ಬ್ರೆಜಿಲ್ ಫುಟ್ಬಾಲ್ ದಿಗ್ಗಜ ನೇಮಾರ್
- ನಾರ್ವೆ ಎದುರು 2-1 ಅಂತರದಲ್ಲಿ ಬ್ರೆಜಿಲ್ಗೆ ಸೋಲು
- ಫಿಫಾ ವಿಶ್ವಕಪ್ ಕನಸು ಭಗ್ನಗೊಂಡ ಬೆನ್ನಲ್ಲೇ ನೇಮಾರ್ ವಿದಾಯ
- ಪುಟ್ಬಾಲ್ ದಂತಕಥೆ ಗುಡ್ಬೈ ಹೇಳಿದ್ದಕ್ಕೆ ಫ್ಯಾನ್ಸ್ ಭಾವುಕ
ನ್ಯೂಜೆರ್ಸಿ: ಪ್ರಸಕ್ತ ನಡೆಯುತ್ತಿರುವ ಫಿಫಾ ವಿಶ್ವಕಪ್‌ನ ನಾಕೌಟ್ ಹಂತದ ಟೂರ್ನಿಯಲ್ಲಿ ಬ್ರೆಜಿಲ್ 1-2 ಅಂತರದಲ್ಲಿ ನಾರ್ವೆ ಎದುರು ಸೋತ ಬೆನ್ನಲ್ಲೇ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ದಂತಕಥೆ ನೇಮಾರ್ ವಿದಾಯ ಹೇಳಿದ್ದಾರೆ.
ವಿಶ್ವಕಪ್‌ನ ರೋಚಕ ರೌಂಡ್ ಆಫ್ 16 ಪಂದ್ಯದಲ್ಲಿ ನಾರ್ವೆ ಎದುರು ಬ್ರೆಜಿಲ್ 2-1 ಗೋಲುಗಳ ಅನಿರೀಕ್ಷಿತ ಸೋಲು ಅನುಭವಿಸಿದ ಬೆನ್ನಲ್ಲೇ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ, ವಿಶ್ವದ ಶ್ರೇಷ್ಠ ಫುಟ್ಬಾಲರ್ಗಳಲ್ಲಿ ಒಬ್ಬರಾದ ನೇಮಾರ್ (34) ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಸಾಧ್ಯವಾಗದ ಹಿನ್ನೆಲೆ ಬೇಸರಗೊಂಡ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್ಬೈ ಹೇಳಿರುವುದು ಸದ್ಯ ದಿಗ್ಗಜನ ಅಪಾರ ಅಭಿಮಾನಿಗಳ ಬಳಗಕ್ಕೆ ಶಾಕ್ ನೀಡಿದೆ.
ಪಂದ್ಯ ಸೋತ ಬಳಿಕ ಭಾವುಕರಾಗಿ ಮಾತನಾಡಿದ ನೇಮಾರ್, "ನನ್ನ ಕೈಲಾದಷ್ಟು ಗೆಲುವು ತಂದುಕೊಡಲು ಪ್ರಯತ್ನಿಸಿದೆ. ಆದರೆ, ಕಡೆಗೂ ಆಗಲಿಲ್ಲ. ಇದೇ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನನ್ನ ಫುಟ್ಬಾಲ್ ಪಯಣ ಆರಂಭವಾಗಿದ್ದು. ಈಗ ಇಲ್ಲೇ ಮುಕ್ತಾಯಗೊಂಡಿದೆ. ಎಲ್ಲವೂ ಇಲ್ಲಿಗೆ ಕೊನೆಗೊಂಡಿದೆ" ಎಂದು ಕಣ್ಣೀರಿಟ್ಟರು. ಇದು ಅವರ ಅಭಿಮಾನಿಗಳ ಕಣ್ಣಂಚಲ್ಲಿಯೂ ನೀರು ತಂದಿತು.
ಆಗಸ್ಟ್ 10, 2010ರಂದು ಇದೇ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಅಮೆರಿಕ ವಿರುದ್ಧದ ಪಂದ್ಯದ ಮೂಲಕ ಬ್ರೆಜಿಲ್ ಜೆರ್ಸಿ ಧರಿಸಿದ ನೇಮಾರ್, ಇಡೀ ವಿಶ್ವಕ್ಕೆ ತಾನೊಬ್ಬ ಅದ್ಭುತ ಫುಟ್ಬಾಲರ್ ಎಂಬುದನ್ನು ಬ್ರೆಜಿಲ್ ತಂಡದ ಮೂಲಕ ಸಾಬೀತುಪಡಿಸಿದರು. ಕಾಕತಾಳೀಯ ಎಂಬಂತೆ ಫಿಫಾ ವಿಶ್ವಕಪ್ 2026ರಲ್ಲಿ ನಾರ್ವೆ ವಿರುದ್ಧದ ಪಂದ್ಯದಲ್ಲಿಯೂ ಇದೇ ಮೈದಾನದಲ್ಲಿ ಅವರ ಪಯಣ ಕೊನೆಗೊಂಡಿದ್ದು, ತಮ್ಮ ಸುದೀರ್ಘ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಬ್ರೆಜಿಲ್ ಕನಸು ಭಗ್ನ, ಹಾಲಂಡ್ 'ಡಬಲ್ ಧಮಾಕಾ'
ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಬ್ರೆಜಿಲ್, ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭದಿಂದಲೂ ತನ್ನ ಹಿಂದಿನ ಲಯ ಕಂಡುಕೊಳ್ಳಲು ಪರದಾಡುತ್ತಿತ್ತು. ಕಳೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಹರಸಾಹಸ ಪಟ್ಟು ಗೆದ್ದಿದ್ದ ಬ್ರೆಜಿಲ್, ನಾರ್ವೆ ವಿರುದ್ಧ ಸಂಪೂರ್ಣ ಮಕಾಡೆ ಮಲಗಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿತು.
ಮೊದಲಾರ್ಧದಲ್ಲಿ ಬ್ರೆಜಿಲ್ ಪೆನಾಲ್ಟಿ ಕಿಕ್ ಒಂದನ್ನು ಮಿಸ್ ಮಾಡಿಕೊಂಡರೆ, ನಾರ್ವೆಯ ಒಂದು ಗೋಲನ್ನು ರೆಫರಿಗಳು ರಿಜೆಕ್ಟ್ ಮಾಡಿದರು. ಹೀಗಾಗಿ ಮೊದಲಾರ್ಧ 0-0 ಸಮಬಲದಲ್ಲಿತ್ತು. ಆದರೆ, ದ್ವಿತೀಯಾರ್ಧದಲ್ಲಿ ನಾರ್ವೆಯ ಸ್ಟಾರ್ ಸ್ಟ್ರೈಕರ್ ಆರ್ಲಿಂಗ್ ಹಾಲಂಡ್ ಅಕ್ಷರಶಃ ಅಬ್ಬರಿಸಿದರು. ಆಂಡ್ರಿಯಾಸ್ ಶ್ಜೆಲ್ಡೆರಪ್ ಕೊಟ್ಟ ಕ್ರಾಸ್ ಅನ್ನು ಹಾಲಂಡ್ ಅದ್ಭುತ ಹೆಡರ್ ಮೂಲಕ ಗೋಲಿಗೆ ನೂಕಿದ್ದೇ ಪಂದ್ಯದ ದಿಕ್ಕನ್ನು ಬದಲಿಸಿದ್ದು.
ಕೆಲವೇ ನಿಮಿಷಗಳ ಅಂತರದಲ್ಲಿ ಡಿ-ಬಾಕ್ಸ್‌ನ ಅಂಚಿನಿಂದ ಲೋ-ಶಾಟ್ ಗೋಲು ಬಾರಿಸುವ ಮೂಲಕ ಹಾಲಂಡ್ ನಾರ್ವೆಗೆ 2-0 ಮುನ್ನಡೆ ತಂದುಕೊಟ್ಟರು. ಇನ್ನು, ಹೆಚ್ಚುವರಿ ಸಮಯದ 10ನೇ ನಿಮಿಷದಲ್ಲಿ ನೇಮಾರ್ ಪೆನಾಲ್ಟಿ ಮೂಲಕ ಬ್ರೆಜಿಲ್ ಪರ ಏಕೈಕ ಗೋಲು ಗಳಿಸಿದ್ದೇ ಆದರೂ ಅದು ಬ್ರೆಜಿಲ್ ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ,(ಏಜೆನ್ಸೀಸ್).