ಜಿಲ್ಲೆ

₹4.5 ಲಕ್ಷ ಮೌಲ್ಯದ ಗಾಂಜಾ ವಶ

 ಆಂಧ್ರ ಮೂಲದ ಆರೋಪಿ ಬಂಧನ

 ಬಾಗೇಪಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿರುವ ಬಾಗೇಪಲ್ಲಿ ಪೊಲೀಸರು 4.5 ಲಕ್ಷ ರೂ. ಮೌಲ್ಯದ 9 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪಟ್ಟಣ ಗಡಿಭಾಗದಲ್ಲಿರುವ ಆಂಧ್ರಪ್ರದೇಶದ ಚಿಲಮತ್ತೂರು ಮಂಡಲ್‌ನ ಕೊಡಿಕೊಂಡ ಗ್ರಾಮದ ಅರುಣ್ ಕುಮಾರ್ ಬಂಧಿತ.

ಬಾಗೇಪಲ್ಲಿ ಮತ್ತು ಚೇಳೂರು ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು. ಈ ಮೇರೆಗೆ ಪೊಲೀಸ್ ಆಧೀಕ್ಷಕ ಕುಶಾಲ್ ಚೌಕ್ಸೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ತಂಡ ತಾಲೂಕಿನ ಗೂಳೂರು ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅರುಣ್ ಕುಮಾರ್‌ನನ್ನು ಮಾಲು ಸಮೇತ ಬಂಧಿಸಿದೆ. ವಿಚಾರಣೆ ವೇಳೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವ್ಯಾಲಿ ಪ್ರದೇಶದಲ್ಲಿರುವ ಗ್ರಾಮಗಳಿಂದ ಸಂಗ್ರಹಿಸಿದ ಗಾಂಜಾವನ್ನು ಬಾಗೇಪಲ್ಲಿ ಮತ್ತು ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.

ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಮುನಿರತ್ನಂ, ಸುನೀಲ್ ಕುಮಾರ್, ಪೇದೆಗಳಾದ ಸುರೇಶ್, ವೆಂಕಟರವಣ, ಧನಂಜಯ ಕುಮಾರ್, ಸಾಗರ್, ವೆಂಕಟಶಿವ, ಮೋಹನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.