ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಯಿಂದ ಜನರ ಬದುಕು ಹಸನಾಗಲಿದೆ. ರೈತರ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ತಾಲೂಕಿನ ಸೊಣ್ಣದೇನಹಳ್ಳಿ ಗೇಟ್ ಬಳಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮರುಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಸೊಣ್ಣದೇನಹಳ್ಳಿ ಗೇಟ್ ಬಳಿ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ಪಟ್ಟಣವು ಭೌಗೋಳಿಕವಾಗಿ ಹೂವು, ಹಣ್ಣು, ತರಕಾರಿ ಬೆಳೆಯುವ ಪ್ರದೇಶವಾಗಿದೆ. ಇದರ ನಡುವೆ ಹೊಸಕೋಟೆ ನಗರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶಗಳಿದ್ದು, ಬಡಾವಣೆಗಳು ಸಹ ಕ್ಷೀಪ್ರಗತಿಯಲ್ಲಿ ಉಗಮವಾಗುತ್ತಿವೆ. ಅಲ್ಲದೇ ಈ ಭಾಗದಲ್ಲಿ ಬೆಂಗಳೂರು-ಚೆನ್ನೈ ಕಾಡಿಡಾರ್ ಇಲ್ಲೇ ಹಾದು ಹೋಗಿರುವುದರಿಂದ ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 20 ಕೋಟಿ ರೂ. ಅನುದಾನದಲ್ಲಿ ರಾಜ್ಯ ಹೆದ್ದಾರಿ-35ರ ಶಿಡ್ಲಘಟ್ಟ ರಸ್ತೆಯನ್ನು ಉಪನಗರ ವರ್ತುಲ ರಸ್ತೆವರೆಗೂ ದ್ವಿಪಥ ಹಾಗೂ ನಗರೇನಹಳ್ಳಿವರೆಗೂ 10 ಮೀಟರ್ ವಿಸ್ತರಣೆ ಮಾಡಿ, ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ಉದ್ಯಮಿ ಬಿ.ವಿ ಬೈರೇಗೌಡ, ಮುಖಂಡರಾದ ಹುಲ್ಲೂರು ರಾಜಗೋಪಾಲ್, ಗ್ರಾಪಂ ಸದಸ್ಯ ಮಲ್ಲಿಮಾಕನಪುರ ತಮಯ್ಯ ಗೌಡ ಇದ್ದರು.