ಫುಟ್ಬಾಲ್​ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಕಣ್ಣೀರು 
FIFA ವಿಶ್ವಕಪ್

ಪೋರ್ಚುಗಲ್ ಮಣಿಸಿ ಸೆಮೀಸ್​ಗೆ ಸ್ಪೇನ್ ಲಗ್ಗೆ! ವಿಶ್ವಕಪ್ ಟ್ರೋಫಿ ಕನಸು ಭಗ್ನ ಬೆನ್ನಲ್ಲೇ ಕಣ್ಣೀರಿಟ್ಟ ರೊನಾಲ್ಡೊ

ಪ್ರಮುಖ ಮುಖ್ಯಾಂಶಗಳು

  • 16ನೇ ರೌಂಡ್​ ಪಂದ್ಯದಲ್ಲಿ ಸ್ಪೇನ್​ ಎದುರು ಸೋತ ಪೋರ್ಚುಗಲ್​
  • ಮೈದಾನದಲ್ಲೇ ಕಣ್ಣೀರಾಕಿದ ಫುಟ್ಬಾಲ್​ ದಂತಕಥೆ ಕ್ರಿಸ್ಟಿಯಾನೋ ರೆನಾಲ್ಡೊ
ಡಲ್ಲಾಸ್: ಫುಟ್‌ಬಾಲ್ ಲೋಕದ ದೈತ್ಯ ತಂಡಗಳ ನಡುವಿನ ರೋಚಕ ಫಿಫಾ ವಿಶ್ವಕಪ್​ 2026ರ 16ನೇ ರೌಂಡ್​ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು 1-0 ಅಂತರದಿಂದ ಮಣಿಸಿದ ಸ್ಪೇನ್, ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಸೋಲಿನೊಂದಿಗೆ ಪೋರ್ಚುಗಲ್‌ನ ಸ್ಟಾರ್ ಆಟಗಾರ, ಫುಟ್ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರಿಟ್ಟ ಕ್ಷಣ ಅಭಿಮಾನಿಗಳಲ್ಲಿ ಭಾರಿ ಬೇಸರ ಮೂಡಿಸಿದೆ.

ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಕನಸು ಭಗ್ನ

ಪಂದ್ಯದ ನಿಗದಿತ 90 ನಿಮಿಷಗಳವರೆಗೆ ಎರಡೂ ತಂಡಗಳು ಯಾವುದೇ ಗೋಲು ಬಾರಿಸದೆ ಸಮಬಲ ಕಾಯ್ದುಕೊಂಡಿತ್ತು. ಆದರೆ, ಹೆಚ್ಚುವರಿ ಸಮಯದಲ್ಲಿ ಸ್ಪೇನ್ ರೊನಾಲ್ಡೊ ಪಡೆಗೆ ಬಿಗ್ ಶಾಕ್​ ನೀಡಿತು. 85ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೈಕೆಲ್ ಮೆರಿನೋ, ಸ್ಪೇನ್​ ಪರ ಮಿಂಚಿದರು. ಕೇವಲ ಐದೇ ನಿಮಿಷಗಳಲ್ಲಿ ಪಂದ್ಯದ ದಿಕ್ಕನೇ ಸಂಪೂರ್ಣವಾಗಿ ಬದಲಿಸಿದರು.
ಇಂಜುರಿ ಟೈಮ್‌ನ ಮೊದಲ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಅವಕಾಶವನ್ನು ಬಳಸಿಕೊಂಡ ಸ್ಪೇನ್ ಗೆಲುವಿಗೆ ಹತ್ತಿರವಾಯಿತು. ಫೆರಾನ್ ಟೊರೆಸ್ ನೀಡಿದ ಅತ್ಯುತ್ತಮ ಪಾಸ್ ಅನ್ನು ಗೋಲಿನತ್ತ ಹೊಡೆದ ಮೆರಿನೋ, ಸ್ಪೇನ್ ಪಾಲಿಗೆ ವಿಜಯದ ಶಿಲ್ಪಿಯಾಗಿ ಹೊರಹೊಮ್ಮಿದರು. ಈ ಟೂರ್ನಿಯಲ್ಲಿ ಇದುವರೆಗೆ ಒಂದೂ ಗೋಲು ಬಿಟ್ಟುಕೊಡದ ತನ್ನ ಅಜೇಯ ದಾಖಲೆಯನ್ನು ಸ್ಪೇನ್ ಈ ಪಂದ್ಯದಲ್ಲೂ ಮುಂದುವರಿಸಿದ್ದು ಗಮನಾರ್ಹ.

ರೊನಾಲ್ಡೊ ವಿಶ್ವಕಪ್ ಜರ್ನಿ ಅಂತ್ಯ?

ಕ್ರಿಸ್ಟಿಯಾನೊ ರೊನಾಲ್ಡೊ ಪಾಲಿಗೆ ಇದು ಕೊನೆಯ ವಿಶ್ವಕಪ್ ಪಂದ್ಯ ಎಂದೇ ಹೇಳಲಾಗುತ್ತಿದೆ. ಪ್ರಸ್ತುತ ಟೂರ್ನಿಯಲ್ಲಿ ಒಟ್ಟು 3 ಗೋಲು ಗಳಿಸಿರುವ ರೊನಾಲ್ಡೊ, ಈ ಕ್ವಾರ್ಟರ್‌ಫೈನಲ್ ಪಂದ್ಯದಲ್ಲೇ ಅತಿ ಹೆಚ್ಚು ಬಾರಿ ಚೆಂಡನ್ನು ಸ್ಪರ್ಶಿಸಿರುವ ಆಟಗಾರ. ಆದ್ರೆ, ತಮ್ಮ ತಂಡವನ್ನು ವಿಶ್ವಕಪ್​ ಟ್ರೋಫಿ ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದ ಅವರು ಕಣ್ಣೀರಾಕಿದ್ದು, ದಂತಕಥೆಯ ಅಭಿಮಾನಿಗಳಲ್ಲಿಯೂ ಕಣ್ಣೀರು ತರಿಸಿತು.

ಮಿಸ್ ಆದ ಚಾನ್ಸ್​ಗಳು

ಸ್ಪೇನ್ ಪಂದ್ಯವನ್ನು ಮಂದಗತಿಯಲ್ಲಿ ಆರಂಭಿಸಿದರೂ, ಆಕರ್ಷಕ ಮೂವ್‌ಗಳ ಮೂಲಕ ಗಮನ ಸೆಳೆಯಿತು. 8ನೇ ನಿಮಿಷದಲ್ಲಿ ಡ್ಯಾನಿ ಓಲ್ಮೋ ನೀಡಿದ ಪಾಸ್ ಅನ್ನು ಗೋಲಾಗಿ ಹೊಡೆಯುವಲ್ಲಿ ಮೈಕೆಲ್ ಒಯರ್ಜಾಬಲ್ ವಿಫಲರಾದರು. 12ನೇ ನಿಮಿಷದಲ್ಲಿ ರೊನಾಲ್ಡೊ ಬಾರಿಸಿದ ರಭಸವಾದ ಕಿಕ್​ ಅನ್ನು ಸ್ಪೇನ್ ಗೋಲ್‌ಕೀಪರ್ ಉನೈ ಸಿಮಿಯೋನ್ ಅದ್ಭುತವಾಗಿ ತಡೆದರು. ಇತ್ತ ಪೋರ್ಚುಗಲ್‌ನ ಗೋಲ್‌ಕೀಪರ್ ಡಿಯಾಗೋ ಕೋಸ್ಟಾ ಕೂಡ 16ನೇ ನಿಮಿಷದಲ್ಲಿ ಲಮಿನ್ ಯಮಲ್ ಮತ್ತು ಅಲೆಕ್ಸ್ ಬಯೇನಾ ಅವರ ಕಿಕ್​ಗಳನ್ನು ಅತ್ಯಂತ ಯಶಸ್ವಿಯಾಗಿ ತಡೆದರು,(ಏಜೆನ್ಸೀಸ್).