ಬಸವಕಲ್ಯಾಣ: ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ೨೦೨೫-೨೬ರ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ೪೬.೯೬ ಕೋಟಿ ರೂ. ಆದಾಯ ಮತ್ತು ೪೬.೬೫ ಕೋಟಿ ಖರ್ಚು ನಿರೀಕ್ಷೆಯೊಂದಿಗೆ ಆರಂಭಿಕ ಶುಲ್ಕ ೯.೭೮ ಲಕ್ಷ ರೂ. ಸೇರಿ ೪೧.೧೯ ಲಕ್ಷದ ಉಳಿತಾಯ ಬಜೆಟ್ ಇದಾಗಿದೆ.
ನಾರಾಯಣಪುರ ಕ್ರಾಸ್ ಬಳಿಯ ನಗರಸಭೆ ನೂತನ ಕಟ್ಟಡದಲ್ಲಿ ಅಧ್ಯಕ್ಷ ಎಂಡಿ ಸಗೀರೋದ್ದಿನ್ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಬಜೆಟ್‌ಗೆ ಸದಸ್ಯರು ಸರ್ವಾನುಮತದ ಸಮ್ಮತಿ ಸೂಚಿಸಿದರು. ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದ ಅಧ್ಯಕ್ಷ ಸಗೀರೋದ್ದಿನ್, ರಸ್ತೆ, ಚರಂಡಿ, ಅಭಿವೃದ್ಧಿ, ಸುಂದರೀಕರಣ, ಉದ್ಯಾನ ಸೇರಿ ಸರ್ಕಾರಿ ಸ್ಥಳಗಳ ಸಂರಕ್ಷಣೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಸರ್ಕಾರದ ವಿವಿಧ ಯೋಜನೆ ಅನುದಾನ, ಆಸ್ತಿ ತೆರಿಗೆ, ನೀರಿನ ಶುಲ್ಕ, ದಂಡ, ಕಟ್ಟಡ ಬಾಡಿಗೆ, ಅಭಿವೃದ್ಧಿ ಶುಲ್ಕ ಸೇರಿ ವಿವಿಧ ಮೂಲಗಳಿಂದ ೪೬.೬೫ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಸಿಬ್ಬಂದಿ ವೇತನ, ಅಭಿವೃದ್ಧಿ ಕಾಮಗಾರಿ ಹಾಗೂ ಮೂಲಸೌಲಭ್ಯ ಕಲ್ಪಿಸಲು ಅನುದಾನ ಬಳಸುವುದಾಗಿ ತಿಳಿಸಿದರು.
ಶೇ.೨೪.೧೦ರ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಸಾಮಾನ್ಯ ನಿಧಿಯಲ್ಲಿ ೫೫.೫೨ ಲಕ್ಷ ರೂ., ಶೇ.೭.೨೪ರ ಯೋಜನೆಯಡಿ ಆರ್ಥಿಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಕ್ಕಾಗಿ ೧೬.೭೦ ಲಕ್ಷ ರೂ. ಹಾಗೂ ಶೇ.೫ರಡಿ ಅಂಗವಿಕಲರ ಅಭಿವೃದ್ಧಿಗೆ ೧೧,೫೧ ಲಕ್ಷ ರೂ. ಹಾಗೂ ಕ್ರೀಡಾ ಯೋಜನೆಗೆ ೨.೩೦ ಲಕ್ಷ ರೂ. ಕಾದಿರಿಸಿದ್ದು ವಿಶೇಷ.
ಆರ್ಥಿಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾದಿರಿಸಿದ ಅನುದಾನದ ಬಗ್ಗೆ ನಿರ್ಮಲಾ ಶಿವಣಕರ ಸ್ಪಷ್ಟನೆ ಕೇಳಿದಾಗ, ಸರ್ಕಾರಿ ನಿಯಮದಂತೆ ಇಡಲಾಗಿದೆ ಎಂದು ಗಫಾರ್ ಪೇಶಮಾಮ್ ಉತ್ತರಿಸಿದರು.
ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಫುಲೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಮ್ಜದ್ ನವರಂಗ, ರವೀಂದ್ರ ಬೋರಾಳೆ, ಮಲ್ಲಿಕಾರ್ಜುನ ಬೊಕ್ಕೆ, ಏಜಾಜ್ ಲಾತೂರೆ, ರಾಮ ಜಾಧವ್, ಮೂಸಾಮಿಯಾ, ಶಹಜಹಾನ್ ಬೇಗಂ, ಅರಸುನ್ನಿಸಾ ಬೇಗಂ, ರೇಖಾ ಮೇತ್ರಸ್ಕರ್, ಮೀನಾ ಗೋಡಬೋಲೆ, ಯುವರಾಜ ಭೆಂಡೆ, ಡಾ.ಖದೀರೋದ್ದಿನ್ ಇತರರಿದ್ದರು. ಪೌರಾಯುಕ್ತ ರಾಜು ಡಿ.ಬಣಕಾರ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅವರನ್ನು ಸನ್ಮಾನಿಸಲಾಯಿತು.
ನಗರಸಭೆಯಲ್ಲಿ ಮಂಡಿಸಿದ ಬಜೆಟ್ ಸಂತೋಷದಾಯಕವಾಗಿದೆ. ೪೬.೯೬ ಕೋಟಿ ರೂ. ಅದಾಯ, ೪೬.೬೫ ಕೋಟಿ ರೂ. ಖರ್ಚು ನಿರೀಕ್ಷೆಯೊಂದಿಗೆ ಆರಂಭಿಕ ಶುಲ್ಕ ೯.೭೮ ಲಕ್ಷ ರೂ. ಇರುವುದು ಶಿಸ್ತು ಮತ್ತು ಪಾರದರ್ಶಕತೆ ತೋರುತ್ತದೆ.
| ಎಂ.ಜಿ.ಮುಳೆ ವಿಧಾನ ಪರಿಷತ್ ಸದಸ್ಯ
ನಗರದಲ್ಲಿ ಅಭಿವೃದ್ಧಿ ಕೆಲಸ ಹಾಗೂ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ರಸ್ತೆ, ಚರಂಡಿ, ಆರೋಗ್ಯ ಸ್ವಚ್ಛತೆ, ಸುಂದರೀಕರಣ ಮತ್ತು ಸರ್ಕಾರಿ ಸ್ಥಳ ಸೇರಿ ಉದ್ಯಾನಗಳ ಸಂರಕ್ಷಣೆಗೆ ಪ್ರಯತ್ನಿಸಲಾಗುವುದು.
| ಎಂಡಿ ಸಗೀರೋದ್ದಿನ್ ನಗರಸಭೆ ಅಧ್ಯಕ್ಷ
ಸಿಂಗಾರಗೊಂಡ ಕಟ್ಟಡ: ನಗರಸಭೆಯಲ್ಲಿ ಬಜೆಟ್ ಸಂಬಂಧ ಕರೆದಿದ್ದ ವಿಶೇಷ ಸಾಮಾನ್ಯ ಸಭೆಗಾಗಿ ಮಾಡಿದ ವ್ಯವಸ್ಥೆ ಗಮನ ಸೆಳೆಯಿತು. ಕಟ್ಟಡದ ಮುಖ್ಯ ಗೇಟ್, ಮುಖ್ಯದ್ವಾರಕ್ಕೆ ತೆಂಗಿನ ತೋರಣ ಕಟ್ಟಲಾಗಿತ್ತು. ಸಭಾಂಗಣವರೆಗೆ ರೆಡ್ ಕಾರ್ಪೆಟ್ ಹಾಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿ, ಪುಷ್ಪಾಲಂಕಾರದೊಂದಿಗೆ ಸಿಂಗರಿಸಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು.