ವಿಜಯವಾಡ: ಹಾಲಿ ರನ್ನರ್ ಅಪ್ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ 92ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಆಂಧ್ರ ಎದುರು ಇನಿಂಗ್ಸ್ ಹಿನ್ನಡೆ ಕಂಡಿದೆ. ಪ್ರಮುಖ ವೇಗಿಗಳ ಗೈರಿನಲ್ಲಿ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ (72ಕ್ಕೆ 3) ಕಡಿವಾಣ ಹೇರಿದ ನಡುವೆಯೂ ಸೀರಂ ವೆಂಕಟ ರಾಹುಲ್ (108* ರನ್, 187 ಎಸೆತ, 10 ಬೌಂಡರಿ) ಶತಕದ ಜತೆಗೆ ರೇವಂತ್ ರೆಡ್ಡಿ (97 ರನ್, 143 ಎಸೆತ, 13 ಬೌಂಡರಿ) ಆಕರ್ಷಕ ಬ್ಯಾಟಿಂಗ್ ಎದುರು ಆರ್.ಸ್ಮರಣ್ ಬಳಗ ವಿಕೆಟ್‌ಗಾಗಿ ಪರದಾಡಿತು.
ಮುಲಪಾಡುವಿನ ಡಾ. ಗೋಕರಾಜು ಲೈಲಾ ಗಂಗರಾಜು ಎಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಸೋಮವಾರ 2 ವಿಕೆಟ್‌ಗೆ 10 ರನ್‌ಗಳಿಂದ ಬೆಳಗ್ಗೆ ಆಟ ಆರಂಭಿಸಿದ ಆಂಧ್ರ ತಂಡ, ಐದನೇ ವಿಕೆಟ್‌ಗೆ ಸೀರಂ ರಾಹುಲ್ ಹಾಗೂ ರೇವಂತ್ ರೆಡ್ಡಿ ನಡೆಸಿದ ಭರ್ಜರಿ ಜತೆಯಾಟದ ನೆರವಿನಿಂದ ಚಹಾ ವಿರಾಮಕ್ಕೆ ಮುನ್ನಡೆ ಪಡೆಯಿತು. ದಿನದಂತ್ಯಕ್ಕೆ 95 ಓವರ್‌ಗಳಲ್ಲಿ 6 ವಿಕೆಟ್‌ಗೆ 331 ರನ್ ಕಲೆಹಾಕಿರುವ ಆಂಧ್ರ, ಸದ್ಯ 57 ರನ್ ಮುನ್ನಡೆಯಲ್ಲಿದೆ. ಮೊದಲ ದಿನದ ಶತಕವೀರ ಆರ್.ಸ್ಮರಣ್ ನಾಯಕ್ವದ ಕರ್ನಾಟಕ ತಂಡ ಇನ್ನು ಎರಡು ದಿನ ಆಟದಲ್ಲಿ ಗೆಲುವು ಸಾಧಿಸಿದರಷ್ಟೇ ಪೂರ್ಣ ಅಂಕ ಕಲೆಹಾಕಲಿದೆ. ಒಂದು ವೇಳೆ ಡ್ರಾಗೆ ಸಮಾಧಾನಪಟ್ಟರೆ ಕೇವಲ 1 ಅಂಕಕ್ಕೆ ತೃಪ್ತಿಪಡಲಿದೆ.
ಕರ್ನಾಟಕ: 82.2 ಓವರ್‌ಗಳಲ್ಲಿ 274. ಆಂಧ್ರ: 95 ಓವರ್‌ಗಳಲ್ಲಿ 6 ವಿಕೆಟ್‌ಗೆ 331 (ಅಭಿಷೇಕ್ ರೆಡ್ಡಿ 30, ಶೇಕ್ ರಶೀದ್ 54, ರಿಕಿ ಭುಯ್ 18, ಎಸ್‌ವಿ ರಾಹುಲ್ 108*, ರೇವಂತ್ ರೆಡ್ಡಿ 97, ವಿ. ಶಶಿಕಾಂತ್ 6*, ಶಿಖರ್ ಶೆಟ್ಟಿ 72ಕ್ಕೆ 3, ಮಾಧವ್ ಬಜಾಜ್ 88ಕ್ಕೆ 2, ರಿತೇಶ್ ಭಟ್ಕಳ್ 71ಕ್ಕೆ 1).
ಕಾಡಿದ ರಾಹುಲ್-ರೇವಂತ್
ಅಭಿಷೇಕ್ ರೆಡ್ಡಿ (30) ಹಾಗೂ ಶೇಕ್ ರಶೀದ್ (54) ಜತೆಯಾಟ ಮುರಿದ ಶಿಖರ್ ಶೆಟ್ಟಿ ರಾಜ್ಯದ ಮುನ್ನಡೆಯ ಆಸೆಗೆ ಬಲ ತುಂಬಿದರು. ನಂತರ ಭೋಜನಾ ವಿರಾಮಕ್ಕೆ ಮುನ್ನ ನಾಯಕ ರಿಕಿ ಭುಯ್ (18) ಹಾಗೂ ಶೇಕ್ ರಶೀದ್ ಅವರ ವಿಕೆಟ್ ಕ್ರಮವಾಗಿ ರಿತೇಶ್ ಭಟ್ಕಳ್, ಮಾಧವ್ ಬಜಾಜ್ ಕಬಳಿಸಿದರು. ವಿರಾಮದ ನಂತರ ಸೀರಂ ರಾಹುಲ್ ಹಾಗೂ ರೇವಂತ್ ರೆಡ್ಡಿ ಜೋಡಿ ಕರ್ನಾಟಕ ಅನನುಭವಿ ಬೌಲರ್‌ಗಳು ಕಾಡಿದರು.
ಬರೋಬ್ಬರಿ 51 ಓವರ್ ರಾಜ್ಯದ ಬೌಲರ್‌ಗಳಿಗೆ ಸವಾಲೊಡ್ಡಿದ ಇವರಿಬ್ಬರು ಆರನೇ ವಿಕೆಟ್‌ಗೆ 306 ಎಸೆತಗಳಲ್ಲಿ 202 ಸೇರಿಸಿದರು. 19 ವರ್ಷದ ಸೀರಂ ರಾಹುಲ್ ಪದಾರ್ಪಣೆಯ ಪಂದ್ಯದಲ್ಲಿ ಶತಕ ಬಾರಿಸಿ ಗಮನ ಸೆಳೆದರು. ಚಹಾ ವಿರಾಮದ ನಂತರ ದಿನದಾಟ ಮುಕ್ತಾಯಕ್ಕೆ ಮುನ್ನ ರೇವಂತ್ ರೆಡ್ಡಿ, ಶಿಖರ್ ಶೆಟ್ಟಿ ಎಸೆತದಲ್ಲಿ ಸ್ಲಿಪ್‌ನಲ್ಲಿ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ನಂತರ ಸೀರಂ ರಾಹುಲ್ ಜತೆಗೂಡಿದ ವೆಂಕಟ್ ಶಶಿಕಾಂತ್ (6*) ಮುರಿಯದ 7ನೇ ವಿಕೆಟ್‌ಗೆ 33 ಎಸೆತಗಳಲ್ಲಿ 13 ರನ್‌ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಜಡೇಜಾ ಶತಕ, ತುಷಾರ್ ಹ್ಯಾಟ್ರಿಕ್
ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ (102 ರನ್, 209 ಎಸೆತ, 7 ಬೌಂಡರಿ) ಸೌರಾಷ್ಟ್ರ ಪರ ಶತಕ ಸಿಡಿಸಿದ್ದು, ಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 16ನೇ ಶತಕ ಇದಾಗಿದೆ. ಜಡೇಜಾ ಹಾಗೂ ಪ್ರೇರಕ್ ಮಂಕಡ್ (129) ಶತಕಗಳ ನೆರವಿನಿಂದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 110.4 ಓವರ್‌ಗಳಲ್ಲಿ 392 ರನ್‌ಗಳಿಸಿದ್ದು, ಇದಕ್ಕೆ ಉತ್ತರವಾಗಿ ಉತ್ತರಾಖಂಡ ದಿನದಂತ್ಯಕ್ಕೆ 55 ಓವರ್‌ಗಳಲ್ಲಿ 3 ವಿಕೆಟ್‌ಗೆ 122 ರನ್ ಕಲೆಹಾಕಿದೆ.
ಮುಂಬೈ ವೇಗಿ ತುಷಾರ್ ದೇಶಪಾಂಡೆ (17ಕ್ಕೆ 5) ಚಂಡೀಗಢ ಎದುರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಸಾಧನೆ ಮಾಡಿದ್ದು, ಮುಂಬೈನ ಆರನೇ ವೇಗಿ ಎನಿಸಿದ್ದಾರೆ.