ಕೆಎಲ್​ ರಾಹುಲ್​​ 
FIFA ವಿಶ್ವಕಪ್

ವಿಂಡೀಸ್​ಗೆ ವೈಟ್​ವಾಷ್ ತಪ್ಪಿಸಿದ ಶೈ ಹೋಪ್: ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್!

ನಾಯಕ ಶೈ ಹೋಪ್ (162* ರನ್, 143 ಎಸೆತ, 17 ಬೌಂಡರಿ, 3 ಸಿಕ್ಸರ್) ಸಾಹಸದ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಆತಿಥೇಯ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಷ್‌ನಿಂದ ಪಾರಾಯಿತು.

ವೆಸ್ಟ್ ಇಂಡೀಸ್

ಮುಲ್ಲನ್‌ಪುರ: ನಾಯಕ ಶೈ ಹೋಪ್ (162* ರನ್, 143 ಎಸೆತ, 17 ಬೌಂಡರಿ, 3 ಸಿಕ್ಸರ್) ಸಾಹಸದ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಆತಿಥೇಯ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಷ್‌ನಿಂದ ಪಾರಾಯಿತು.

ಕನ್ನಡಿಗ ಕೆಎಲ್ ರಾಹುಲ್ (129* ರನ್, 87 ಎಸೆತ, 10 ಬೌಂಡರಿ, 6 ಸಿಕ್ಸರ್) ಸಿಡಿಸಿದ 9ನೇ ಏಕದಿನ ಶತಕ ಹಾಗೂ ಮಾಜಿ ನಾಯಕ ರೋಹಿತ್ ಶರ್ಮ (92 ರನ್, 85 ಎಸೆತ, 10 ಬೌಂಡರಿ, 3 ಸಿಕ್ಸರ್) ಅಮೋಘ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ವಿಂಡೀಸ್ ಎದುರು 5 ವಿಕೆಟ್‌ಗಳ ಸೋಲುಂಡಿತು. ಇದರಿಂದ ಶುಭಮಾನ್ ಗಿಲ್ ಪಡೆ ಸರಣಿ ಗೆಲುವಿನ ಅಂತರ 2-1ಕ್ಕೆ ಇಳಿದಿದೆ. ಮಂಗಳವಾರದಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ಎಂವೈಎಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ನಾಯಕ ಶುಭಮಾನ್ ಗಿಲ್ (1) ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (0) ವಿಕೆಟ್ ಕಳೆದುಕೊಂಡು ಆರಂಭದಲ್ಲಿ ಆಘಾತ ಅನುಭವಿಸಿತು. ನಂತರ ರೋಹಿತ್ ಶರ್ಮ ಮತ್ತು ಋತುರಾಜ್ ಗಾಯಕ್ವಾಡ್ (57 ರನ್, 69 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಜತೆಯಾಟದಿಂದ ಚೇತರಿಸಿಕೊಂಡಿತು. ಆದರೆ, 225 ರನ್‌ಗೆ 5 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ, 34 ವರ್ಷದ ಕೆಎಲ್ ರಾಹುಲ್ ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಸೇರಿ ಮೊತ್ತವನ್ನು ಹೆಚ್ಚಿಸಿದರು. ಭಾರತ 7 ವಿಕೆಟ್‌ಗೆ 351 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಪ್ರತಿಯಾಗಿ, ಶೈ ಹೋಪ್ ಮತ್ತು ಅಮಿರ್ ಜಾಂಗೋ (67) ಅವರ ಜತೆಯಾಟದ ನೆರವಿನಿಂದ ವಿಂಡೀಸ್ 48.2 ಓವರ್‌ಗಳಲ್ಲಿ 5 ವಿಕೆಟ್‌ಗೆ 352 ರನ್‌ಗಳನ್ನು ಗಳಿಸಿ, ಇನ್ನೂ 10 ಎಸೆತ ಬಾಕಿ ಇರುವಾಗ ಯಶಸ್ವಿಯಾಗಿ ಚೇಸಿಂಗ್ ಮಾಡಿತು.

ಭಾರತ: 7 ವಿಕೆಟ್‌ಗೆ 351 (ರೋಹಿತ್ ಶರ್ಮ 92, ಶುಭಮಾನ್ ಗಿಲ್ 1, ವಿರಾಟ್ ಕೊಹ್ಲಿ 0, ಋತುರಾಜ್ ಗಾಯಕ್ವಾಡ್ 57, ಕೆಎಲ್ ರಾಹುಲ್ 129*, ನಮನ್‌ಧೀರ್ 30, ನಿತೀಶ್ ರೆಡ್ಡಿ 9, ಅಂಶುಲ್ ಕಂಬೋಜ್ 17, ಗುರುನೂರ್ 8*, ಜೈಡೆನ್ ಸೀಲ್ಸ್ 62ಕ್ಕೆ 3, ಕೀಮೊ ಪೌಲ್ 71ಕ್ಕೆ 2).

ವೆಸ್ಟ್ ಇಂಡೀಸ್: 48.2 ಓವರ್‌ಗಳಲ್ಲಿ 5 ವಿಕೆಟ್‌ಗೆ 352 (ಜಾನ್ ಕ್ಯಾಂಪ್‌ಬೆಲ್ 10, ಶೈ ಹೋಪ್ 162*, ಅಮಿರ್ ಜಾಂಗೋ 67, ಶೆರ್ಫಾನ್​​ ರುದರ್‌ಫೋರ್ಡ್ 24, ಕೀಮೊ ಪೌಲ್ 44, ಮ್ಯಾಥ್ಯೂ ಫೋರ್ಡೆ 7, ಗುಡಕೇಶ್ ಮೋತಿ 19*, ಸಿರಾಜ್ 52ಕ್ಕೆ 1, ನಮನ್ ಧೀರ್ 33ಕ್ಕೆ1, ಗುರುನೂರ್ 64ಕ್ಕೆ 1).

129. ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ರನ್ ಸ್ಕೋರ್ ಇದಾಗಿದ್ದು, 5ನೇ ಕ್ರಮಾಂಕದಲ್ಲಿ ಭಾರತ ಪರ 3ನೇ ಗರಿಷ್ಠ ರನ್ ಇದಾಗಿದೆ. ಯುವರಾಜ್ ಸಿಂಗ್ (139), ಎಂಎಸ್ ಧೋನಿ (134) ಮೊದಲೆರಡು ಸ್ಥಾನದಲ್ಲಿದ್ದಾರೆ.

4. ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಭಾರತ ಪರ ಏಕದಿನದಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ಮಾಜಿ ಕ್ರಿಕೆಟಿಗ-ಮುಖ್ಯ ಕೋಚ್ ರಾಹುಲ್ ದ್ರಾವಿಡ್ (4) ದಾಖಲೆ ಸರಿಗಟ್ಟಿದರು. ಎಂಎಸ್ ಧೋನಿ (10) ಅಗ್ರಸ್ಥಾನದಲ್ಲಿದ್ದಾರೆ.