- ಹುರಿಗಡಲೆ ಭಾರತೀಯ ಅಡುಗೆ ಮನೆಯಲ್ಲಿ ಬಳಸುವ ಸಾಮಾನ್ಯ ಪದಾರ್ಥ
- ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿದೆ
- ಆದರೆ, ಇದೀಗ ಆಘಾತಕಾರಿ ಸಂಶೋಧನಾ ವರದಿಯೊಂದು ಹೊರಬಿದ್ದಿದೆ
- ಹುರಿಗಡಲೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂದಿದೆ
Roasted Chana : ಹುರಿಗಡಲೆ ಭಾರತೀಯ ಅಡುಗೆ ಮನೆಯಲ್ಲಿ ಬಳಸುವ ಸಾಮಾನ್ಯ ಪದಾರ್ಥ. ಇದು ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕರುಳಿನ ಆರೋಗ್ಯಕ್ಕೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು ಎಂಬೆಲ್ಲಾ ಕಾರಣಕ್ಕೆ ಜನರು ಈ ಹುರಿಗಡಲೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ, ಇದೀಗ ಆಘಾತಕಾರಿ ಸಂಶೋಧನಾ ವರದಿ ಹೊರಬಿದ್ದಿದ್ದು, ಹುರಿಗಡಲೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಕಂಡುಬರುತ್ತಿದೆ ಎಂದಿದೆ.
ಕ್ಯಾನ್ಸರ್ ಬರಲು ಹುರಿಗಡಲೆ ನೇರ ಪಾತ್ರ ವಹಿಸದಿದ್ದರೂ ಅದರ ಆಕರ್ಷಣೆಗೆ ಬಳಸುವ ಹಳದಿ ಬಣ್ಣದಲ್ಲಿ ಔರಾಮೈನ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಕಾಯಿಲೆ ಬರುವ ಸಂಭವವಿದೆ ಇದೆ ಎಂದು ಸಂಶೋಧನೆ ಹೇಳಿದೆ. ಆದ್ದರಿಂದ ಕೂಡಲೇ ಔರಾಮೈನ್ ಬಳಕೆಯನ್ನು ನಿರ್ಭಂದಿಸಬೇಕೆಂದು ಶಿವ ಸೇನಾ ಸಂಸದೆ ಪ್ರಿಯಾಂಕಾ ಚರ್ತುವೇದಿ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಸಹ ಬರೆದಿದ್ದಾರೆ.
ಏನಿದು ಔರಾಮೈನ್?
ಔರಾಮೈನ್ ಇದೊಂದು ಬಣ್ಣಕಾರಕ ರಾಸಾಯನಿಕವಾಗಿದ್ದು, ಇದನ್ನು ಚರ್ಮದ ಬಟ್ಟೆಗಳಿಗೆ ಬಣ್ಣ ನೀಡಲು ಬಳಸಲಾಗುತ್ತದೆ. ಇದನ್ನು ತಿನ್ನುವ ಆಹಾರಗಳಲ್ಲಿ ಬಳಸುವುದರಿಂದ ಯಕೃತ್ತು ಮತ್ತು ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರಿ ಕ್ಯಾನ್ಸರ್ ಉಟಾಂಗುವ ಸಾಧ್ಯತೆಯಿದೆ.
ಮನೆಯಲ್ಲಿ ಔರಾಮೈನ್ ಪತ್ತೆಹಚ್ಚುವುದು ಹೇಗೆ?
ಸರಿಯಾದ ಹುರಿಗಡಲೆಯು ಗಾತ್ರದಲ್ಲಿ ಚಿಕ್ಕದಿದ್ದು, ನೈಸರ್ಗಿಕ ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಒತ್ತಿದಾಗ ಕೂಡಲೇ ಒಡೆದು ಹೋಗುವುದಿಲ್ಲ. ಆದರೆ ಔರಾಮೈನ್ ಮಿಶ್ರಿತ ಹುರಿಗಡಲೆಯು ಗಾತ್ರದಲ್ಲಿ ದೊಡ್ಡದಿದ್ದು, ಹಳದಿ ಬಣ್ಣದಿಂದ ಹೊಳೆಯುತ್ತಿರುತ್ತದೆ ಮತ್ತು ಒತ್ತಿದ ತಕ್ಷಣ ಪುಡಿ-ಪುಡಿಯಾಗಿ ಹೋಗುತ್ತದೆ.
ಕಾನೂನು ಏನು ಹೇಳುತ್ತದೆ?
FSSAI ನಿಯಮಗಳ ಅಡಿಯಲ್ಲಿ, ಔರಮೈನ್ ಮತ್ತು ಇತರ ಕೈಗಾರಿಕಾ ಬಣ್ಣಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಹಾರ ಸುರಕ್ಷತಾ ಕಾಯ್ದೆ 2006ರ ಅಡಿಯಲ್ಲಿ ಅನುಮೋದಿತ ಆಹಾರ ಬಣ್ಣಗಳನ್ನು ಮಾತ್ರ ಬಳಸಬಹುದು. ಆಹಾರದಲ್ಲಿ ಕಲಬೆರಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, FSSAI ಕಾಯ್ದೆಯ ಸೆಕ್ಷನ್ 59 ರ ಅಡಿಯಲ್ಲಿ, ಕಲಬೆರಕೆಯಿಂದ ಸಾವು ಅಥವಾ ಗಂಭೀರ ಗಾಯವಾದರೆ, ಅಪರಾಧಿಗಳು 7 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ ಹತ್ತು ಲಕ್ಷ ದಂಡವನ್ನು ಎದುರಿಸಬೇಕಾಗುತ್ತದೆ, (ಏಜೆನ್ಸೀಸ್).