ಬೆಂಗಳೂರು: ಬಾಲ್ಯದಲ್ಲಿ ಬಹುತೇಕರಿಗೆ ತುಪ್ಪದ ಅನ್ನ ಅಥವಾ ತುಪ್ಪ ಮತ್ತು ಅನ್ನದ ಮಿಶ್ರಣವನ್ನು ಬಹಳ ಆನಂದಿಸಿ, ತಿಂದಿರುವ ಅನುಭವ ಖಂಡಿತ ಇರುತ್ತದೆ. ಒಂದೆರೆಡು ಚಮಚ ತುಪ್ಪವನ್ನು ಬಿಸಿ ಬಿಸಿ ಅನ್ನದೊಂದಿಗೆ ಕಲಿಸಿಕೊಂಡು ತಿಂದರೆ ಆಹಾ! ಆ ರುಚಿಯೇ ಬೇರೆ ಬಿಡಿ. ಅದರಲ್ಲೂ, ಹಳ್ಳಿಗಾಡಿನಲ್ಲಿ ಸೌದೆ ಒಲೆಯ ಮೇಲೆ ಬೇಯಿಸಿದ ತುಪ್ಪದ ಪರಿಮಳವಂತು ಹೇಳತೀರದು.
ಬಾಲ್ಯದಲ್ಲಿ ತುಪ್ಪ ಬೆರೆಸಿದ ಅನ್ನವನ್ನು ಹೆಚ್ಚಾಗಿ ತಿಂದಿದ್ದು ಓಕೆ. ಆದರೆ, ಬೆಳೆದು ದೊಡ್ಡವರಾಗಿ, ದುಡಿಯುವ ಸಮಯದಲ್ಲಿ ಬಾಲ್ಯದಲ್ಲಿ ತಿಂದಂತೆಯೇ ಸವಿಯಲು ಸಾಧ್ಯವಿಲ್ಲ. ಕಾರಣ, ಆ ವಯಸ್ಸಿನಲ್ಲಿ ಕಲ್ಲು ತಿಂದು ಕಲ್ಲು ಅರಗಿಸುವ ವಯಸ್ಸು ಎಂದು ನಮ್ಮ ಹಿರಿಯರು ಹೇಳ್ತಾರೆ. ಅದು ನಿಜವೇ ಬಿಡಿ. ಆಗಿನಂತೆ ಇಂದು ತಿನ್ನಲು ಆಗಲ್ಲ. ಒಂದೆಡೆ ತುಪ್ಪದ ಸೇವನೆಯಿಂದ ದೇಹ ದಪ್ಪ ಆಗುತ್ತೆ. ನಾನಾ ಸಮಸ್ಯೆಗಳು ಕಾಡುತ್ತೆ ಎಂಬುದು ಕೆಲವರ ವಾದ.
ಅಸಲಿಗೆ, ತುಪ್ಪವನ್ನು ಮಿತವಾಗಿ ಸವಿದರೆ, ಅದು ನಮ್ಮ ದೇಹಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ, ಶುದ್ಧ ತುಪ್ಪ ಬಳಸೋದು ಅಥವಾ ಅನ್ನಕ್ಕೆ ಸೇರಿಸಿಕೊಂಡು ತಿನ್ನುವುದರಿಂದ ದೇಹಕ್ಕೆ ಅಚ್ಚರಿಯ ಆರೋಗ್ಯ ಪ್ರಯೋಜನಗಳಿವೆ.
1. ಜೀರ್ಣಕ್ರಿಯೆ ಉತ್ತಮ
ಆಯುರ್ವೇದದ ಪ್ರಕಾರ, ತುಪ್ಪವು ನಮ್ಮ ದೇಹದಲ್ಲಿ ಜಠರಾಗ್ನಿಯನ್ನು ಹೆಚ್ಚಿಸುತ್ತದೆ. ಅಂದರೆ, ಊಟದ ಆರಂಭದಲ್ಲಿ ತುಪ್ಪದೊಂದಿಗೆ ಅನ್ನವನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ಇದು ಆಹಾರ ಸರಿಯಾಗಿ ಜೀರ್ಣವಾಗದಿರುವ ಸಮಸ್ಯೆಯನ್ನು ತಡೆಗಟ್ಟುತ್ತದೆ. ಹೀಗಾಗಿ, ಇದು ಅನೇಕರಲ್ಲಿ ಕಾಡುವ ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.
2. ಸಕ್ಕರೆ ಅಂಶವನ್ನು ಹೆಚ್ಚಿಸುವುದಿಲ್ಲ
ತುಪ್ಪ ತಿನ್ನುವುದರಿಂದ ಸಕ್ಕರೆ ಅಂಶ ಹೆಚ್ಚಾಗುತ್ತದೆ ಎಂದು ಕೆಲವರು ತಿನ್ನಲು ಹೆದರುತ್ತಾರೆ. ಆದರಿದು ಸತ್ಯಕ್ಕೆ ದೂರ. ಸಾಮಾನ್ಯವಾಗಿ, ನಾವು ಅನ್ನವನ್ನು ಸೇವಿಸಿದಾಗ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಹೆಚ್ಚಿಸುತ್ತದೆ. ಆದಾಗ್ಯೂ, ಅನ್ನಕ್ಕೆ ಸ್ವಲ್ಪ ಪ್ರಮಾಣದ ತುಪ್ಪವನ್ನು ಸೇರಿಸುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಅನ್ನದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ರಕ್ತಕ್ಕೆ ಬಹಳ ನಿಧಾನವಾಗಿ ಬಿಡುಗಡೆಯಾಗುತ್ತವೆ. ಇದರ ಪರಿಣಾಮವಾಗಿ, ಸಕ್ಕರೆ ಮಟ್ಟವು ಹಠಾತ್ ಏರುವುದಿಲ್ಲ. ಇದು ಮಧುಮೇಹ ಇರುವವರಿಗೆ ಒಳ್ಳೆಯ ಪರಿಹಾರ ಎನ್ನಲಾಗಿದೆ.
3. ಕೀಲು ನೋವು, ಮಿದುಳಿಗೆ ಶಕ್ತಿ
ಕೀಲು ನೋವು ವಯಸ್ಸಾದಂತೆ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ತುಪ್ಪವು ನಮ್ಮ ದೇಹಕ್ಕೆ ನೈಸರ್ಗಿಕ ಲೂಬ್ರಿಕೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮೂಳೆಗಳ ನಡುವಿನ ಅಂಗಾಂಶವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಕೀಲು ಚಲನೆಯನ್ನು ಸುಲಭಗೊಳಿಸುತ್ತದೆ. ಹೀಗಾಗಿ, ಶುದ್ಧ ತುಪ್ಪ ಸೇವನೆಯು ಕೀಲು ನೋವನ್ನು ಕಡಿಮೆ ಮಾಡುತ್ತವೆ. ತುಪ್ಪವು ಕೀಲುಗಳಿಗೆ ಮಾತ್ರವಲ್ಲದೆ, ಮಿದುಳಿಗೂ ಅತ್ಯುತ್ತಮ ಎನ್ನಲಾಗಿದೆ.
ತುಪ್ಪದಲ್ಲಿರುವ ಗುಣಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮಿದುಳನ್ನು ಸಕ್ರಿಯವಾಗಿಡುತ್ತವೆ. ಅದಕ್ಕಾಗಿಯೇ, ನಮ್ಮ ಹಿರಿಯರು ಬಾಲ್ಯದಲ್ಲಿ ಮಕ್ಕಳಿಗೆ ಅನ್ನದೊಂದಿಗೆ ತುಪ್ಪವನ್ನು ಬೆರೆಸಿ ತಿನ್ನಿಸಬೇಕು ಎನ್ನುತ್ತಾರೆ,(ಏಜೆನ್ಸೀಸ್).
ಗಮನದಲ್ಲಿರಲಿ
ತುಪ್ಪ ಒಳ್ಳೆಯದು ನಿಜ. ಹಾಗಂತ, ಅತಿಯಾಗಿ ಸೇವಿಸಬೇಡಿ. ದಿನಕ್ಕೆ 1ರಿಂದ 2 ಚಮಚ ತುಪ್ಪ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಿಮ್ಮನ್ನು ಫಿಟ್ ಆಗಿರಿಸಲು ಸಹಕಾರಿ.