ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ ೧೪ರ ಕಕ್ಕೇರಾ ತಾಂಡಾದಲ್ಲಿ ಗಾಳಿ-ಮಳೆಗೆ ವಿದ್ಯುತ್ ಟಿಸಿ ಮತ್ತು ಕಂಬಗಳು ಮುರಿದು ಬಿದ್ದಿರುವುದು. 
ಜಿಲ್ಲೆ

೧೫ ದಿನದಿಂದ ಬೆಳಕು ಕಾಣದ ಕಕ್ಕೇರಾ ತಾಂಡಾ

ಕಕ್ಕೇರಾ: ಎರಡು ವಾರದ ಹಿಂದೆ ಸುರಿದ ಮಳೆ ಮತ್ತು ಗಾಳಿಯಿಂದಾಗಿ ವಿದ್ಯುತ್ ಪರಿವರ್ತಕ ಮತ್ತು ಕಂಬಗಳು ನೆಲಕ್ಕುರುಳಿದ್ದರಿಂದ ಪುರಸಭೆ ವ್ಯಾಪ್ತಿಯ ವಾರ್ಡ್ ೧೪ರ ಕಕ್ಕೇರಾ ತಾಂಡಾ ನಿವಾಸಿಗಳು ಕತ್ತಲಲ್ಲೇ ದಿನದೂಡುವಂತಾಗಿದೆ.

೧೫ ದಿನ ಹಿಂದೆ ಗಾಳಿ-ಮಳೆಗೆ ತಾಂಡಾದಲ್ಲಿದ್ದ ಒಂದು ವಿದ್ಯುತ್ ಪರಿವರ್ತಕ ಹಾಗೂ ಐದಾರು ಕಂಬಗಳು ನೆಲಕ್ಕುರುಳಿದ ಬಗ್ಗೆ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ಹತ್ತಾರು ಬಾರಿ ತಂದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ರಾತ್ರಿ ಬೆಳಕಿಲ್ಲದೆ ಸೊಳ್ಳೆ ಕಾಟ ಜತೆಗೆ ವಿಷ ಜಂತುಗಳ ಭಯದಲ್ಲೇ ದಿನದೂಡುತ್ತಿರುವುದಾಗಿ ನಿವಾಸಿಗಳು ವಿಜಯವಾಣಿ ಎದುರು ಅಳಲು ತೋಡಿಕೊಂಡಿದ್ದಾರೆ.

ಮೊಬೈಲ್ ಚಾರ್ಜಿಂಗ್ ಹಾಗೂ ಜೋಳ, ಸಜ್ಜೆ ಬೀಸಲು ಸಮೀಪದ ಅಂಬಾನಗರಕ್ಕೆ ಹೋಗುವಂತಾಗಿದೆ. ರಾತ್ರಿ ವೇಳೆ ಮಕ್ಕಳ ಕಲಿಕೆಗೂ ತೊಂದರೆಯಾಗಿದೆ. ನಲ್ಲಿಗಳಲ್ಲಿ ನೀರು ಸಹ ಬರುತ್ತಿಲ್ಲವೆಂದು ಹೇಳಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಕೂಡಲೇ ಜೆಸ್ಕಾಂ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ಹೊಸದಾಗಿ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳನ್ನು ಅಳವಡಿಸಿ ಬೆಳಕು ಕಲ್ಪಿಸಬೇಕು ಎಂದು ತಾಂಡಾದ ಬದ್ದೆನಾಯಕ ರಾಠೋಡ್, ತಿರುಪತಿ ಪವಾರ್, ಪೋಮಾ ನಾಯಕ, ಕಾರಬಾರಿ ಪವಾರ್, ಖೇಮಾ ನಾಯಕ, ವಿಠ್ಠಲ್ ರಾಠೋಡ್, ಶಾಂತಿಲಾಲ್ ರಾಠೋಡ್, ನಾಗರಾಜ ರಾಠೋಡ್, ಶ್ರೀನಿವಾಸ ರಾಠೋಡ್ ಆಗ್ರಹಿಸಿದ್ದಾರೆ.