FIFA WC: ಬಾಸ್ಟನ್‌ನಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಜರ್ಮನಿಗೆ ಪರಾಗ್ವೆ ತಂಡ ಬಿಗ್ ಶಾಕ್ ನೀಡಿದೆ. ರೋಚಕ ಪಂದ್ಯದಲ್ಲಿ ಪರಾಗ್ವೆ 4-3 ಅಂತರದಿಂದ (ಪೆನಾಲ್ಟಿ ಶೂಟೌಟ್) ಜರ್ಮನಿಯನ್ನು ಮಣಿಸಿ, ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿರುವುದು ತಂಡದ ಅಭಿಮಾನಿಗಳಲ್ಲಿ ಭಾರಿ ಸಂತಸ ತಂದಿದೆ. ಮತ್ತೊಂದೆಡೆ, ತನ್ನದೇ ಮಿಸ್ಟೇಕ್ಗಳಿಂದ ಜರ್ಮನಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯದ ಆರಂಭದಲ್ಲಿ ಜರ್ಮನಿ ತಂಡವು ತನ್ನ ಸ್ಟಾರ್ ಪ್ಲೇಯರ್ ಜಮಾಲ್ ಮುಸಿಯಾಲಾ ಅವರನ್ನು ಆಡಿಸದೆ ಹೋಗಿದ್ದು ಫುಟ್ಬಾಲ್ ಪ್ರೇಮಿಗಳ ಆಶ್ಚರ್ಯಕ್ಕೆ ಕಾರಣವಾಯಿತು. ಮೊದಲ 30 ನಿಮಿಷ ಜರ್ಮನಿ ಆಟದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೂ, ಗೋಲು ಗಳಿಸುವಲ್ಲಿ ಎಡವಿತು. ಆದರೆ, 42ನೇ ನಿಮಿಷದಲ್ಲಿ ಪರಾಗ್ವೆ ಪಂದ್ಯಕ್ಕೆ ಹೊಸ ಟ್ವಿಸ್ಟ್ ನೀಡಿತು. ಮಟಿಯಾಸ್ ಗ್ಯಾಲರ್ಜಾ ನೀಡಿದ ಅದ್ಭುತ ಪಾಸ್ ಅನ್ನು ಬಳಸಿಕೊಂಡ ಜುಲಿಯೊ ಎನ್ಸಿಸೊ, ಜರ್ಮನಿಯ ಗೋಲ್‌ಕೀಪರ್ ಮ್ಯಾನುಯೆಲ್ ನಾಯರ್ ಅವರ ಕಣ್ತಪ್ಪಿಸಿ, ಭರ್ಜರಿ ಗೋಲು ಬಾರಿಸಿದರು. ಅಲ್ಲಿಗೆ ಮೊದಲಾರ್ಧದಲ್ಲಿ ಪರಾಗ್ವೆ 1-0 ಮುನ್ನಡೆ ಸಾಧಿಸಿತು.
ಇನ್ನು, ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ಜರ್ಮನಿ, 54ನೇ ನಿಮಿಷದಲ್ಲಿ ಫ್ಲೋರಿಯನ್ ವಿಟ್ಸ್ ನೀಡಿದ ಕ್ರಾಸ್ ಅನ್ನು ಕಾಯ್ ಹ್ಯಾವರ್ಟ್ಜ್ ಹೆಡರ್ ಮೂಲಕ ಗೋಲು ಹೊಡೆದು 1-1 ಅಂತರದಲ್ಲಿ ಪಂದ್ಯವನ್ನು ಸಮಬಲಗೊಳಿಸಿತು. ಅದರ ಬೆನ್ನಲ್ಲೇ ತಂಡವು ಮುಸಿಯಾಲಾ ಅವರನ್ನು ಮೈದಾನಕ್ಕಿಳಿಸಿತು. ಆದ್ರೆ, ಯಾರೇ ಬಂದರೂ ಪರಾಗ್ವೆಯ ಗೋಲ್‌ಕೀಪರ್ ಒರ್ಲ್ಯಾಂಡೊ ಗಿಲ್ ಮಾತ್ರ, ಗೋಲಿನ ಒಳಗೆ ಬಾಲ್ ಹೋಗದಂತೆ ತಡೆದಿದ್ದು ನೋಡುಗರ ಹುಬ್ಬೇರಿಸಿತು.
ಎಕ್ಸ್‌ಟ್ರಾ ಟೈಮ್: ಜರ್ಮನಿ ಕೈತಪ್ಪಿದ ಅದೃಷ್ಟ
ಎಕ್ಸ್‌ಟ್ರಾ ಟೈಮ್‌ನಲ್ಲಿ ಜರ್ಮನಿಯ ಜೊನಾಥನ್ ತಾಹ್ ಅವರು ಗೋಲು ಬಾರಿಸಿ, ಅದಾಗಲೇ ಸಂಭ್ರಮಿಸುತ್ತಿದ್ದರು. ಆದರೆ, ಪರಾಗ್ವೆ ಗೋಲ್‌ಕೀಪರ್ ಮೇಲಿನ ನಿಯಮ ಉಲ್ಲಂಘನೆ ಕಾರಣಕ್ಕೆ ರೆಫರಿ ಆ ಗೋಲನ್ನು ಅಮಾನ್ಯ ಎಂದು ನಿರ್ಧರಿಸಿದರು. ಇದು ಜರ್ಮನಿಯಿಂದ ಪಂದ್ಯವನ್ನು ಕಸಿದುಕೊಂಡಿತು. ಉಭಯ ತಂಡಗಳ ಆಟಗಾರರ ನಡುವಿನ ತೀವ್ರ ಪೈಪೋಟಿಯಿಂದಾಗಿ ರೆಫರಿ ಬರೋಬ್ಬರಿ 7 ಬಾರಿ ಯೆಲ್ಲೋ ಕಾರ್ಡ್‌ಗಳನ್ನು ತೋರಿಸಿದರು. ಎಕ್ಸ್‌ಟ್ರಾ ಟೈಮ್‌ನಲ್ಲೂ ರಿಸಲ್ಟ್ ಬಾರದಿದ್ದಾಗ ಪಂದ್ಯ ಪೆನಾಲ್ಟಿ ಶೂಟೌಟ್ ಕಡೆ ವಾಲಿತು.
ಪೆನಾಲ್ಟಿ ಶೂಟೌಟ್ (ಪರಾಗ್ವೆ 4 -3 ಜರ್ಮನಿ)
ಪೆನಾಲ್ಟಿ ಶೂಟೌಟ್‌ನಲ್ಲಿ ಪರಾಗ್ವೆಯ ಗೋಲ್‌ಕೀಪರ್ ಒರ್ಲ್ಯಾಂಡೊ ಗಿಲ್ ಅಸಲಿ ಹೀರೊ ಆಗಿ ಮಿಂಚಿದರು. ಪರಾಗ್ವೆ ಪರ ಮೌರಿಸಿಯೊ, ಗುಸ್ಟಾವೊ ಗೊಮೆಜ್, ಮಟಿಯಾಸ್ ಗ್ಯಾಲರ್ಜಾ ಮತ್ತು ಜೋಸ್ ಕೆನಾಲೆ ಗೋಲು ಬಾರಿಸಿದರು. ಇನ್ನು ಜರ್ಮನಿ ಪರ ಜೋಶುವಾ ಕಿಮ್ಮಿಚ್, ಜಮಾಲ್ ಮುಸಿಯಾಲಾ ಮತ್ತು ನದೀಮ್ ಅಮಿರಿ ಗೋಲ್ ಹೊಡೆದ ಆಟಗಾರರು.
ಇದೇ ಟರ್ನಿಂಗ್ ಪಾಯಿಂಟ್
ಜರ್ಮನಿಯ ಸ್ಟಾರ್ ಪ್ಲೇಯರ್ ಕಾಯ್ ಹ್ಯಾವರ್ಟ್ಜ್ ಅವರ ಮೊದಲ ಕಿಕ್ ಅನ್ನೇ ತಡೆದ ಪರಾಗ್ವೆ ಕೀಪರ್ ಗಿಲ್, ಬಳಿಕ ನಿಕ್ ವೋಲ್ಟ್‌ಮೇಡ್ ಮತ್ತು ಜೊನಾಥನ್ ತಾಹ್ ಅವರ ಶಾಟ್‌ಗಳನ್ನು ಅದ್ಭುತವಾಗಿ ಬ್ಲಾಕ್ ಮಾಡಿ ಜರ್ಮನಿಗೆ ಶಾಕ್ ನೀಡಿದರು. ಈ ಮೂಲಕ ಪರಾಗ್ವೆ ರೋಚಕ ಜಯ ಸಾಧಿಸಿದರೆ, ಜರ್ಮನಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು,(ಏಜೆನ್ಸೀಸ್).