ಬೀದರ್: ಕರೊನಾ ವಾರಿಯರ್ಸ್ ಆಗಿರುವ ಸರ್ಕಾರಿ ಶುಶ್ರೂಷಾಧಿಕಾರಿಗಳಿಗೆ ಸರ್ಕಾರ 5 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ಘೋಷಿಸಿದ್ದಕ್ಕೆ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘ ವಿರೋಧ ವ್ಯಕ್ತಪಡಿಸಿದೆ. ಸಂಘದ ಬೇಡಿಕೆಯಂತೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಪಟ್ಟು ಹಿಡಿದಿದೆ.
ಕಾಯಂ ಶುಶ್ರೂಷಾಧಿಕಾರಿಗಳಿಗೆ 5 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನವನ್ನು ತಾತ್ಕಾಲಿಕವಾಗಿ 6 ತಿಂಗಳು ಅಥವಾ ಮುಂದಿನ ಆದೇಶದವರೆಗೆ ನೀಡಲು ಸೆ.24ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದರೆ ಇದಕ್ಕೆ ಶುಶ್ರೂಷಾಧಿಕಾರಿಗಳ ಸಂಘ ವಿರೋಧಿಸಿದೆ.
25 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡುವಂತೆ ಸರ್ಕಾರಕ್ಕೆ ಸತತ ಬೇಡಿಕೆ ಮಂಡಿಸಲಾಗಿತ್ತು. ಆದರೆ ಕೇವಲ 5 ಸಾವಿರ ರೂ. ಕೊಡುವುದಾಗಿ ಆದೇಶ ಹೊರಡಿಸಿರುವುದು ಶುಶ್ರೂಷಾಧಿಕಾರಿಗಳಿಗೆ ಬೇಸರ ತಂದಿದೆ. ಆದೇಶ ಮರು ಪರಿಶೀಲಿಸಿ 25 ಸಾವಿರ ರೂ. ಪ್ರೋತ್ಸಾಹಧನ ಕೊಟ್ಟು ಬೇಡಿಕೆಗೆ ಸ್ಪಂದಿಸಬೇಕು ಎಂದು ಸಂಘದ ಅಧ್ಯಕ್ಷ ರಾಜಕುಮಾರ ಮಾಳಗೆ ಆಗ್ರಹಿಸಿದ್ದಾರೆ.
ಆರೋಗ್ಯ ಇಲಾಖೆ ಗ್ರೂಪ್ ಡಿ ನೌಕರರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ವೈದ್ಯರಿಗೆ 125 ಕೋಟಿ ರೂ. ಪ್ಯಾಕೇಜ್ ಸರ್ಕಾರ ಮೀಸಲಿಟ್ಟಿದೆ. ಆದರೆ ಶುಶ್ರೂಷಾಧಿಕಾರಿಗಳಿಗೆ ವಿವಿಧ ಸೌಲಭ್ಯಗಳಿಂದ ವಂಚಿಸಲಾಗುತ್ತಿದ್ದು, ಸಂಘ ಸಹಿಸುವುದಿಲ್ಲ. ಹಗಲಿರುಳು ಕೆಲಸ ಮಾಡುವ ಶುಶ್ರೂಷಾಧಿಕಾರಿಗಳಿಗೆ ಯಾವುದೇ ರಿಸ್ಕ್ ಅಲೋವೆನ್ಸ್ (ಗಂಡಾಂತರ ಭತ್ಯೆ) ಇಲ್ಲ. ಹೀಗಾಗಿ ಮಾಸಿಕ 4 ಸಾವಿರ ರೂ. ಈ ಭತ್ಯೆ ಸೇರಿ ಪ್ರಮುಖ 6 ಬೇಡಿಕೆ ಈಡೇರಿಸಲು ನಿರ್ಲಕ್ಷೃ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಮಾಳಗೆ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಶುಶ್ರೂಷಾಧಿಕಾರಿಗಳಿಗೆ ಪ್ರೋತ್ಸಾಹ ಧನ ಸೇರಿ ವಿವಿಧ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಗ್ರೂಪ್ ಡಿ ನೌಕರರಿಗೆ ನೀಡಿದ್ದಕ್ಕಿಂತ ಕಮ್ಮಿ ಪ್ರೋತ್ಸಾಹಧನ ನಮಗೆ ಘೋಷಿಸಿರುವುದು ಖಂಡನೀಯ. 25 ಸಾವಿರ ರೂ. ಮಂಜೂರಿ ಮಾಡಿ ಸಂಘದ ಬೇಡಿಕೆಗೆ ಸ್ಪಂದಿಸಬೇಕು.| ರಾಜಕುಮಾರ ಮಾಳಗೆರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷ