ಒಂದೇ ಪಂದ್ಯದಲ್ಲಿ ಸಿಡಿದಿದ್ದ ಭರ್ತಿ 12 ಗೋಲುಗಳು
- ಒಂದೇ ಪಂದ್ಯದಲ್ಲಿ ಸಿಡಿದಿದ್ದ ಭರ್ತಿ 12 ಗೋಲುಗಳು
- 71 ವರ್ಷಗಳಾದರೂ ಮುರಿಯಲಾಗದ ಈ ದಾಖಲೆ
- ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವಿನ ಆ ಐತಿಹಾಸಿಕ ಪಂದ್ಯದಲ್ಲಿ ಏನಾಗಿತ್ತು?
ಫಿಫಾ: ಕ್ರಿಕೆಟ್ನಲ್ಲಿ ಹೇಗೆ ಐಸಿಸಿ ವಿಶ್ವಕಪ್ ಇರುತ್ತದೆಯೋ ಅದೇ ರೀತಿ ಫುಟ್ಬಾಲ್ ಜಗತ್ತಿನಲ್ಲಿ ಫಿಫಾ ವಿಶ್ವಕಪ್(FIFA WorldCup) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಫಿಫಾನಲ್ಲಿ ಪ್ರಪಂಚದ ಸುಮಾರು 48 ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸಿ ಟ್ರೋಫಿಗಾಗಿ ಪೈಪೋಟಿ ನಡೆಸುತ್ತಾರೆ.
ಈ ಫಿಫಾ ವಿಶ್ವಕಪ್ ಜಗತ್ತಿನ ಅತ್ಯಂತ ಹಳೆಯ ವಿಶ್ವಕಪ್ಗಳಲ್ಲಿ ಒಂದಾಗಿದ್ದು, ಇದು 1930 ರಂದು ಉರುಗ್ವೆ ದೇಶದಲ್ಲಿ ಮೊದಲ ಫಿಫಾ ವಿಶ್ವಕಪ್ಅನ್ನು ಆರಂಭಿಸಲಾಯಿತು. ಅಲ್ಲಿಂದ ಇಲ್ಲಿವರೆಗೆ ಈ ವಿಶ್ವಕಪ್ನಲ್ಲಿ ಸುಮಾರು 2700 ಕ್ಕೂ ಅಧಿಕ ಗೋಲ್ಗಳು ದಾಖಲಾಗಿವೆ.
ಆದರೆ 1954 ರ ಫಿಫಾದ ಒಂದು ಪಂದ್ಯದಲ್ಲಿ ಗಳಿಸಲಾದ ಗರಿಷ್ಟ ಗೋಲಿನ ದಾಖಲೆಯನ್ನು ಇನ್ನುವರೆಗೆ ಯಾವ ತಂಡವು ಮುರಿಯಲು ಸಾಧ್ಯವಾಗಿಲ್ಲ ಎಂದರೆ ನೀವು ನಂಬಲೇ ಬೇಕು.
ಒಂದೇ ಪಂದ್ಯ 12 ಗೋಲು!
ಫಿಫಾ ವಿಶ್ವಕಪ್ನಲ್ಲಿ ಒಂದು ಪಂದ್ಯಲ್ಲಿ ಅತ್ಯಂತ ಹೆಚ್ಚು ಗೋಲು ದಾಖಲಾದ ಪಂದ್ಯವೆಂದರೆ ಅದು 1954 ರ ಕ್ವಾಟರ್ ಫೈನಲ್ ಪಂದ್ಯ. ಈ ಪಂದ್ಯದಲ್ಲಿ ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಪಂದ್ಯ ಆರಂಭವಾದ ಕೇವಲ 23 ನಿಮಿಷಗಳಲ್ಲಿ ಸ್ವಿಟ್ಜರ್ಲ್ಯಾಂಡ್ ತಂಡ 3 ಗೋಲುಗಳನ್ನುಗಳಿಸಿ ಸ್ಪೋಟಕ ಆರಂಭಮಾಡಿತು. ನಂತರದ 25 ನಿಮಿಷಗಳಲ್ಲಿ ಆಸ್ಟ್ರಿಯಾ 5 ಗೋಲುಗಳನ್ನು ಗಳಿಸಿತು. ಹಾಪ್ಟೈಮ್ ಹೊತ್ತಿಗೆ ಆಸ್ಟ್ರಿಯಾ 5 ಗೋಲುಗಳನ್ನು ಗಳಿಸಿದ್ದರೆ, ಸ್ವಿಟ್ಜರ್ಲ್ಯಾಂಡ್ 4 ಗೋಲುಗಳನ್ನು ಗಳಿಸಿತ್ತು.
ಪಂದ್ಯದ ಕೊನೆಯ ವಿಷಲ್ ಆದಾಗ ಆಸ್ಟ್ರಿಯಾ 7 ಗೋಲುಗಳನ್ನು ಗಳಿಸಿದ್ದರೆ ಸ್ವಿಟ್ಜರ್ಲ್ಯಾಂಡ್ 5 ಗೋಲುಗಳನ್ನು ಗಳಿಸಿಕೊಂಡಿತ್ತು. ಎರಡು ತಂಡಗಳು ಒಟ್ಟಾರೆ 12 ಗೋಲುಗಳನ್ನು ಗಳಿಸಿ ನೂತನ ದಾಖಲೆ ನಿರ್ಮಿಸಿದವು. ಈ ದಾಖಲೆ ಸೃಷ್ಟಿಯಾಗಿ 71 ವರ್ಷ ಕಳೆದರೂ ಯಾವ ತಂಡವು ಇದನ್ನು ಮುರಿಯಲಾಗಿಲ್ಲ.
11 ಗೋಲ್ಗಳ 3 ಪಂದ್ಯಗಳು
ಒಟ್ಟಾರೆ 12 ಗೋಲುಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೂ 11 ಗೋಲುಗಳನ್ನು ಗಳಿಸಿ ಇನ್ನೇನು ಈ ದಾಖಲೆ ಮುರಿಯುತ್ತದೆ ಎಂದು 3 ಪಂದ್ಯಗಳಲ್ಲಿ ಅನ್ನಿಸಿದುಂಟು.
ಇದೇ 1954 ರ ಫಿಫಾನಲ್ಲಿ ಹಂಗೇರಿ ಮತ್ತು ಪಶ್ಚಿಮ ಜರ್ಮನಿ ನಡುವಿನ ಪಂದ್ಯದಲ್ಲಿ ಹಂಗೇರಿ ತಂಡ 8 ಗೋಲುಗಳನ್ನು ಗಳಿಸಿದರೆ ಪಶ್ಚಿಮ ಜರ್ಮನಿ ತಂಡ ಕೇವಲ 3 ಗೋಲುಗಳನ್ನು ಗಳಿಸಿ ಹೀನಾಯವಾಗಿ ಸೋತಿತ್ತು. ಆದರೆ ಆ ವರ್ಷದ ಫಿಫಾ ವಿಶ್ವಕಪ್ನ್ನು ಪಶ್ಚಿಮ ಜರ್ಮನಿ ತಂಡವೇ ಗೆದ್ದುಕೊಂಡಿದ್ದು ವಿಶೇಷ.
1938 ರ ಬ್ರೆಜಿಲ್ ಹಾಗೂ ಪೊಲೆಂಡ್ ನಡುವಿನ ಪಂದ್ಯದಲ್ಲಿ ಸಹ 11 ಗೋಲುಗಳನ್ನು ಗಳಿಸಲಾಗಿತ್ತು. ಬ್ರೆಜಿಲ್ 6 ಗೋಲುಗಳನ್ನು ಗಳಿಸಿದರೆ ಪೊಲೆಂಡ್ 5 ಗೋಲುಗಳನ್ನು ಗಳಿಸಿ ಸೋಲುಂಡಿತ್ತು.
ನಂತರ 1982 ರಲ್ಲಿ ಎಲ್ ಸಾಲ್ವಡಾರ್ ಮತ್ತು ಹಂಗೇರಿ ನಡುವಿನ ಪಂದ್ಯದಲ್ಲಿ ಮತ್ತೆ 11 ಗೋಲುಗಳು ದಾಖಲಾಗಿದ್ದವು. ಈ ಪಂದ್ಯದಲ್ಲಿ ಹಂಗೇರಿ ಭರ್ತಿ 10 ಗೋಲುಗಳನ್ನು ದಾಖಲಿಸಿ ಒಂದು ಪಂದ್ಯದಲ್ಲಿ ಅತ್ಯಂತ ಹೆಚ್ಚು ಗೋಲು ಗಳಿಸಿದ ತಂಡ ಎಂದ ದಾಖಲೆಯನ್ನು ತನ್ನದಾಗಿಸಿಕೊಂಡಿತು,(ಏಜನ್ಸೀಸ್).