ಫಿಫಾ ವಿಶ್ವಕಪ್​ 2026 
FIFA ವಿಶ್ವಕಪ್

ಫಿಫಾ ವಿಶ್ವಕಪ್‌ನಲ್ಲಿ ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿದ್ರೆ ಏನರ್ಥ? ಅಷ್ಟಕ್ಕೂ ಕಠಿಣ ರೂಲ್ಸ್​ ಹೇಳುವುದೇನು? FIFA World Cup

ಪ್ರಮುಖ ಮುಖ್ಯಾಂಶಗಳು

  • ಫುಟ್ಬಾಲ್​ನಲ್ಲಿ ಆಟಗಾರರಿಗೆ ತೋರಿಸುವ ರೆಡ್​ ಕಾರ್ಡ್​ ಅರ್ಥವೇನು?
  • ಫಿಫಾ ವಿಶ್ವಕಪ್​ 2026ರಲ್ಲಿ ಭಾರಿ ಸದ್ದು ಮಾಡುತ್ತಿದೆ ಈ ರೆಡ್​ ಕಾರ್ಡ್​
  • ಅಷ್ಟಕ್ಕೂ ಈ ನಿಯಮ ಹೇಳುವುದೇನು? ಇಲ್ಲಿದೆ ಮಾಹಿತಿ
FIFA World Cup: ಪ್ರಸಕ್ತ ನಡೆಯುತ್ತಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ 2026ರ​ ಟೂರ್ನಿಯು ನಾಕೌಟ್ ಪಂದ್ಯಗಳಿಗೆ ಲಗ್ಗೆಯಿಟ್ಟಿದ್ದು, ಟ್ರೋಫಿಗೆ ಮುತ್ತಿಡಲು ಬಲಿಷ್ಠ ತಂಡಗಳು ಭರ್ಜರಿ ಪೈಪೋಟಿಗೆ ಇಳಿದಿವೆ. ಈ ಕ್ರೀಡೆಯ ನಿಯಮಗಳ ಬಗ್ಗೆ ಅಷ್ಟಾಗಿ ತಿಳಿದುಕೊಳ್ಳದ ಅದೆಷ್ಟೋ ಮಂದಿಗೆ ಎರಡು ಪದಗಳಂತು ಚೆನ್ನಾಗಿ ನೆನಪಿರುತ್ತದೆ. ಅದೇ ಗೋಲ್​ ಮತ್ತು ರೆಡ್​ ಕಾರ್ಡ್​. ಈ ಪೈಕಿ ರೆಡ್​ ಕಾರ್ಡ್ ಪದವು ಸ್ವಲ್ಪ ಗೊಂದಲಮಯ.

ರೆಡ್​ ಕಾರ್ಡ್ ಬಂದಿದ್ದೇ ಹೀಗೆ...

ಪಂದ್ಯದ ವೇಳೆ ಆಟಗಾರನಿಗೆ ರೆಫ್ರಿ ತೋರಿಸುವ ರೆಡ್​ ಕಾರ್ಡ್​ ಏನು ಸೂಚಿಸುತ್ತೆ? ಯಾವ ಮೂಲ ನಿಯಮಗಳನ್ನು ಬ್ರೇಕ್​ ಮಾಡಿದ್ದಾರೆ ಎಂದೇಳುತ್ತೆ? ಎಂಬುದು ಇಂದಿಗೂ ಸಾಕಷ್ಟು ಮಂದಿಗೆ ತಿಳಿದಿಲ್ಲ. ಈ ಕಾರ್ಡ್‌ಗಳು 1970ರ ವಿಶ್ವಕಪ್‌ನಿಂದ ಜಾರಿಗೆ ಬಂದಿದ್ದು, ಇದರ ಹಿಂದೆ ಒಂದು ಕುತೂಹಲಕಾರಿ ಸ್ಟೋರಿ ಅಡಗಿದೆ. 1966ರ ವಿಶ್ವಕಪ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಿದ್ದವು. ಆ ಸಮಯದಲ್ಲಿ, ರೆಫರಿ ರುಡಾಲ್ಫ್ ಕ್ರೀಟ್ಲಿನ್ ಅವರಿಗೆ ಭಾಷೆಯ ಸಮಸ್ಯೆಯಿಂದಾಗಿ ಅರ್ಜೆಂಟೀನಾ ಆಟಗಾರರೊಂದಿಗೆ ಮಾತುಕತೆ ನಡೆಸಲು ಕಷ್ಟವಾಯಿತು. ಆಟಗಾರರನ್ನು ಮೈದಾನದಿಂದ ಹೊರ ಕಳುಹಿಸಲು ಉಂಟಾದ ಗೊಂದಲದಿಂದ, ಭಾಷೆಯ ಹಂಗಿಲ್ಲದೆ ಎಲ್ಲರೂ ಸುಲಭವಾಗಿ ಅರ್ಥೈಸಿಕೊಳ್ಳಲು ಈ ಯೆಲ್ಲೋ ಮತ್ತು ರೆಡ್​ ಕಾರ್ಡ್​ಗಳನ್ನು ಪರಿಚಯಿಸಲಾಯಿತು.
ಅಸಲಿಗೆ ರೆಡ್ ಕಾರ್ಡ್ ಪಡೆದ ಆಟಗಾರರು ತಕ್ಷಣವೇ ಮೈದಾನದಿಂದ ಹೊರಹೋಗಬೇಕು. ಈ ವೇಳೆ, ತಂಡದಿಂದ ಹೊರಬಿದ್ದ ಆಟಗಾರನ ಜಾಗಕ್ಕೆ ಮತ್ತೊಬ್ಬ ಫುಟ್ಬಾಲರ್​ ಕರೆತರಲು ಅವಕಾಶ ಇರೋದಿಲ್ಲ ಎಂಬುದೇ ಕ್ಯಾಚ್​. ನಿಯಮಗಳ ಪ್ರಕಾರ, ಒಂದು ಪಂದ್ಯದಲ್ಲಿ ಒಂದು ತಂಡದ ಗರಿಷ್ಠ ಎಂದರೆ 4 ಆಟಗಾರರು ರೆಡ್ ಕಾರ್ಡ್ ಸ್ವೀಕರಿಸಿ, ಹೊರಬೀಳಬಹುದು. ಆದರೆ, ತಂಡದಲ್ಲಿ ಕನಿಷ್ಠ 7 ಆಟಗಾರರಾದರೂ ಉಳಿಯಬೇಕಾಗುತ್ತದೆ. ಅಕಸ್ಮಾತ್​, 7ಕ್ಕಿಂತ ಕಡಿಮೆಯಿದ್ದರೆ ಆ ಪಂದ್ಯ ರದ್ದುಗೊಳ್ಳುತ್ತದೆ.

ಯಾವ ತಪ್ಪಿಗೆ ರೆಡ್​ ಕಾರ್ಡ್​?

ಗಂಭೀರ, ಅಪಾಯಕಾರಿ ಆಟ

ಎದುರಾಳಿ ಆಟಗಾರನಿಗೆ ಇಂಜುರಿ ಆಗುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಡೇಂಜರೆಸ್​ ಟ್ಯಾಕಲ್ ಮಾಡುವುದು. ಉದಾಹರಣೆಗೆ, ಕಾಲಿನ ಹಿಂಭಾಗಕ್ಕೆ ಜೋರಾಗಿ ಕಿಕ್​ ಮಾಡುವುದು ಅಥವಾ ತುಂಬಾ ರಫ್ ಆಗಿ ಆಡುವುದು.

ಅಗ್ರೆಸ್ಸಿವ್​ ಆಟ

ಚೆಂಡು ಹತ್ತಿರ ಇಲ್ಲದಿದ್ದರೂ ಎದುರಾಳಿ ಆಟಗಾರ, ರೆಫರಿ, ಸಹ ಆಟಗಾರ ಅಥವಾ ಪ್ರೇಕ್ಷಕರ ಮೇಲೆ ದೈಹಿಕವಾಗಿ ಹಲ್ಲೆಗೈಯುವುದು. ಅಂದರೆ ಕೈಯಿಂದ ಥಳಿಸುವುದು, ನೂಕುವುದು, ಕಾಲಿನಿಂದ ಒದೆಯುವುದು ಅಥವಾ ತಲೆಯಿಂದ ಮುಟ್ಟುವುದು.

ನಿಂದನೆ ಅಥವಾ ಅಶ್ಲೀಲ ಪದ/ಸನ್ನೆ ಬಳಕೆ

ಮೈದಾನದಲ್ಲಿ ರೆಫರಿಗಳ ಎದುರೇ ಎದುರಾಳಿ ತಂಡದ ಆಟಗಾರರ ಅಥವಾ ಪ್ರೇಕ್ಷಕರ ವಿರುದ್ಧ ಕೆಟ್ಟ ಪದಗಳನ್ನು ಬಳಸುವುದು, ನಿಂದಿಸುವುದು ಅಥವಾ ಅಶ್ಲೀಲ ಸನ್ನೆಗಳನ್ನು ಮಾಡುವುದು.

ಉದ್ದೇಶಪೂರ್ವಕ 'ಹ್ಯಾಂಡ್‌ಬಾಲ್'

ಗೋಲ್‌ಕೀಪರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ, ತನ್ನ ಕೈಯನ್ನು ಬಳಸಿ ಎದುರಾಳಿ ತಂಡದ ಗೋಲನ್ನು ತಡೆಯುವುದು.

DOGSO ರೂಲ್ಸ್​

ಎದುರಾಳಿ ಆಟಗಾರನು ಸುಲಭವಾಗಿ ಗೋಲು ಬಾರಿಸುವ ಸಮಯದಲ್ಲಿ, ಆತನನ್ನು ನಿಯಮಗಳನ್ನು ಉಲ್ಲಂಘಿಸಿ, ಹಿಂದಿನಿಂದ ತಳ್ಳುವುದು ಅಥವಾ ಕಾಲಿಗೆ ಅಡ್ಡಹಾಕಿ ಬೀಳಿಸಿ ಗೋಲು ತಪ್ಪಿಸುವ ಕೆಲಸ ಒಪ್ಪುವಂತದ್ದಲ್ಲ

ಫುಟ್‌ಬಾಲ್‌ನಲ್ಲಿ ರೆಡ್ ಕಾರ್ಡ್ ನಿಯಮಗಳೇನು?

  • ತಕ್ಷಣ ಹೊರಕ್ಕೆ: ರೆಡ್ ಕಾರ್ಡ್ ಪಡೆದ ಆಟಗಾರ ಆ ಕೂಡಲೇ ಮೈದಾನದಿಂದ ಹೊರಹೋಗಬೇಕು
  • ಬದಲಿ ಆಟಗಾರನಿಗೆ ಅವಕಾಶವಿಲ್ಲ: ಹೊರಹೋದ ಆಟಗಾರನ ಜಾಗಕ್ಕೆ ಮತ್ತೊಬ್ಬ ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅನುಮತಿಯಿಲ್ಲ. ಇದರಿಂದ ಆ ತಂಡ ಪಂದ್ಯ ಮುಗಿಯುವವರೆಗೆ ಒಬ್ಬ ಆಟಗಾರನ ಕೊರತೆಯೊಂದಿಗೆ ಆಡುವುದು ಅನಿವಾರ್ಯ.
  • ಮುಂದಿನ ಪಂದ್ಯಕ್ಕಿಲ್ಲ: ನೇರವಾಗಿ ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಸಾಮಾನ್ಯವಾಗಿ ಮುಂದಿನ ಒಂದು ಪಂದ್ಯದಲ್ಲಿ ಆಡದಂತೆ ನಿಷೇಧ ಹೇರಲಾಗುತ್ತದೆ.
  • ಕಠಿಣ ಶಿಕ್ಷೆ: ಆಟಗಾರರ ತಪ್ಪು ತುಂಬಾ ಗಂಭೀರವಾಗಿದ್ದರೆ, ಫಿಫಾದ ಶಿಸ್ತು ಸಮಿತಿಯು ಆ ಆಟಗಾರರ ಮೇಲಿನ ನಿಷೇಧವನ್ನು ಒಂದಕ್ಕಿಂತ ಹೆಚ್ಚು ಪಂದ್ಯಗಳಿಗೆ ವಿಸ್ತರಿಸುವ ಎಲ್ಲ ಅಧಿಕಾರವನ್ನು ಹೊಂದಿರುತ್ತಾರೆ. ಇದು ಗಮನಾರ್ಹ,(ಏಜೆನ್ಸೀಸ್).