ಬೀದರ್: ಪ್ರಸಕ್ತ ಸಾಲಿನ ನೀಟ್ ದೀರ್ಘಕಾಲದ ರಿಪಿಟರ್ ತರಬೇತಿ ಹಾಗೂ ಇತರ ಕೋಸ್೯ಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 5 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಕರೊನಾ ಹಾಗೂ ಅತಿವೃಷ್ಟಿಯಿಂದ ಅನೇಕ ಪಾಲಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನೀಟ್ ನಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸಿದ ಸಂಭ್ರಮದಲ್ಲಿರುವ ಸಂಸ್ಥೆಯು ವಿದ್ಯಾರ್ಥಿ ವೇತನದ ಮೂಲಕ ಸುಮಾರು 3 ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ಮುಂದಾಗಿದೆ. ಸಂಸ್ಥೆಯ ದೇಶದ ಎಲ್ಲ ಶಾಖೆಗಳಲ್ಲೂ ವಿದ್ಯಾರ್ಥಿ ವೇತನ ನೀಡಲಾಗುವುದು. ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನೀಟ್ ದೀರ್ಘಕಾಲದ ರಿಪಿಟರ್ಗಳಿಗೆ ನೀಟ್ನಲ್ಲಿ ಪಡೆದ ಅಂಕಗಳನ್ನು ಆಧರಿಸಿ ವಿದ್ಯಾರ್ಥಿ ವೇತನ ಕಲ್ಪಿಸಲಾಗುವುದು. ಸಂಸ್ಥೆಯ ಬೀದರ್ ಶಾಖೆಗೆ ಮಾತ್ರ ಅನ್ವಯಿಸುವಂತೆ ಪಿಯುಸಿ ಕಲಾ, ವಾಣಿಜ್ಯ, ಬಿ.ಎ., ಬಿಎಸ್ಸಿ, ಬಿ.ಕಾಂ ಪ್ರವೇಶ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಕೊಡಲಾಗುವುದು. ಕರೊನಾದಿಂದಾಗಿ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ಸಂಪೂರ್ಣ ಉಚಿತ ನೀಡುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಂಸ್ಥೆಯ ವೆಬ್ಸೈಟ್ನಲ್ಲಿ ಉಚಿತ ಹೆಸರು ನೋಂದಾಯಿಸಿ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. ನೀಟ್ ರಿಪಿಟರ್ ತರಬೇತಿ ಪ್ರವೇಶಕ್ಕೆ ನವೆಂಬರ್ 1 ಕಡೆಯ ದಿನವಿದೆ. ಹೆಚ್ಚಿನ ಮಾಹಿತಿಗೆ ಟೊಲ್ ಫ್ರೀ ಸಂಖ್ಯೆ 18001216235ಗೆ ಸಂಪರ್ಕಿಸಬಹುದು. 32 ವರ್ಷ ಹಿಂದೆ 16 ಮಕ್ಕಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 17 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕರ್ನಾಟಕ ಸೇರಿ ದೇಶದ ವಿವಿಧೆಡೆ 42 ಶಾಖೆಗಳಿವೆ. ಗುಣಮಟ್ಟದ ಶಿಕ್ಷಣ, ದ್ವಿತೀಯ ಪಿಯುಸಿ, ಸಿಇಟಿ, ನೀಟ್ ಫಲಿತಾಂಶದಲ್ಲಿ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ ಎಂದು ತಿಳಿಸಿದ್ದಾರೆ.