ವಿಧಾನಸೌಧದ ಅಧಿವೇಶನದಲ್ಲಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದರು. 
ಜಿಲ್ಲೆ

ಕುಡಿವ ನೀರಿಗೆ ₹10 ಕೋಟಿ ಅನುದಾನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಜಿಲ್ಲೆಯ 17 ಗ್ರಾಮಗಳಿಗೆ ಸೌಲಭ್ಯ - ಸಚಿವ ಖರ್ಗೆಯಿಂದ ಆಡಳಿತಾತ್ಮಕ ಒಪ್ಪಿಗೆ

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯಿಂದ ಹಲವು ದಶಕಗಳಿಂದ ನಡೆಯುತ್ತಿರುವ ಕೆರೆಗಳ ಉಳಿವು ಮತ್ತು ಶುದ್ಧ ಕುಡಿವ ನೀರಿನ ಹೋರಾಟಕ್ಕೆ ಅಲ್ಪ ಗೆಲುವು ದೊರೆತಂತಾಗಿದೆ.

ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಐ 17 ಗ್ರಾಮಗಳಿಗೆ ಕುಡಿವ ನೀರಿಗಾಗಿ 10 ಕೋಟಿ ರೂಪಾಯಿ ಅನುದಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದ್ದು, ಎರಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆ ಕಲಾಪದಲ್ಲಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಾಲೂಕಿನ ಶಾಸಕ ಧೀರಜ್ ಮುನಿರಾಜು ಈ ಕುರಿತು ಮಾತನಾಡಿ, ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಪಂಗಳಿಗೆ ಕುಡಿವ ನೀರು ಸರಬರಾಜು ಮಾಡಲು ವಿಶೇಷ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳಿಲ್ಲದಿರುವುದರಿಂದ ಬೋರ್‌ವೇಲ್ ಡ್ರಿಲಿಂಗ್ ಹೆಚ್ಚು ಮಾಡುವುದರಿಂದ ಬೇಸಿಗೆಯಲ್ಲಿನ ನೀರಿನ ಸಮಸ್ಯೆ ಬಗೆಹರಿಸಬಹುದು. ತಾಲೂಕಿನ ಜನರು ಬೋರ್‌ವೇಲ್ ನೀರು ಕುಡಿಯುತ್ತಿದ್ದು, ಬೋರ್‌ವೇಲ್ ಡ್ರಿಲಿಂಗ್ ಹೆಚ್ಚು ಮಾಡುವಂತೆ ಮನವಿ ಮಾಡಿದರು. ಅಲ್ಲದೇ ತಾಲೂಕಿನ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯಲ್ಲಿ 17 ಗ್ರಾಮಗಳಲ್ಲಿನ ಅಂತರ್ಜಲ ನೀರು ಕಲುಷಿತವಾಗಿದೆ. ಇದರಿಂದ 17 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ, ಸದ್ಯ ಜಕ್ಕಲಮಡುಗು ಡ್ಯಾಂ ನಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿವ ನೀರಿಗಾಗಿ 10 ಕೋಟಿ ಯೋಜನೆಯನ್ನು ಸಚಿವಾಲಯಕ್ಕೆ ಕಳಿಸಿಲಾಗಿದ್ದು, ಎರಡು ಗ್ರಾಪಂಗಳಿಗೆ ಕುಡಿವ ನೀರಿಗಾಗಿ ವಿಶೇಷ ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.

ಶಾಸಕರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿ, ದೊಡ್ಡತುಮಕೂರು ಕುಡಿವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಾನು ಸಹ ಶಾಸಕರ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದೆ, ಅಂದೆ ನಾನು ಮಾಡಿ ಕೊಡುವುದಾಗಿ ಭರವಸೆ ಸಹ ನೀಡಿದ್ದೆ. ಕೊಟ್ಟ ಮಾತಿನಂತೆ 10 ಕೋಟಿ ರೂಪಾಯಿಗಳ ಅನುದಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಇನ್ನೆರೆಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರುವಂತೆ ಮಾಡಲಾಗುವುದು ಎಂದು ಸದನಲ್ಲಿ ಹೇಳಿದರು.

ಕಳೆದ ಜ. 26ರಂದು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ಸಮಿತಿ ಹೋರಾಟದ ಎಚ್ಚರಿಕೆ ನೀಡಿದ ಸಂಧರ್ಭ ಜಿಲ್ಲಾಧಿಕಾರಿಗಳು ನಮ್ಮ ಹೋರಾಟಕ್ಕೆ ಮಣಿದು ಸಭೆ ಮಾಡಿ ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ 9.23 ಕೋಟಿ ರೂ. ಮತ್ತು ದೊಡ್ಡತುಮಕೂರು ಗ್ರಾಪಂ ಹಳ್ಳಿಗಳಿಗೆ ಕುಡಿವ ನೀರಿನ ಯೋಜನೆಗೆ 9.93 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ವರದಿ ಪ್ರತಿ ನೀಡಿದ್ದರು. ಸಚಿವರು ಕೇವಲ 10 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬತಾಗಿದೆ. ಒಟ್ಟಾರೆ ನಮ್ಮ ಹೋರಾಟ ಶಾಶ್ವತವಾಗಿ ಕೆರೆಗಳ ಶುದ್ಧೀಕರಣ ಮತ್ತು ಕುಡಿವ ನೀರು ಸಿಗುವವರೆಗೂ ನಿರಂತರವಾಗಿ ನಡೆಯುತ್ತಲೆ ಇರುತ್ತದೆ. -ವಸಂತ್ ಕುಮಾರ್, ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯ ಮುಖಂಡ.