ಬೆಂಗಳೂರು: ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟ (ಬಿಎಫ್ಐ) ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ (ಕೆಎಸ್‌ಎಸ್‌ಬಿ) ಸಹಯೋಗದಲ್ಲಿ ಅಕ್ಟೋಬರ್ 20ರಿಂದ 25 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ (ಡಬ್ಲ್ಯುಬಿಎಲ್) ಏಷ್ಯಾ ಟೂರ್ನಿ ನಿಗದಿಯಾಗಿದೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ) ಹಾಗೂ ಫಿಬಾ ಏಷ್ಯಾ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಏಷ್ಯಾದ ಅಗ್ರ ಕ್ಲಬ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಏಷ್ಯಾದ ಆಯ್ದ ದೇಶಗಳ ಮಹಿಳಾ ಬಾಸ್ಕೆಟ್‌ಬಾಲ್ ರಾಷ್ಟ್ರೀಯ ಚಾಂಪಿಯನ್ ತಂಡಗಳ ಜತೆಗೆ ಅಮೆರಿಕದ ಎನ್‌ಬಿಎ ಲೀಗ್‌ನಲ್ಲಿ ಆಡಿರುವ ತಾರೆಯರು ಈ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸಿಚುವಾನ್ ಯುಯಾಂದ ಮೀಲೆ (ಚೀನಾ), ಡೆನ್ಸೊ ಐರಿಸ್ (ಜಪಾನ್), ಕೆ.ಬಿ.ಸ್ಟಾರ್ಸ್ (ಕೊರಿಯಾ), ಕ್ಯಾಥೆ ಲೈಫ್ ಟೈಗರ್ಸ್ (ಚೀನಾ ತೈಪೆ), ಅಕಾರಿ ಸ್ಪಾರ್ಕ್ಸ್ (ಫಿಲಿಫೈನ್ಸ್) ತಂಡಗಳ ಜತೆಗೆ ಆತಿಥೇಯ ಭಾರತದ ರಾಷ್ಟ್ರೀಯ ಚಾಂಪಿಯನ್ ಕ್ಲಬ್ ಭಾರತೀಯ ರೈಲ್ವೇಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚೀನಾ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಸತತ 3ನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಕ್ಲಬ್ ಎನಿಸಿಕೊಂಡಿದೆ.
ಟೂರ್ನಿಯ ಎಲ್ಲ 11 ಪಂದ್ಯಗಳು ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪ್ರತಿದಿನ 2 (ಅ. 23 ವಿಶ್ರಾಂತಿ ದಿನ) ಪಂದ್ಯಗಳು ಸಂಜೆ 4 ಗಂಟೆಗೆ ಹಾಗೂ ರಾತ್ರಿ 7 ಗಂಟೆಗೆ ಆರಂಭವಾಗಲಿವೆ. ಪ್ರೇಕಕ್ಷರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ರಾಜ್ಯಕ್ಕೆ ಹೆಮ್ಮೆಯ ವಿಷಯ
ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ ಆಯೋಜಿಸುತ್ತಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯ. ಇದು ಕ್ರೀಡೆಗೆ ನಾವು ನೀಡುತ್ತಿರುವ ಉತ್ತೇಜನ ಹಾಗೂ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಕ್ರೀಡಾಪಟುಗಳಿಗೆ ಸಿಗುತ್ತಿರುವ ಸದಾವಕಾಶವಾಗಿದೆ. ಬೆಂಗಳೂರು ಪ್ರಮುಖ ಕ್ರೀಡಾತಾಣವಾಗಿ ಗುರುತಿಸಿಕೊಂಡಿದ್ದು, ಇಂಥ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸುವ ಮೂಲಕ ಜಾಗತಿಕ ಕ್ರೀಡಾ ಭೂಪಟದಲ್ಲಿ ಬೆಂಗಳೂರು ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಏಷ್ಯಾದ ಮಹಿಳಾ ಬಾಸ್ಕೆಟ್‌ಬಾಲ್ ಸಾಮರ್ಥ್ಯವನ್ನು ಪ್ರದರ್ಶಿಸಲು ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ ಪ್ರಮುಖ ವೇದಿಕೆಯಾಗಿದ್ದು, ಬೆಂಗಳೂರು ಬಾಸ್ಕೆಟ್‌ಬಾಲ್ ಹಬ್ ಎನ್ನುವುದರಲ್ಲಿ ಸಂಶಯವಿಲ್ಲ. ಏಷ್ಯನ್ ಬಾಸ್ಕೆಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಹಾಗೂ ಮುಂದಿನ ಪೀಳಿಗೆಯ ಆಟಗಾರರಿಗೆ ಇದು ಸ್ಪೂರ್ತಿಯಾಗಲಿದೆ.
ಡಾ.ಕೆ.ಗೋವಿಂದರಾಜ್, ಫಿಬಾ ಏಷ್ಯಾ ಅಧ್ಯಕ್ಷ, ಎಂಎಲ್‌ಸಿ