ಜಿಲ್ಲೆ

೨೨ನೇ ಕಲ್ಯಾಣ ಪರ್ವ ನಾಳೆಯಿಂದ

ಕಲಬುರಗಿ: ಬಸವಕಲ್ಯಾಣದ ಬಸವ ಮಹಾಮನೆಯ ಪರಿಸರದಲ್ಲಿ ಅ.೨೮ರಿಂದ ಮೂರು ದಿನ ೨೨ನೇ ಕಲ್ಯಾಣ ಪರ್ವ ಜರುಗಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ, ತೆಲಂಗಾಣ ಸೇರಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ರಾಷ್ಟಿಯ ಬಸವ ದಳದ ಆರ್.ಜಿ.ಶೆಟಗಾರ ತಿಳಿಸಿದರು.

ಡಾ.ಮಾತೆ ಮಹಾದೇವಿ ಅವರ ಸಂಕಲ್ಪದಂತೆ, ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ಬಸವ ಧರ್ಮ ಪೀಠ, ರಾಷ್ಟಿಯ ಬಸವ ದಳ, ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಮೂರು ದಿನ ವೈವಿಧ್ಯಮಯ ಕಾರ್ಯಕ್ರಮ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

೨೮ರಂದು ಬೆಳಗ್ಗೆ ೧೦.೩೦ಕ್ಕೆ ವಿವಿಧ ಪೂಜ್ಯರ ಸಾನ್ನಿಧ್ಯದಲ್ಲಿ ಸಚಿವ ಈಶ್ವರ ಖಂಡ್ರೆ ಪರ್ವಕ್ಕೆ ಚಾಲನೆ ನೀಡಲಿದ್ದಾರೆ. ಬಸವರಾಜ ಕೊರಕೆ ಧ್ವಜಾರೋಹಣ, ಶಾಸಕ ಶರಣು ಸಲಗರ ಬಸವ ಪೂಜೆ ನೆರವೇರಿಸಲಿದ್ದಾರೆ. ಜಗದ್ಗುರು ಮಾತೆ ಗಂಗಾದೇವಿ, ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಗುರುಬಸವ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು ವಿವಿಧ ಪೂಜ್ಯರು ಭಾಗವಹಿಸಲಿದ್ದಾರೆ. ಅನುಭಾವ ನಡೆಯಲಿದೆ. ೪ಕ್ಕೆ ಧರ್ಮ ಚಿಂತನ ಗೋಷ್ಠಿ. ರಾತ್ರಿ ೮ಕ್ಕೆ ವಚನ ನೃತ್ಯ ಹಾಗೂ ರೂಪಕ ನಡೆಯಲಿದೆ ಎಂದು ತಿಳಿಸಿದರು.

೨೯ರಂದು ಬೆಳಗ್ಗೆ ೭.೩೦ಕ್ಕೆ ಶರಣ ವಂದನೆ, ಶರಣರಿಗೆ ಶರಣಾರ್ಥಿ ನಡೆಯಲಿದೆ, ಬೆಳಗ್ಗೆ ೧೦ಕ್ಕೆ ಧರ್ಮ ಚಿಂತನ ಗೋಷ್ಠಿ -೨, ಮಧ್ಯಾಹ್ನ ೩.೩೦ಕ್ಕೆ ಮಹಿಳಾ ಗೋಷ್ಠಿ, ಸಂಜೆ ೭ಕ್ಕೆ ಶೂನ್ಯ ಪೀಠಾರೋಹಣ, ವಾರ್ಷಿಕೋತ್ಸವ, ೭.೩೦ಕ್ಕೆ ಅಕ್ಕ ನಾಗಲಾಂಬಿಕಾ ಸಂಸ್ಮರಣೆ, ಬಸವ ಧರ್ಮದ ವಿಜಯೋತ್ಸವ ನಡೆಯಲಿದೆ ಎಂದರು.

೩೦ರಂದು ಬೆಳಗ್ಗೆ ೯ಕ್ಕೆ ಬಸವಣ್ಣನವರ ಭಾವಚಿತ್ರ, ಆನೆ ಮೇಲೆ ವಚನ ಸಾಹಿತ್ಯದ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೂರು ದಿನ ನಿತ್ಯ ವಿವಿಧ ಗೋಷ್ಠಿ, ರಾಷ್ಟç ಮಟ್ಟದ ಕಲಾವಿದರಿಂದ ವಚನ ಸಂಗೀತ, ರೂಪಕ ನಡೆಯಲಿದೆ ಎಂದು ತಿಳಿಸಿದರು.
ಪ್ರಮುಖರಾದ ಪ್ರಭುಲಿಂಗ ಮಾನಕರ, ಹಣಮಂತರಾವ, ಸಿದ್ರಾಮಪ್ಪ ಲದ್ದೆ, ಶಾಂತಪ್ಪ ಪಾಟೀಲ್, ರೇವಣಸಿದ್ದಪ್ಪ ಹೆಗಡೆ ಇದ್ದರು.