ಫಿಫಾ ವಿಶ್ವಕಪ್ 2026ರ ಟ್ರೋಫಿ
- ಫುಟ್ಬಾಲ್ ಲೋಕದ ಅತ್ಯಂತ ಪ್ರತಿಷ್ಠಿತ ಟೂರ್ನಮೆಂಟ್ ಫಿಫಾ ವಿಶ್ವಕಪ್
- ಒಟ್ಟು 48 ತಂಡಗಳು ಸ್ಪರ್ಧಿಸಲಿದ್ದು, 39 ದಿನಗಳಲ್ಲಿ 16 ಕ್ರೀಡಾಂಗಣಗಳಲ್ಲಿ 104 ಪಂದ್ಯಗಳು
- 2026ರ ಫಿಫಾ ವಿಶ್ವಕಪ್ ಟ್ರೋಫಿ ಬೆಲೆ ಎಷ್ಟಿದೆ ಗೊತ್ತಾ?
FIFA World Cup Trophy: ಫುಟ್ಬಾಲ್ ಲೋಕದ ಅತ್ಯಂತ ಪ್ರತಿಷ್ಠಿತ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026ರ ಮೆಗಾ ಟೂರ್ನಿಗೆ ಇದೇ ಜೂನ್ 11ರಿಂದ ಅದ್ದೂರಿ ಚಾಲನೆ ಸಿಕ್ಕಿದ್ದು, ಮೂರು ದೇಶಗಳಲ್ಲಿ (ಯುಎಸ್ಎ, ಕೆನಡಾ, ಮೆಕ್ಸಿಕೊ) ನಡೆಯುತ್ತಿರುವುದು ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆದಿದೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಟೂರ್ನಮೆಂಟ್ ಆಗಿ ಈ ಟೂರ್ನಿ ಇತಿಹಾಸದಲ್ಲಿ ದಾಖಲಾಗಿದೆ. 1998ರಿಂದ ಮೊದಲ ಬಾರಿಗೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿರುವ ಫಿಫಾ, ಈ ಬಾರಿ ಬಹುಮಾನದ ಹಣವನ್ನು ಹೆಚ್ಚಳ ಮಾಡಿರುವುದು ಫುಟ್ಬಾಲ್ ಅಭಿಮಾನಿಗಳ ಹುಬ್ಬೇರಿಸಿತು. ಈಗ ಚಿನ್ನದಿಂದ ತಯಾರಿಸಿರುವ ಫಿಫಾ ಟ್ರೋಫಿ ಬೆಲೆಯನ್ನು ಕೇಳಿದ್ರೆ, ನಿಜಕ್ಕೂ ಅಚ್ಚರಿಗೊಳ್ಳುತ್ತೀರಿ.
ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ ಸೇರಿದಂತೆ ಫುಟ್ಬಾಲ್ ದಿಗ್ಗಜರಿಂದ ಕೂಡಿರುವ ಈ ಟೂರ್ನಿಯ 2026ರ ಟ್ರೋಫಿ ನೋಡುಗರ ಗಮನ ಸಳೆಯುತ್ತಿದೆ. ಕಾರಣ, ಅದರ ಡಿಸೈನ್, ಚಿನ್ನದ ಲೇಪನ ಮತ್ತು ವಿಶೇಷ ಔಟ್ಲುಕ್. ಕ್ರೀಡೆಯ ಇತಿಹಾಸದಲ್ಲಿ ಅತಿ ಮೌಲ್ಯಯುತ ಟ್ರೋಫಿಗಳಲ್ಲಿ ಒಂದು ಎಂಬ ಸ್ಥಾನ ಪಡೆದಿರುವ ಫಿಫಾ ವಿಶ್ವಕಪ್ ಟ್ರೋಫಿಯನ್ನು ಮುಂದಿನ ತಿಂಗಳು ನ್ಯೂಜೆರ್ಸಿಯಲ್ಲಿ ವಿಜೇತ ತಂಡವು ಎತ್ತಿಹಿಡಿಯಲಿದೆ.
6.7 ಕೋಟಿ ರೂ.
2022ರ ಫಿಫಾ ವಿಶ್ವಕಪ್ಗೆ ಹೋಲಿಸಿದರೆ, ಈ ಬಾರಿ ಟ್ರೋಫಿಗೆ ಹೆಚ್ಚಿನ ಹಣವನ್ನು ವ್ಯಯಿಸಲಾಗಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ (LSEG) ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಈ ಟ್ರೋಫಿಯಲ್ಲಿರುವ ಅಪರಂಜಿ ಚಿನ್ನದ ಪ್ರಸ್ತುತ ಮೌಲ್ಯ ಸುಮಾರು 7,13,000 ಅಮೆರಿಕನ್ ಡಾಲರ್ ( ಭಾರತೀಯ ರೂಪಾಯಿಯಲ್ಲಿ ಅಂದಾಜು 6.7 ಕೋಟಿ ರೂಪಾಯಿ) ಆಗಿದೆ.
ಎರಡು ಪಟ್ಟು ಹೆಚ್ಚು
ಇದೇ ನಾಲ್ಕು ವರ್ಷಗಳ ಹಿಂದೆ ನಡೆದ ಟೂರ್ನಿಯ ಸಂದರ್ಭದಲ್ಲಿ ಟ್ರೋಫಿಯ ಮೌಲ್ಯ ಸುಮಾರು 2,77,000 ಡಾಲರ್ (ಅಂದಾಜು 2.31 ಕೋಟಿ ರೂಪಾಯಿ) ಎನ್ನಲಾಗಿದೆ. ಕಳೆದ ಬಾರಿಯ ಟ್ರೋಫಿಗೆ ಹೋಲಿಸಿ ನೋಡಿದರೆ, ಪ್ರಸ್ತುತ ಟ್ರೋಫಿಯ ಚಿನ್ನದ ಬೆಲೆ ಡಬಲ್ ಆಗಿದೆ. 37 ಸೆ.ಮೀ ಎತ್ತರ ಮತ್ತು 6 ಕೆಜಿ ತೂಕವಿರುವ ಫಿಫಾ ಟ್ರೋಫ್ರಿಯನ್ನು 18 ಕ್ಯಾರೆಟ್ ಚಿನ್ನದಿಂದ ರೂಪಿಸಲಾಗಿದೆ. ಇದು ಪರಿಪೂರ್ಣ ಗೋಲ್ಡ್ನಿಂದಲೇ ತಯಾರಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಟ್ರೋಫಿಯ ಒಳಭಾಗವು ಟೊಳ್ಳಾಗಿದ್ದು, ವಿಶ್ವಕಪ್ ವಿಜೇತ ತಂಡಕ್ಕೆ ಅದನ್ನು ಎತ್ತಿಹಿಡಿದು ಸಂಭ್ರಮಿಸಲು ಸುಲಭವಾಗುವಂತೆ ತೂಕವನ್ನು ಡಿಸೈನ್ ಮಾಡಲಾಗಿದೆ. ಟ್ರೋಫಿಯ ತಳಭಾಗವನ್ನು ಎರಡು ಪದರಗಳ ಮಲಾಕೈಟ್‌ನಿಂದ ಅಲಂಕರಿಸಲಾಗಿದೆ. ಇದು ಅರ್ಧ ಹಸಿರು-ವಿಶೇಷ ಕಲ್ಲುಗಳಿಂದ ರೂಪಿಸಲಾಗಿದೆ. ಇದೆಲ್ಲವೂ ಟ್ರೋಫಿಯ ಹೊರಗಿನ ಲುಕ್ ಅನ್ನು ಬಹಳ ಆಕರ್ಷವಾಗಿ ಕಾಣುವಂತೆ ಮಾಡಿವೆ,(ಏಜೆನ್ಸೀಸ್).