- ತಿನ್ನಲು ಕಹಿಯಾಗಿರುವ ಬೇವು ಆರೋಗ್ಯದ ವಿಷಯದಲ್ಲಿ ಜೇನಿಗಿಂತ ಸಿಹಿ
- ಬೇವು ಒಂದು ಅತ್ಯತ್ತಮ ರೋಗನಿರೋಧಕ
- ಕ್ಯಾನ್ಸರ್, ಮಧುಮೇಹ ಪೀಡಿತರಿಗೆ ಬೇವಿನೆಲೆ ರಾಮಬಾಣ
Neem : ಸಾಮನ್ಯವಾಗಿ ನಾವು ಬೇವನ್ನು ಯುಗಾದಿಯ ಸಂದರ್ಭದಲ್ಲಿ ಸೇವನೆ ಮಾಡುತ್ತೇವೆ. ಜೀವನ ಎನ್ನುವುದು ಕೇವಲ ಹೂವಿನ ಹಾಸಿಗೆಯಲ್ಲ , ಅಂತೆಯೇ ಮುಳ್ಳಿನ ದಾರಿಯೂ ಅಲ್ಲ ಎಂಬುದನ್ನು ತಿಳಿಸುವ ಯುಗಾದಿ ಹಬ್ಬದಂದು ನಾವು ಬೇವು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನುತ್ತೇವೆ. ಆದರೆ ತಿನ್ನಲು ಕಹಿಯಾಗಿರುವ ಬೇವು ಆರೋಗ್ಯದ ವಿಷಯದಲ್ಲಿ ಜೇನಿಗಿಂತ ಸಿಹಿಯಾಗಿದೆ ಎಂದರೆ ನೀವು ನಂಬಲೇ ಬೇಕು.
ಮನೆಯಲ್ಲಿ ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜಿದರೆ ಹಲ್ಲು ಗಟ್ಟಿಮುಟ್ಟಾಗಿರುತ್ತದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ದಿನನಿತ್ಯ ಬೇವನ್ನು ಸೇವಿಸುವುದರ ಮೂಲಕ ಈ 7 ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆವು ಯಾವುದೆಂದು ಇಂದು ತಿಳಿದುಕೊಳ್ಳೊಣ.
ಬೇವಿನ ಸೇವನೆಯಿಂದ ದೊರೆಯುವ 7 ಆರೋಗ್ಯ ಪ್ರಯೋಜನಗಳು
1. ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ
ಬೇವಿನ ಎಲೆಗಳು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಸ್ಟ್ಯಾಫಿಲೋಕೊಕಸ್ ಔರೆಸ್ ಮತ್ತು ಮೆಥಿಸಿಲಿನ್- ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ಬ್ಯಾಕ್ಟೀರಿಯಾಗಳ ಮೂಲಕ ತಗುಲಬಹುದಾದ ಕಾಯಲೆಗಳನ್ನು ತಪ್ಪಿಸಲು ಬೇವಿನೆಲೆ ಉಪಯೋಗ ಉಪಯುಕ್ತವಾಗಿರುತ್ತದೆ.
2. ಅತ್ಯುತ್ತಮ ಆಂಟಿವೈರಲ್
ಬೇವಿನಲ್ಲಿರುವ ಸಂಯುಕ್ತಗಳು ವೈರಲ್ ಸೋಂಕುಗಳ ವಿರುದ್ಧ ಹೋರಾಡಬಲ್ಲವು ಎಂದು ವಿವಿಧ ಸಂಶೋಧನಾ ಅಧ್ಯಯನಗಳು ತೋರಿಸುತ್ತವೆ. ಬೇವು ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೇವಿನ ತೊಗಟೆಯ ಸಾರವು ಹರ್ಪಿಸ್, ಪೋಲಿಯೊವೈರಸ್, ಎಚ್ಐವಿ ಮತ್ತು ಡೆಂಗ್ಯೂ ವೈರಸ್‌ನಂತಹ ರೋಗಗಳ ವಿರುದ್ಧ ಪ್ರಬಲವಾದ ಆಂಟಿವೈರಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
3. ಬಾಯಿಯ ಆರೋಗ್ಯಕ್ಕೆ ಉತ್ತಮ
ಬೇವಿನ ತೊಗಟೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಮತ್ತು ಒಸಡುಗಳ ಸೋಂಕನ್ನು ನೈಸರ್ಗಿಕವಾಗಿ ಗುಣಪಡಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಹೀಗಾಗಿ ಮನೆಗಳಲ್ಲಿ ತಲತಲಾಂತರದಿಂದ ಬೇವಿನ ಕಡ್ಡಿಯ ಬಳಕೆಯನ್ನು ಮಾಡಲಾಗುತ್ತದೆ. ಆದರೆ ಬೇವಿನ ತೊಗಟೆಯ ನಿರಂತರ ಬಳಕೆಯಿಂದ ಕೆಲವು ಜನರಲ್ಲಿ ಬಾಯಿ ಹುಣ್ಣು ಕಾಣಿಸಿಕೊಡಿರುವುದರಿಂದ ಬಳಸುವಾಗ ಎಚ್ಚರವಿರಲಿ.
4. ಉರಿ ನಿವಾರಕ
ದೇಹದಲ್ಲಿ ದೀರ್ಘಕಾಲದ ಉರಿ ಇದ್ದಾಗ ಕ್ಯಾನ್ಸರ್ ತಗಲುವ ಸಂಭವ ಹೆಚ್ಚಿರುತ್ತದೆ. ನಿಯಮಿತವಾಗಿ ಬೇವಿನೆಲೆಯನ್ನು ಸೇವಿಸುವುದರಿಂದ ದೇಹವು ತಂಪಾಗಿದ್ದು, ಯಾವುದೇ ರೀತಿಯ ಊರಿಯ ಅನುಭವವಿದ್ದರೆ ಅದು ಕಡಿಮೆಯಾಗುತ್ತದೆ.
5. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ
ಮೊಡವೆ, ಎಸ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳಿಗೆ ಬೇವಿನ ಬಳಕೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಅಧ್ಯಯನಗಳು ದಾಖಲಿಸಿವೆ. ಚಳಿಗಾಲದಲ್ಲಿ ಚರ್ಮವು ಹೆಚ್ಚಾಗಿ ಹಾನಿಗೊಳಗಾಗುವುದರಿಂದ ಬೇವಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಉತ್ತಮ ಫಲಿತಾಂಶವನ್ನು ಕೊಡುತ್ತದೆ.
6. ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ
ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ವೈಧ್ಯಕೀಯ ಪುರಾವೆಗಳಿರುವುದರಿಂದ ದಿನನಿತ್ಯ ಐದಾರು ಬೇವಿನೆಲೆ ಅಥವಾ ಬೇವಿನೆಲೆ ಜ್ಯೂಸ್ ಕುಡಿಯುವುದರಿಂದ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ಹೇಳಲಾಗುತ್ತದೆ.
7. ಜೀರ್ಣಕ್ರಿಯೆ ಉತ್ತಮವಾಗುತ್ತದೆ
ನಿಯಮಿತ ಬೇವಿನ ಸೇವನೆಯು ಕರುಳಿನ ಆರೋಗ್ಯವನ್ನು ಉತ್ತಮ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಏನಾದರೂ ಸಮಸ್ಯೆಗಳು ಉಂಟಾದಾಗ ಬೇವಿನ ಸೇವನೆ ಉತ್ತಮ ಆಯ್ಕೆಯಾಗಿರುತ್ತದೆ. ಕೆಲವೊಮ್ಮೆ ನಾವು ಸೇವಿಸಿದ ಆಹಾರದಲ್ಲಿ ಪರಾವಲಂಬಿ ಜೀವಿಗಳು ಇರುವ ಸಾಧ್ಯತೆಗಳಿದ್ದು ಇದನ್ನು ಬೇವು ನಾಶಪಡಸಿ ದೇಹವನ್ನು ರೋಹಮುಕ್ತವಾಗಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).