ಹಾಸನ: ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಶಿವರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರ 61ನೇ ವರ್ಷದ ಹುಟ್ಟುಹಬ್ಬವನ್ನು ನಗರದ ಎನ್.ಆರ್. ವೃತ್ತದ ಬಳಿ ಇರುವ ಪುನೀತ್ ರಾಜಕುಮಾರ್ ಪ್ರತಿಮೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೊದಲು ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಜ್ಯೋತಿ ಬೆಳಗಿ ಬೃಹತ್ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ಬಳಿಕ ಕುಮಾರ್ ಹಾಗೂ ಗಂಗಾದರ್ ಅವರು ಡಾ. ರಾಜ್‌ಕುಮಾರ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ನಟನೆಯ ಚಲನಚಿತ್ರ ಗೀತೆಗಳನ್ನು ಹಾಡಿದರು. ಇದಾದ ಬಳಿಕ ಸಾರ್ವಜನಿಕರಿಗೆ ಅನ್ನದಾನ ನೆರವೇರಿಸಲಾಯಿತು.
ಶಿವರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್ ಅವರು, ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರು ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಅವರ ಚಲನಚಿತ್ರಗಳು ಹಾಗೂ ಅವರ ಸೇವಾ ಕಾರ್ಯಗಳು ನಮ್ಮ ಕಣ್ಣ ಮುಂದೆ ಇನ್ನು ಜೀವಂತವಾಗಿವೆ. ಅವರ ಆದರ್ಶಗಳು ನಮಗೆ ಸ್ಫೂರ್ತಿದಾಯಕವಾಗಬೇಕು. ಶಿವರಾಜಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಅವರ ನಟನೆಯ ಚಿತ್ರಗಳು ಇನ್ನಷ್ಟು ಹೆಚ್ಚು ಬರಲಿ. ಅವರಿಗೆ ಭಗವಂತ ಇನ್ನು ಹೆಚ್ಚಿನ ಆರೋಗ್ಯ, ಆಯಸ್ಸನ್ನು ಕೊಡಲಿ. ಅವರು ಇನ್ನು ಹೆಚ್ಚಿನ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಎನ್.ಎನ್. ಉಮೇಶ್, ಕುಮಾರ್ ಮಹಾಂತೇಶ್, ನಾಗರಾಜು, ಸಿ.ಆರ್. ನಾಗೇಂದ್ರ, ಚಿನ್ನಸ್ವಾಮಿ, ರಘು ಬ್ಯಾಂಕ್, ಗಂಗಾಧರ್, ಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.