ಬಾಗಲಕೋಟೆ: ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿಯಲ್ಲಿ ಕೇವಲ ಸಂಭ್ರಮ, ಸಂತಸಕ್ಕೆ ಸಿಮೀತವಾಗಿಲ್ಲ. ಕಾಮದಹನ, ತುರಾಯಿ ಹಲಗೆ, ನಿಶಾನೆ ಪ್ರತಿಯೊಂದಕ್ಕೂ ಅರ್ಥವಿದೆ. ಅದರಲ್ಲೂ ಐದು ದಿನಗಳ ಕಾಲ ಪ್ರತಿ ದಿನ ರಾತ್ರಿ ಒಂದೊಂದು ಪೇಟೆಯಿಂದ ನಡೆಯುವ ಸೋಗಿನ ಮೆರವಣಿ ಸಾಮಾಜಿಕ, ದೇಶ, ದೈವ ಭಕ್ತಿ ಭಾವಗಳ ಸಂದೇಶ ಸಾರುತ್ತವೆ.
ಈಚೆಗಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಕ್ಷಣಿಸಿದ ಸೋಗಿನ ಮೆರವಣಿಗೆ ಈಚೆಗಿನ ದಿನಗಳಲ್ಲಿ ಮತ್ತೆ ವಿಜೃಂಭಣೆಯಿಂದ ಜರುಗುತ್ತಿದೆ. ಪ್ರಸಕ್ತ ವರ್ಷದ ಹೋಳಿ ಹಬ್ಬದ ಅಂಗವಾಗಿ ನಡೆಯುತ್ತಿರುವ ಸೋಗಿನ ಮೆರವಣಿಗೆ ಹೋಳಿ ಸೊಬಗು ಹೆಚ್ಚಿಸಿದೆ. ರಾತ್ರಿ ಜನರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಣೆ ಮಾಡಿದರು.
ಮೊದಲನೇ ದಿನ ಕಿಲ್ಲಾ ಗಲ್ಲಿಯ ವಿವಿಧ ಮಂಡಳಿಗಳು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಭಗಸಿಂಗ್, ಸುಖದೇವ, ರಾಜಗುರು ಪಾತ್ರದಲ್ಲಿ ದೇಶಭಕ್ತಿ ಮೆರೆದರು. ದಂಡ ಪಿಂಡಗಳು ಪ್ರದರ್ಶನವಂತು ನಾಚಿಸುವಂತೆ ಇತ್ತು. ಎರಡನೇ ದಿನ ಹಳಪೇಟೆಯ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಭಾರತ ಮಾತೆ, ಓನಕೆ ಓಬ್ಬವ್ವ, ಮಹರ್ಷಿ ಭಗೀರರ್ಥ, ಮೂರನೇ ದಿನ ಹಳಪೇಟೆಯ ರಾಧಾಕೃಷ್ಣ, ಕೃಷ್ಣಾ ಅರ್ಜುನ, ಬಾಲ ಹನುಮ, ಉಗ್ರ ನರಸಿಂಹ, ಬೆಳವಡಿ ಮಲ್ಲಮ್ಮ, ಅಯೋಧ್ಯ ಶ್ರೀರಾಮ, ಮಹಾ ಭಾರತದ ಅರ್ಜುನ ಪಾತ್ರದಲ್ಲಿ ಯುವಕರು, ಮಹಿಳೆಯರು ಮಿಂಚಿದರು.
ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಮಾತನಾಡಿ, ಬಾಗಲಕೋಟೆ ಹೋಳಿ ಉತ್ಸವ ತನ್ನದೆಯಾದ ವೈಭವ ಹೊಂದಿದೆ. ಐದು ದಿನಗಳ ನಡೆಯುತ್ತಿದ್ದ ಬಣ್ಣದಾಟ ಮೂರು ದಿನ ನಡೆಯತ್ತಿದೆ. ಆದರೇ ಸೋಗಿನ ಮೆರವಣಿಗೆ ಯಥಾವತ್ತಾಗಿ ಐದು ದಿನ ನಡೆಯುತ್ತದೆ. ಮುಳಗಡೆಯಾದ ಬಳಿಕ ಸೋಗಿನ ಮೆರವಣಿಗೆ ಸೊಬಗು ಕ್ಷಿಣಿಸಿತ್ತು. ಈಚೆಗಿನ ಕೆಲವು ವರ್ಷಗಳಲ್ಲಿ ಹೆಚ್ಚಾಗಿದ್ದು ಸಂತಸ ಉಂಟು ಮಾಡಿದೆ. ಸಾರ್ವಜನಿಕರ ಪ್ರೋತ್ಸಾಹ ಇದ್ದಾಗ ಮಾತ್ರ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯ ಎಂದರು.