ಕೆಲಸದ ಟೆನ್ಶನ್ಗೆ ಚಹಾ, ಬಿಡುವಿನಲ್ಲಿದ್ದರೂ ಚಹ, ಬಿಜಿಯಿದ್ದರೂ ಚಹಾ, ನೊಂದರು, ನಕ್ಕರು ಎಲ್ಲದಕ್ಕೂ ಇತ್ತೀಚಿನ ದಿನದಲ್ಲಿ ಚಹಾ ಕುಡಿಯಲಾಗುತ್ತದೆ. ಇದು ಎಲ್ಲದಕ್ಕೂ ಮದ್ದಿದ್ದಂತೆ. ಸಾಮಾನ್ಯವಾಗಿ ಕೆಲವರು ಒಂದರಿಂದ 6 ಬಾರಿಯಾದ್ರೂ ಚಹಾ ತಯಾರಿಸಿ ಕುಡಿಯುತ್ತಾರೆ.. ಆನಂತರ ಪುಡಿಯನ್ನು ಬಿಸಾಡುತ್ತೇವೆ. ಆದರೆ, ನೆನಪಿಡಿ. ಚಹಾ ಪುಡಿಯಿಂದ ಬಹಳ ಪ್ರಯೋಜನವಿದೆ.
ನೀವು ಮುಂಜಾನೆ, ಸಂಜೆ, ಅತಿಥಿಗಳು ಭೇಟಿಯಾದಾಗ ಕುಡಿಯುವ ಚಹಾ..ಆನಂತರ ವೇಸ್ಟ್ ಆಗುವ ಟೀ ಪುಡಿಯನ್ನು ಕಸಕ್ಕೆ ಚೆಲ್ಲಬೇಡಿ. ಮನೆಯ ಪೀಠೋಪಕರಣ, ಕನ್ನಡಿ, ಕಿಟಕಿ ಸೇರಿದಂತೆ ನಾನಾ ವಿಚಾರಕ್ಕೆ ಇದನ್ನು ಬಳಕೆ ಮಾಡಬಹುದು. ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ನೀವು ಬಳಸಿದ ಟೀ ಪುಡಿಯನ್ನು ಮೊದಲಿಗೆ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಹಾಲು ಅಥವಾ ಸಕ್ಕರೆ ಅಂಶವನ್ನು ಹೋಗಲಾಡಿಸಲು ನೀರಿನಲ್ಲಿ ತೊಳೆದುಕೊಳ್ಳುವುದು ಹೆಚ್ಚು ಮುಖ್ಯ. ಇಲ್ಲದಿದ್ದರೆ ನಿಮ್ಮ ಮನೆಯ ವಸ್ತುಗಳು ಜಿಗುಟಾಗುವ ಸಾಧ್ಯತೆ ಇರುತ್ತದೆ.
ಸಕ್ಕರೆ ಮತ್ತು ಹಾಲಿನಿಂದ ಸ್ವಚ್ಛವಾದ ಟೀ ಪುಡಿಯನ್ನು ಮತ್ತೆ ಒಂದು ಪಾತ್ರೆಗೆ ಹಾಕಿ, ನೀರು ಬೆರೆಸಿ ಸ್ಟೌವ್ ಮೇಲೆ ಇಡಿ. ಚೆನ್ನಾಗಿ ಕುದ್ದು ಗಾಢ ಬಣ್ಣಕ್ಕೆ ನೀರು ತಿರುಗಿದ ಬಳಿಕ ಅದನ್ನು ಸ್ಟೌವ್ನಿಂದ ತೆಗೆದು ಕೆಳಗಿಟ್ಟು ಆರಲು ಬಿಡಿ. ಈಗ ತಣ್ಣಗಾದ ನೀರನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಇಡಿ.
ಟೀ ಪುಡಿಯಿಂದ ತಯಾರಾದ ನೀರನ್ನು ನಿಮ್ಗೆ ಬೇಕಾಗುವ ಸಮಯದಲ್ಲಿ ಕಿಟಕಿ ಮತ್ತು ಕನ್ನಡಿ ಒರೆಸಲು ಬಳಕೆ ಮಾಡಬಹುದು. ಇದರ ಮೇಲಿರುವ ಕೊಳೆಯು ತೊಲಗಲು ಇದು ಸಹಾಯ ಮಾಡುತ್ತದೆ.
ಹಳೆಯ ಪೀಠೋಪಕರಣದ ಮೇಲೆ ಕಾಣಿಸುವ ಧೂಳು, ಕೊಳೆಯನ್ನು ತೆಗೆಯಲು ಟೀ ಪುಡಿಯ ನೀರು ಬೆಸ್ಟ್ ಆಪ್ಶನ್. ಅವುಗಳ ಮೇಲೆ ಟೀ ಪುಡಿಯಿಂದ ನೀರನ್ನು ಸಿಂಪಡಿಸಿ, ಮೈಕ್ರೋ ಫೈಬರ್ ಬಟ್ಟೆಯನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ. ಅದರ ಮೇಲಿರುವ ಸಾಮಾನ್ಯ ಕೊಳೆಯು ನಾಶವಾಗಲು ಸಹಾಯ ಮಾಡುತ್ತದೆ.
ಚಹಾ ಪುಡಿಯು ಪಾತ್ರೆಗಳಲ್ಲಿ ಅಂಟಿಕೊಳ್ಳುವ ಜಿಡ್ಡು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಪೂರಿ ಅಥವಾ ಬಜ್ಜಿ, ಬೋಂಡಾ ತಯಾರಿಸಲು ಬಾಂಡ್ಲಿಗಳನ್ನು ಬಳಸಿದಾಗ ಅಲ್ಲಿ ಜಿಡ್ಡುಗಟ್ಟುವುದು ಸಾಮಾನ್ಯ ಹೀಗಾಗಿ, ಅಂತಹ ಸಮಯದಲ್ಲಿ ಚಹಾ ನೀರನ್ನು ಸಿಂಪಡಿಸಿ, ಸ್ವಚ್ಛಗೊಳಿಸಬಹುದಾಗಿದೆ. ಚಿಕನ್ ಮತ್ತು ಮೊಟ್ಟೆಯ ಕೌಚು ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಬಿಳಿ ಟೈಲ್ಸ್, ಅಡುಗೆ ಮನೆಯ ಸಿಂಕ್ ಕ್ಲೀನ್ ಮಾಡಲು ಟೀ ಪುಡಿಯ ನೀರನ್ನು ಬಳಕೆ ಮಾಡಬಹುದಾಗಿದೆ. ಟೀ ಪುಡಿಯಿಂದ ಕುದ್ದ ನೀರನ್ನು ಒಂದು ಹತ್ತರಿಂದ-ಹದಿನೈದು ನಿಮಿಷ ಟೈಲ್ಸ್ ಮೇಲೆ ಸಿಂಪಡಿಸಿ ಬಿಡಿ. ಆನಂತರ ಒಂದು ಬ್ರಷ್ನಿಂದ ಟೈಲ್ಸ್ ಕ್ಲೀನ್ ಮಾಡಿ, ಮುಖ ಕಾಣುವಷ್ಟು ಫಳ-ಫಳ ಎಂದು ಹೊಳೆಯೋದಂತೂ ಗ್ಯಾರಂಟಿ, (ಏಜೆನ್ಸೀಸ್).