ಕಲಬುರಗಿ: ಸಾವಿರಾರು ವರ್ಷದ ಇತಿಹಾಸದಂತೆ ವೃತ್ತಿಪರ ಜೀವನ ಮಾಡುವವರಿಗೆ ಪುನಶ್ಚೇತನ ನೀಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ಸಿಕ್ಕಿದ್ದು, ೧೮ ವೃತ್ತಿಪರರಿಗೆ ಅನ್ವಯಿಸಲಿದೆ ಎಂದು ಯೋಜನೆ ರಾಜ್ಯ ಸಂಚಾಲಕರೂ ಆದ ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ದೇಶದಲ್ಲಿ ಕರ್ಮಯೋಗಿಗಳ ಉತ್ತೇಜನ, ಗುರು-ಶಿಷ್ಯ ಪರಂಪರೆ ಬೆಳೆಸುವ ದೃಷ್ಟಿಯಿಂದ ಐದು ವರ್ಷಗಳಿಗಾಗಿ ಯೋಜನೆಗೆ ಚಾಲನೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಕಾರ್ಯರೂಪಕ್ಕೆ ತರಲು ೧೩ ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮರ ಗೆಲಸದವರು (ಕಾರ್ಪೆಂಟರ್), ದೋಣಿ ಕಟ್ಟುವವರು, ಕಬ್ಬಿಣದ ಆಯುಧ ತಯಾರಿಸುವವರು, ಟೂಲ್ ಕಿಟ್ ಮೇಕರ್, ಬೀಗದ ಕೆಲಸ, ಅಕ್ಕಸಾಲಿಗರು (ಚಿನ್ನದ ಕೆಲಸ), ಮಡಿಕೆ ತಯಾರಕರು (ಕುಂಬಾರರು), ಕಲ್ಲಿನ ಕೆಲಸಗಾರರು, ಚಮ್ಮಾರರು, ಮನೆ ಕಟ್ಟುವವರು (ಗೌಂಡಿ), ಚಾಪೆ/ಸೆಣಬಿನ ಕೆಲಸ/ಪೊರಕೆ ತಯಾರಕರು, ಸಾಂಪ್ರದಾಯಿಕ ಆಟಿಕೆ/ಗೊಂಬೆ ತಯಾರಕರು, ಕ್ಷೌರಿಕರು, ಸವಿತಾ ಸಮಾಜ, ಹೂ, ಹಾರ ತಯಾರಕರು, ಧೋಬಿ ಕೆಲಸದವರು, ಟೈಲರ್/ದರ್ಜಿ, ಮೀನು ಬಲೆ ತಯಾರಕರು ಫಲಾನುಭವಿಗಳಾಗಿದ್ದಾರೆ ಎಂದು ವಿವರಿಸಿದರು.
ಫಲಾನುಭವಿಗಳಿಗೆ ತರಬೇತಿ, ಆಸಕ್ತರಿಗೆ ೧೫ ದಿನ ತರಬೇತಿ ಜತೆಗೆ ನಿತ್ಯ ೫೦೦ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ತರಬೇತಿ ಬಳಿಕ ೧೫ ಸಾವಿರ ರೂ.ಗಳ ಹೆಲ್ಪ್ ಟೂಲ್‌ಕಿಟ್ ನೀಡಲಾಗುವುದು. ಯಾವುದೇ ಗ್ಯಾರಂಟಿ ಇಲ್ಲದೆ ಒಂದು ಲಕ್ಷ ರೂ.ವರೆಗೆ ಅಭಿವೃದ್ಧಿ ಸಾಲ, ೧೮ ತಿಂಗಳಲ್ಲಿ ಮರುಪಾವತಿಗೆ ಅವಕಾಶವಿದೆ ಎಂದರು.
೧೮ ವರ್ಷ ಮೇಲ್ಪಟ್ಟವರು ಯೋಜನೆಯಡಿ ಹೆಸರು ನೋಂದಾಯಿಸಬಹುದು. ಫಲಾನುಭವಿಗಳು ಸ್ವಂತ ಉದ್ಯೋಗದ ಯಾವುದೇ ಯೋಜನೆ ಅಡಿ ಫಲಾನುಭವಿ ಆಗಿರಬಾರದು. ಒಂದು ಕುಟುಂಬದ ಒಬ್ಬರು ಮಾತ್ರ ಅರ್ಹರು. ಮನೆಯಲ್ಲಿ ಯಾರೇ ಸರ್ಕಾರಿ ಉದ್ಯೋಗದಲ್ಲಿದ್ದರೆ ಈ ಯೋಜನೆಗೆ ಅರ್ಹರಲ್ಲ. ಪಿಎಂ ವಿಶ್ವಕರ್ಮ ಪೋರ್ಟಲ್ ಅಥವಾ ಸಿಎಸ್‌ಸಿ ಸೆಂಟರ್‌ಗಳ ಮೂಲಕ ನೋಂದಣಿ ಮಾಡಬಹುದು. ಮಾಹಿತಿಗಾಗಿ ಮೊಬೈಲ್ ಆ್ಯಪ್ ಹಾಗೂ ೧೭೯೨೩, ೧೮೦೦-೨೬-೭೭೭೭೭ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಯುವ ಮುಖಂಡರಾದ ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಸಂತೋಷ ತಳವಾರ, ಸಿದ್ದಾರೆಡ್ಡಿ ಇತರರಿದ್ದರು.