ಅರ್ಜೆಂಟಿನಾ ಫುಟ್ಬಾಲರ್ ಲಿಯೋನಲ್ ಮೆಸ್ಸಿ
- ಫಿಫಾ ವಿಶ್ವಕಪ್‌ನಲ್ಲಿ ಐದು ವಿಶ್ವ ದಾಖಲೆಗಳನ್ನು ಮುರಿಯಲು ಮೆಸ್ಸಿ ಸಜ್ಜು
- ಒಂದೇ ಒಂದು ಪಂದ್ಯದಲ್ಲಿ ಐತಿಹಾಸಿಕ ದಾಖಲೆಯತ್ತ ದಂತಕಥೆಯ ಕಣ್ಣು
Lionel Messi: ಫುಟ್‌ಬಾಲ್ ಜಗತ್ತಿನ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ, ತಮ್ಮ ಮುಂದಿನ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ ಕಣಕ್ಕಿಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ಫುಟ್ಬಾಲ್ ಜಗತ್ತು ಮತ್ತು ಮೆಸ್ಸಿ ಅಭಿಮಾನಿಗಳ ಬಳಗ ತೀವ್ರ ಕಾತರದಿಂದ ಕಾಯುತ್ತಿದೆ.
ವಿಶ್ವಕಪ್ ಇತಿಹಾಸದ ಪುಟದಲ್ಲಿ ಹಲವಾರು ದಾಖಲೆಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಸುವರ್ಣ ಅವಕಾಶವನ್ನು ಈಗ ಮೆಸ್ಸಿಗೆ ಸಿಕ್ಕಿದೆ. ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಸಖತ್ ಫಾರ್ಮ್‌ನಲ್ಲಿರುವ ಲಿಯೋನಲ್, ಆಸ್ಟ್ರಿಯಾ ಎದುರು ಹೊಸ ದಾಖಲೆಗಳನ್ನು ಬರೆಯಲು ಎದುರುನೋಡುತ್ತಿದ್ದಾರೆ.
ಮೆಸ್ಸಿ ಮುಂದಿರುವ ಆ 5 ದಾಖಲೆಗಳು ಯಾವುದು?
1. ಅಲ್ಜೀರಿಯಾ ವಿರುದ್ಧ ಗಳಿಸಿದ ಆಕರ್ಷಕ ಹ್ಯಾಟ್ರಿಕ್ ನೆರವಿನಿಂದ ಮೆಸ್ಸಿ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ ಈಗ 16ಕ್ಕೆ ಏರಿದೆ. ಈ ಮೂಲಕ ಅವರು ಜರ್ಮನಿಯ ದಿಗ್ಗಜ ಆಟಗಾರ ಮಿರೋಸ್ಲಾವ್ ಕ್ಲೋಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮುಂಬರುವ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಇನ್ನೊಂದು ಗೋಲು ಗಳಿಸಿದರೆ, ಕ್ಲೋಸ್ ಅವರನ್ನು ಹಿಂದಿಕ್ಕಿ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ಬಾರಿಸಿದ ಸಾರ್ವಕಾಲಿಕ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
2. ಗರಿಷ್ಠ ಗೋಲು ಬಾರಿಸಿದ ಆಟಗಾರ
ವಿಶ್ವಕಪ್ ವೃತ್ತಿಜೀವನದಲ್ಲಿ ಈಗಾಗಲೇ 24 ಗೋಲುಗಳ ಕೊಡುಗೆ ನೀಡಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೆಸ್ಸಿ, ಆಸ್ಟ್ರಿಯಾ ವಿರುದ್ಧ ಮತ್ತೊಂದು ಗೋಲು ಹೊಡೆದಿದ್ದೇ ಆದರೆ, ಅವರ ಒಟ್ಟು ಕೊಡುಗೆ 25ಕ್ಕೆ ಏರಲಿದೆ. ಇದು ಟೂರ್ನಿಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲು.
3. ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ
6 ವಿಶ್ವಕಪ್ ಆವೃತ್ತಿಗಳಲ್ಲಿ ಭಾಗವಹಿಸಿ ಇಲ್ಲಿಯವರೆಗೆ 27 ಪಂದ್ಯಗಳನ್ನು ಆಡಿರುವ ಮೆಸ್ಸಿ, ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರೆ, ಒಟ್ಟು ಪಂದ್ಯಗಳ ಸಂಖ್ಯೆ 28ಕ್ಕೆ ಏರಲಿದೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಕೂಡ ಫುಟ್ಬಾಲ್ ದಂತಕಥೆಯ ಮುಡಿಗೇರಲಿದೆ.
4. ಅತಿಹೆಚ್ಚು ಪಂದ್ಯ ಗೆದ್ದ ಕ್ಯಾಪ್ಟನ್/ಆಟಗಾರ
ಅರ್ಜೆಂಟೀನಾ ಪರ ಮೆಸ್ಸಿ ಇದುವರೆಗೆ ವಿಶ್ವಕಪ್‌ನಲ್ಲಿ 16 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಕೂಡ 16 ಪಂದ್ಯಗಳ ಗೆಲುವಿನೊಂದಿಗೆ ಮೆಸ್ಸಿ ಜೊತೆ ಅಗ್ರಸ್ಥಾನವನ್ನು ಹಂಚಿಕೊಳ್ಳುತ್ತಾರೆ. ಆಸ್ಟ್ರಿಯಾ ವಿರುದ್ಧ ಅರ್ಜೆಂಟೀನಾ ಏನಾದರೂ ಜಯಗಳಿಸಿದರೆ, ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರ ಎಂಬ ಪಟ್ಟಿಗೆ ಸೇರಲಿದ್ದಾರೆ.
5. ಪೆನಾಲ್ಟಿ ಬಾಕ್ಸ್ ಹೊರಗಿನಿಂದ ಅತ್ಯಧಿಕ ಗೋಲು
ಮೆಸ್ಸಿ ಸದ್ಯ ಬ್ರೆಜಿಲ್‌ನ ರೊಬೆರ್ಟೊ ರಿವೆಲಿನೊ ಅವರೊಂದಿಗೆ ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದ 5 ಲಾಂಗ್-ರೇಂಜ್ ಗೋಲುಗಳನ್ನು ಗಳಿಸಿ, ಜಂಟಿ ದಾಖಲೆ ಹೊಂದಿದ್ದಾರೆ. ಅದೇ, ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿಯೂ ಬಾಕ್ಸ್ ಹೊರಗಿನಿಂದ ಮತ್ತೊಂದು ಆಕರ್ಷಕ ಗೋಲು ಹೊಡೆದರೆ, ಈ ಅಪರೂಪದ ದಾಖಲೆಗಳು ಸಂಪೂರ್ಣವಾಗಿ ಮೆಸ್ಸಿ ಪಾಲಾಗುವುದಂತು ಅಕ್ಷರಶಃ ಖಚಿತ,(ಏಜೆನ್ಸೀಸ್).