ಬಾಗಲಕೋಟೆ: ಬಾಗಲಕೋಟೆ ನಗರಸಭೆಯು ೨೦೨೩-೨೪ ನೇ ಸಾಲಿನಲ್ಲಿ ೫೨.೩೭ ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದು, ವೇತನ, ಅಭಿವೃದ್ಧಿ ಸೇರಿದಂತೆ ವಿವಿಧ ಉದ್ದೇಶಕ್ಕೆ ೫೧.೭೯ ಕೋಟಿ ರೂ. ವ್ಯಯಿಸಿ, ೫೮ ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ.
ನವನಗರದ ನಗರಸಭೆ ಸಭಾಭವನದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿ ಬದ್ಧವಾಗಿದೆ. ಎಲ್ಲ ವಾರ್ಡಗಳಲ್ಲಿ ಸ್ವಚ್ಛತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಮೂಲಕ ಸೌಕರ್ಯ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಬಾಗಲಕೋಟೆ ನಗರಸಭೆ ೧೮.೫೬ ಕೋಟಿ ರೂ.ಅನುದಾನ ಹೆಚ್ಚುವರಿಯಾಗಿ ಸರ್ಕಾರ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ವಾರ್ಡ್ ಗಳ ಯಾವುದೇ ತಾರತಮ್ಯ ಇಲ್ಲದೆ ಹಳೇ ಬಾಗಲಕೋಟೆ, ವಿದ್ಯಾಗಿರ, ವಾಂಬೆ ಕಾಲೋನಿ, ಹುಡ್ಕೋ ಕಾಲೋನಿ ಸೇರಿದಂತೆ ಎಲ್ಲೆಡೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಇನ್ನು ಬೆಳಗಾವಿ ಅಽವೇಶನ ಸಂದರ್ಭದಲ್ಲಿ ವಸತಿ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿ ಪ್ರಸ್ತಾವ ಸಲ್ಲಿಸಿದ ಪರಿಣಾಮ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಕೋಟಾದಡಿ ೨ ಸಾವಿರ ಮನೆಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಮತಕ್ಷೇತ್ರದ ೨೨ ಗ್ರಾಮ ಪಂಚಾಯಿತಿಗಳಿಗೆ ತಲಾ ೫೦ ಮನೆ, ನಗರಸಭೆಗೆ ೬೦೦, ಶಿರೂರ, ಅಮೀನಗಡ ಹಾಗೂ ಕಮತಗಿ ಪಟ್ಟಣ ಪಂಚಾಯಿತಿಗಳಿಗೆ ತಲಾ ೧೦೦ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ನಗರಸಭೆ ಆಯುಕ್ತ ವಾಸಣ್ಣ ಆರ್ ಇತರರು ಇದ್ದರು.