ಫುಟ್ಬಾಲ್ ದಂತಕಥೆ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ
- ಕಡೆಗೂ ವಿಶ್ವ ದಾಖಲೆ ಬರೆದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
- ಮೆಸ್ಸಿ ಆಟಕ್ಕೆ ಅಭಿಮಾನಿಗಳು ಫಿದಾ, ಮೈದಾನದಲ್ಲೇ ಸಂಭ್ರಮ
- ಜೂನ್ 24ಕ್ಕೆ ಮೆಸ್ಸಿಗೆ 39 ವರ್ಷ ವಯಸ್ಸು
Lionel Messi: ಫುಟ್‌ಬಾಲ್ ಜಗತ್ತಿನ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ, ನಿನ್ನೆ (ಜೂ.22) ನಡೆದ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ ತಮ್ಮ ತಂಡಕ್ಕೆ ಭರ್ಜರಿ ಗೆಲುವು ತಂದುಕೊಡುವುದರ ಜೊತೆಗೆ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದು ವಿಶೇಷ. ಲಿಯೋನಲ್ ದಾಖಲೆಯನ್ನು ಸಂಭ್ರಮಿಸುತ್ತಿರುವ ಮೆಸ್ಸಿ ಅಭಿಮಾನಿಗಳು, 38ನೇ ವಯಸ್ಸಿನಲ್ಲೂ ಅಮೋಘ ಪ್ರದರ್ಶನ ನೀಡಿದ್ದಕ್ಕೆ ಲೆಜೆಂಡ್ರಿ ಪ್ಲೇಯರ್ನನ್ನು ಕೊಂಡಾಡುತ್ತಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಫಿಫಾ ವಿಶ್ವಕಪ್‌ನ ಭಾಗವಾಗಿ ಆಸ್ಟ್ರಿಯಾ ವಿರುದ್ಧದ ಗ್ರೂಪ್-ಜೆ ಪಂದ್ಯದಲ್ಲಿ ಎರಡು ಬಹುಮುಖ್ಯ ಗೋಲುಗಳನ್ನು ಬಾರಿಸುವ ಮೂಲಕ ಅರ್ಜೆಂಟೀನಾ ತಂಡದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ, ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳನ್ನು ಹೊಡೆದ ಆಟಗಾರನಾಗಿ ಐತಿಹಾಸಿಕ ವಿಶ್ವ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಜರ್ಮನ್ ದಂತಕಥೆ ಮಿರೋಸ್ಲಾವ್ ಕ್ಲೋಸ್ ಅವರ 16 ಗೋಲ್ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಮತ್ತು ಪಟ್ಟಿಯಲ್ಲಿ 18 ಗೋಲುಗಳಿಂದ ಅಗ್ರಸ್ಥಾನಕ್ಕೇರಿದ್ದಾರೆ.
ಡಲ್ಲಾಸ್‌ನ ಎಟಿ ಅಂಡ್ ಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಮೆಸ್ಸಿಗೆ ಹೊಸ ದಾಖಲೆ ಸೃಷ್ಟಿಸುವ ಅವಕಾಶವಿತ್ತು, ಆದರೆ, ಆಸ್ಟ್ರಿಯನ್ ಗೋಲ್‌ಕೀಪರ್ ಅವರ ಪೆನಾಲ್ಟಿಯನ್ನು ಉಳಿಸಿದಾಗ ಅಭಿಮಾನಿಗಳು ಭಾರಿ ನಿರಾಶೆಗೊಂಡರು. ಇಲ್ಲಿಗೆ ಸುಮ್ಮನಾಗದ ಮೆಸ್ಸಿ, 38ನೇ ನಿಮಿಷದಲ್ಲಿ, ತಮ್ಮದೇ ಆದ ಶೈಲಿಯಲ್ಲಿ ಅದ್ಭುತ ಕಿಕ್ನಿಂದ ಗೋಲು ಬಾರಿಸಿದರು.
ಈ ಗೋಲ್ನಿಂದ ಮೆಸ್ಸಿ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಗೋಲು ಗಳಿಸಿದ ಮೂರನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮೊದಲು, ಫ್ರಾನ್ಸ್ ದಂತಕಥೆ ಜಸ್ಟ್ ಫಾಂಟೈನ್ ಮತ್ತು ಬ್ರೆಜಿಲಿಯನ್ ದಂತಕಥೆ ಜೈರ್ಜಿನ್ಹೋ ಮಾತ್ರ ಈ ಪಟ್ಟಿಯಲ್ಲಿದ್ದರು. ಆಸ್ಟ್ರಿಯಾ ತಂಡವು ಉತ್ತಮ ಪ್ರದರ್ಶನದಿಂದ ಅರ್ಜೆಂಟೀನಾ ತಂಡಕ್ಕೆ ಕಠಿಣ ಪೈಪೋಟಿ ನೀಡಿದರೂ, ಮೆಸ್ಸಿಯ ಮ್ಯಾಜಿಕ್ ಅನ್ನು ಮಾತ್ರ ಎಲ್ಲಿಯೂ ತಡೆಯಲು ಸಾಧ್ಯವಾಗಲಿಲ್ಲ.
ಪಂದ್ಯದ ಕೊನೆಯ ನಿಮಿಷಗಳಲ್ಲಿ ಮೆಸ್ಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವೇನು ಎಂಬುದನ್ನು ಇಡೀ ಫುಟ್ಬಾಲ್ ಜಗತ್ತಿಗೆ ಸಾಬೀತುಪಡಿಸಿದರು. ಜೂಲಿಯನ್ ಅಲ್ವಾರೆಜ್ ಅವರ ಪ್ರಯತ್ನ ವಿಫಲವಾದ ಬೆನ್ನಲ್ಲೇ ಬಂದ ರಿಬೌಂಡ್ ಅನ್ನು ಅವರ ಶಾಟ್ ಅನ್ನು ಕನ್ವರ್ಟ್ ಮಾಡಿ, 18ನೇ ವಿಶ್ವಕಪ್ ಗೋಲು ಹೊಡೆದರು. ಇದರೊಂದಿಗೆ, ಅರ್ಜೆಂಟೀನಾ 2-0 ಅಂತರದಲ್ಲಿ ಪಂದ್ಯ ಗೆದ್ದು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಿತು.
2022ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾ, ಈಗ ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಮತ್ತು ಆಸ್ಟ್ರಿಯಾ ವಿರುದ್ಧ ಡಬಲ್ ಮೂಲಕ ಮೆಸ್ಸಿ ಮತ್ತೊಮ್ಮೆ ಟೂರ್ನಿಯಲ್ಲಿ ಫ್ಯೂರಿಯಸ್ ಆಗಿ ಕಾಣುತ್ತಿದ್ದಾರೆ. 38ನೇ ವಯಸ್ಸಿನಲ್ಲೂ ತಮ್ಮ ತಂಡವನ್ನು ಟ್ರೋಫಿ ಗೆಲ್ಲುವತ್ತ ಕೊಂಡೊಯ್ಯುತ್ತಿರುವ ಮೆಸ್ಸಿ, ನನ್ನ ವಯಸ್ಸಿನ ಬಗ್ಗೆ ಚಿಂತಿಸುವ ಕೆಲಸ ನಾನು ಮಾಡೋದಿಲ್ಲ. ಬದಲಿಗೆ ಫಿಟ್ ಆಗಿರುವುದು ಮಾತ್ರ ನನ್ನ ಧ್ಯೇಯ ಎಂದು ವಿಶ್ವ ದಾಖಲೆ ಬರೆದ ಬಳಿಕ ಹೇಳಿದ್ದಾರೆ(ಏಜೆನ್ಸೀಸ್).