ಬಾಗಲಕೋಟೆ: ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯು ಮತದಾರ ಯಾದಿಪಟ್ಟಿಯಲ್ಲಿ ಗೋಲ್‌ಮಾಲ್ ಮಾಡಿದಂತೆ ಜಿಲ್ಲೆಯಲ್ಲಿಯೂ ಮತದಾರರ ಪಟ್ಟಿಯಲ್ಲಿ ಅನೇಕ ಲೋಪದೋಷಗಳಾಗಿವೆ. ಕೇವಲ ೧೦ ತಿಂಗಳಿನಲ್ಲಿ ಬರೋಬ್ಬರಿ ೬೪೯೫೪ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಜಿಲ್ಲೆಯ ೭ ವಿಧಾನಸಭಾ ಮತಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಜನ ಸಂಖ್ಯೆ ಹೆಚ್ಚಾದಂತೆ ಮತದಾರರ ಸಂಖ್ಯೆ ಹೆಚ್ಚಾಗಬೇಕು. ಆದರೇ ಕೆಲವು ಬೂತಗಳನ್ನು ಆಯ್ಕೆಕೊಂಡು ಮತದಾರರನ್ನು ಡಿಲೇಟ್ ಮಾಡಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಹೆಸರು ಸೇರ್ಪಡೆ ಹಾಗೂ ತೆಗೆದು ಹಾಕುವ ಕುರಿತು ನಡೆದ ೧೩-೧-೨೦೨೨ ರಿಂದ ೯-೧೧-೨೦೨೨ ರವರೆಗೆ ೧೦ ತಿಂಗಳ ಕಾಲ ನಡೆದ ಮತದಾರರ ಪರಿಷ್ಕರಣೆಯಲ್ಲಿ ಮುಧೋಳ ಮತಕ್ಷೇತ್ರದಲ್ಲಿ ೧೧೩೬೨, ತೇರದಾಳ ೧೦೨೬೨, ಜಮಖಂಡಿ ೫೩೧೮, ಬೀಳಗಿ ೬೭೯೫, ಬದಾಮಿ ೧೪೮೩೬, ಬಾಗಲಕೋಟೆ ೮೮೭೫, ಹುನಗುಂದ ಮತಕ್ಷೇತ್ರದಲ್ಲಿ ೭೫೧೨ ಮತದಾರರು ಸೇರಿ ಜಿಲ್ಲೆಯಲ್ಲಿ ೬೪೯೫೪ ಮತದಾರರು ಕಡಿಮೆಯಾಗಿದ್ದು, ಇದು ಅಕ್ರಮದ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ, ಈ ಎಲ್ಲ ದಾಖಲಾತಿಗಳು ಅಽಕಾರಿಗಳಿಂದಲೇ ಪಡೆಯಲಾಗಿದೆ. ಅನೇಕ ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿದರು.
ಇದನ್ನು ಗಮನಿಸಿದರೆ ತಮಗೆ ಬೇಕಾದ ಮತದಾರರನ್ನು ಸೇರಿಸಿ ತಮಗೆ ಬೇಡವಾದ ಮತದಾರರನ್ನು ಮತದಾರರ ಯಾದಿಯಿಂದ ತೆಗೆದು ಹಾಕಿರುವದು ಸ್ಪಷ್ಟವಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ರಾಜ್ಯದ ಬಿಜೆಪಿ ಸರ್ಕಾರ ಈ ಮೂಲಕ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಎಸ್.ಸಿ., ಅಲ್ಪಸಂಖ್ಯಾತ ಸೇರಿದಂತೆ ನಿರ್ಧಿಷ್ಟ ಸಮುದಾಯ, ವ್ಯಕ್ತಿಗಳ ಹೆಸರುಗಳನ್ನೆ ಕೈ ಬಿಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲದರ ಬಗ್ಗೆ ಕಾಂಗ್ರೆಸ್ ಪಕ್ಷವು ಬೂತಮಟ್ಟದಲ್ಲಿ ಪರಿಶೀಲನೆ ನಡೆಸಿದೆ. ಮನೆ ಮನೆಗೆ ತೆರಳಿ ಬಿಟ್ಟು ಹೋಗಿರುವ ಹೆಸರುಗಳ ಕುರಿತು ಮಾಹಿತಿ ಪಡೆದು ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಆನಂದ ಶಿಲ್ಪಿ ಉಪಸ್ಥಿತರಿದ್ದರು.
ಹೇಳಿಕೆ…
ಈ ಹಿಂದೆ ೨೦೦೪ ಚುನಾವಣೆಯಲ್ಲಿಯೂ ಇಂತಹ ಅನ್ಯಾಯವಾದಾಗ ಆಗ ಮಾಡಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ೩೫ ಸಾವಿರ ನಕಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಯಿತು. ಈಗಲೂ ಸಹ ಬೀಳಗಿ ಕ್ಷೇತ್ರದ ಕಂದಗಲ್ಲ, ಸೊನ್ನ ಗ್ರಾಮಗಳಲ್ಲಿ ದಲಿತರು, ಅಲ್ಪಸಂಖ್ಯಾತರ ಮತದಾರರ ಹೆಸರುಗಳು ಮಾಯವಾಗಿವೆ.
* ಜೆ.ಟಿ.ಪಾಟೀಲ ಮಾಜಿ ಶಾಸಕ
ಹೇಳಿಕೆ..
ಮತದಾರರ ಪಟ್ಟಿಯಲ್ಲಿ ತಾರತಮ್ಯ ಬಾಗಲಕೋಟೆಯಲ್ಲಿಯೂ ನಡೆದಿದೆ. ದೇವಸ್ಥಾನಗಳಲ್ಲಿ ಮತದಾನ ಕೇಂದ್ರ ಇರಬಾರದೆಂದು ನಿಯಮ ಇದೆ, ಆದರೆ ನಗರದ ಮಾಹೇಶ್ವರಿ ಮಂಗಲ ಕಾರ್ಯಾಲಯ ದೇವಸ್ಥಾನಕ್ಕೆ ಹೊಂದಿಕೊಂಡು ಕೇಂದ್ರ ಸ್ಥಾಪಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಆಕೇಪ ಇದೆ. ಬಾಗಲಕೋಟೆ ನಗರದಲ್ಲಿಯೂ ಮತದಾರರ ಪಟ್ಟಿಯಲ್ಲಿ ಕಾಲೇಜು ಹತ್ತಿರದ ಮತದಾನ ಕೇಂದ್ರದಲ್ಲಿ ಹೊಸದಾಗಿ ಅಕ್ರಮವಾಗಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಅಽಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು.
ಎಚ್.ವೈ.ಮೇಟಿ ಮಾಜಿ ಸಚಿವ