ಲಿಯೋನಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆ ಸೋರಿಕೆ
- 2026ರ ಫಿಫಾ ವಿಶ್ವಕಪ್ ಆರಂಭದಲ್ಲೇ ವಿವಾದದ ಕಿಡಿ!
- ಲಿಯೋನಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆ ಸೋರಿಕೆ
- ಆಯೋಜಕರ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
ಫುಟ್ಬಾಲ್: 2026 ರ ಫಿಫಾ ವಿಶ್ವಕಪ್ ವಿವಾದಗಳ ಮೂಲಕವೇ ಆರಂಭವಾಗಿದೆ ಎಂದರೆ ಸುಳ್ಳಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಸೊಮಾಲಿಯಾದ ರೆಫರಿ ಒಮರ್ ಅಬ್ದುಲ್ಕದಿರ್ ಅರ್ಟನ್ನ್ನು ತವರಿಗೆ ವಾಪಸ್ ಕಳಿಸಿದರೆ, ಈಗ ಅರ್ಜೆಂಟೀನಾದ ಆಟಗಾರರ ಪಾರ್ಸ್ಪೋರ್ಟ್ ದಾಖಲೆ ಸೋರಿಕೆ (Lionel Messi Passport leaked) ಯಾಗಿದೆ ಎಂದು ವರದಿಯಾಗಿದೆ.
ಮಂಗಳವಾರ (ಜೂ.9) ಅಲಬಾಮಾದ ಜೋರ್ಡಾನ್-ಹೇರ್ ಕ್ರೀಡಾಂಗಣದಲ್ಲಿ, ಐಸ್ಲ್ಯಾಂಡ್ ಜೊತೆ ನಡೆದ ಅಭ್ಯಾಸ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ಸೇರಿ ಇತರೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆಗಳನ್ನು ಟೀಂ ಶೀಟ್ನಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ಟೀಂ ಶೀಟ್ನಲ್ಲಿ ಪಾಸ್‌ಪೋರ್ಟ್ ಸಂಖ್ಯೆಯನ್ನು ಮರೆಮಾಚಬೇಕೆಂಬ ನಿಯಮವಿದ್ದರೂ ಸಹ ಇದನ್ನು ಮಾಡದಿರುವುದು ವೈಯಕ್ತಿಕ ದಾಖಲೆ ಸೋರಿಕೆ ಆರೋಪಕ್ಕೆ ಗುರಿಯಾಗಿದೆ.
ಹಾಗೂ ಇಲ್ಲಿ ಕೇವಲ ಅರ್ಜೆಂಟೀನಾದ ಆಟಗಾರರ ಪಾಸ್‌ಪೋರ್ಟ್ ದಾಖಲೆ ಮಾತ್ರ ಸೋರಿಕೆಯಾಗಿದ್ದು ಐಸ್ಲ್ಯಾಂಡ್ ಆಟಗಾರರ ಪಾಸ್ಪೋರ್ಟ್ನ್ನು ಬ್ಲರ್ ಮಾಡಿರುವುದು ಫುಟ್ಬಾಲ್ ಅದರಲ್ಲೂ ಅರ್ಜೆಂಟೀನಾದ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
3-0 ಅಂತರದಲ್ಲಿ ಅರ್ಜೆಂಟೀನಾ ವಿಜಯ
ಅಂದು ನಡೆದ ಅಭ್ಯಾಸ ಪಂದ್ಯದಲ್ಲಿ ಶುಭಾರಂಭ ಮಾಡಿದ ಅರ್ಜೆಂಟೀನಾ ತಂಡ 3-0 ಅಂತರದಲ್ಲಿ ಐಸ್ಲ್ಯಾಂಡ್ ತಂಡವನ್ನು ಸೋಲಿಸಿತು. ಹ್ಯಾಮ್ಸ್ಟ್ರಿಂಗ್ ಇಂಜುರಿಯಿಂದ ಬಳಲುತ್ತಿದ್ದ ಲಿಯೋನಲ್ ಮೆಸ್ಸಿ, ಈ ಪಂದ್ಯದಲ್ಲಿ 2 ಗೋಲುಗಳನ್ನ ಗಳಿಸುವಲ್ಲಿ ಯಶಸ್ವಿಯಾದರು.
ಸೊಮಾಲಿಯಾ ರೆಫರಿಗೆ ಗೇಟ್ಪಾಸ್!
ಫುಟ್ಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ರೆಫರಿಯಾಗಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಬೇಕಾಗಿದ್ದ ಸೊಮಾಲಿಯಾದ ರೆಫರಿ ಒಮರ್ ಅಬ್ದುಲ್ಕದಿರ್ ಅರ್ಟನ್ ಅವರ ಕನಸು ಈಗ ಅಮೆರಿಕದ ನಿಯಮಗಳಿಂದಾಗಿ ನುಚ್ಚುನೂರಾಗಿದೆ. ಸ್ಥಳೀಯ ಭಯೋತ್ಪಾದಕ ಗುಂಪುಗಳೊಂದಿಗೆ ಅರ್ಟನ್ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
2025ರ ಆಫ್ರಿಕಾದ ಅತ್ಯುತ್ತಮ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಟನ್, ಈ ಬಾರಿ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಆದರೆ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಅಧಿಕಾರಿಗಳು ತಡೆದು, ವಾಪಸ್ ಕಳುಹಿಸಿದ್ದಾರೆ, (ಏಜನ್ಸೀಸ್).