್ಕೆ ತಿರುಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.