ಬಾಗಲಕೋಟೆ: ನಗರಸಭೆಯಲ್ಲಿ ಸೋಮವಾರ 2025–26ನೇ ಸಾಲಿಗೆ ₹12.35 ಲಕ್ಷ ಉಳಿತಾಯದ ಬಜೆಟ್ ಮಂಡಿಸಲಾಯಿತು.
ಬಜೆಟ್ ಮಂಡಿಸಿದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, 2025–26 ಬಜೆಟ್‌ನಲ್ಲಿ ವಿವಿಧ ಮೂಲಗಳಿಂದ ₹50.93 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹50.81 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದರು.
2024–25ನೇ ಸಾಲಿನಲ್ಲಿ ₹48.90 ಕೋಟಿ ಬಜೆಟ್ ಮಂಡಿಸಲಾಗಿದೆ. ₹48.72 ಕೋಟಿ ವೆಚ್ಚ ಮಾಡಲು ಉದ್ದೇಶಿಸಿ, ₹17.68 ಲಕ್ಷ ಉಳಿತಾಯದ ಬಜೆಟ್ ಮಂಡಿಸಲಾಗಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ ₹2.03 ಕೋಟಿ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆಯಿಂದ ₹6.04 ಕೋಟಿ, ಜಾಹೀರಾತಿನಿಂದ ₹2.30 ಲಕ್ಷ, ನೀರಿನ ಶುಲ್ಕದಿಂದ ₹1.82 ಕೋಟಿ, ಕಟ್ಟಡ ಅನುಮತಿಯಿಂದ ₹50 ಲಕ್ಷ, ಮಳಿಗೆಗಳ ಬಾಡಿಗೆಯಿಂದ ₹40.62, ಆಸ್ತಿ ತೆರಿಗೆ, ಬಡ್ಡಿ, ದಂಡದಿಂದ ₹1 ಕೋಟಿ ಆದಾಯ ಸಂಗ್ರಹಿಸಲಾಗುತ್ತದೆ.
ವಿದ್ಯುತ್ ಅನುದಾನ ₹8 ಕೋಟಿ, ವೇತನ ಅನುದಾನ ₹8.85 ಕೋಟಿ, ಎಸ್‌ಎಫ್‌ಸಿ ಅನುದಾನ ₹2 ಕೋಟಿ, 15 ಮತ್ತು 16ನೇ ಹಣಕಾಸು ಅನುದಾನ ₹9 ಕೋಟಿ, ನಿರ್ದಿಷ್ಟ ಉದ್ದೇಶಗಳಿಗಾಗಿ ಸ್ವೀಕರಿಸಿದ ಅನುದಾನ ₹2.60 ಕೋಟಿ ನಿರೀಕ್ಷಿಸಲಾಗಿದೆ ಎಂದರು.
ಬೀದಿ ದೀಪಗಳ ನಿರ್ವಹಣೆಗೆ ₹86 ಲಕ್ಷ, ವಾಹನಗಳ ಡ್ರೈವರ್ ಹಾಗೂ ಲೊಡರ್ ಪೂರೈಕೆಗೆ ₹2.28 ಕೋಟಿ, ಘನತ್ಯಾಜ್ಯ ಘಟಕ ನಿರ್ವಹಣೆಗೆ ₹53.90 ಲಕ್ಷ, ವಾಹನಗಳ ದುರಸ್ತಿ ಮತ್ತು ವಿಮೆಗೆ ₹27.50 ಲಕ್ಷ, ವಾಹನಗಳ ಇಂಧನಕ್ಕೆ ₹90 ಲಕ್ಷ, ಆರೋಗ್ಯ ಶಾಖೆ ಪರಿಕರಣಗಳ ಖರೀದಿಗೆ ₹25 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ನೀರು ಸರಬರಾಜು ಸಲಕರಣೆ ಹಾಗೂ ರಿಪೇರಿ ₹1.10 ಕೋಟಿ, ವೇತನ ಭತ್ಯೆ, ಪಿಂಚಣಿಗೆ ₹8.65 ಕೋಟಿ, ವಿದ್ಯುತ್ ಬಿಲ್ ವೆಚ್ಚ ₹8 ಕೋಟಿ, ಸಮುದಾಯ ಭವನ ನಿರ್ಮಾಣಕ್ಕೆ ₹60 ಲಕ್ಷ, ರಸ್ತೆ, ಪಾದಚಾರಿ ರಸ್ತೆ ನಿರ್ಮಾಣಕ್ಕೆ ₹2.50 ಕೋಟಿ, ಬೀದಿ ದೀಪ ನಿರ್ಮಾಣಕ್ಕೆ ₹80 ಲಕ್ಷ, ನೀರು ಪೂರೈಕೆ ಕಾಮಗಾರಿಗಳಿಗೆ ₹2.05 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದರು.
ಉಪಾಧ್ಯಕ್ಷೆ ಶೋಭಾ ರಾವ್, ಸಭಾಪತಿ ಯಲ್ಲಪ್ಪ ನಾರಾಯಣಿ, aಯುಕ್ತ ವಾಸಣ್ಣ ಆರ್ ಇದ್ದರು.