ವಿಜಯಕುಮಾರ್ ನಾಡಿಗೇರ್ ಶಿಕಾರಿಪುರ
ಮಲೆನಾಡಿಗರ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಸ್ಥಾನ. ಇದೊಂದು ಜನಪದ ಹಬ್ಬವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಹಬ್ಬ ಕಳೆಗಟ್ಟಲು ಇರುವ ಮತ್ತೊಂದು ಕಾರಣ ಹೋರಿ ಬೆದರಿಸುವುದು. ಹೋರಿ ಬೆದರಿಸುವ ಹಬ್ಬಕ್ಕಾಗಿಯೇ ಲಕ್ಷಾಂತರ ರೂ. ಕೊಟ್ಟು ಹೋರಿಗಳನ್ನು ತಂದು ಅವುಗಳಿಗೆ ಅತ್ಯುತ್ತಮ ಆಹಾರ ನೀಡಿ ಪಾಲನೆ ಮಾಡುತ್ತಾರೆ. ಮಲೆನಾಡಿನ ಹೋರಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿರುವುದು ವಿಶೇಷ.
ತರೀಕೆರೆ, ಹಾಸನ ಸೇರಿದಂತೆ ಜಾನುವಾರು ಸಂತೆಗಳಲ್ಲಿ ಲಕ್ಷಾಂತರ ರೂ. ನೀಡಿ ಹೋರಿ ಖರೀದಿಸಿ ಹೋರಿ ಹಬ್ಬಕ್ಕಾಗಿಯೇ ವರ್ಷವಿಡೀ ಉತ್ತಮವಾದ ಆಹಾರ ನೀಡಿ ಬೆಳೆಸಲಾಗುತ್ತದೆ.
ಶಿಕಾರಿಪುರ ಪಟ್ಟಣದ ಬಹುತೇಕ ಮನೆಗಳಲ್ಲಿ ಯುವಕರು ಹಬ್ಬದ ಹೋರಿ ತಂದು ಸಾಕುತ್ತಾರೆ. ಈ ಬಾರಿಯೂ ಸಾಕಷ್ಟು ಮನೆಗಳಲ್ಲಿ ಹಬ್ಬದ ಹೋರಿಗಳಿವೆ. ದೀಪಾವಳಿಯಿಂದ ಪ್ರಾರಂಭವಾಗುವ ಈ ಹಬ್ಬ ಜನವರಿವರೆಗೂ ಸಾಂಪ್ರದಾಯಿಕವಾಗಿ ನಡೆಯುತ್ತದೆ. ಜಿಲ್ಲಾಮಟ್ಟ, ರಾಜ್ಯಮಟ್ಟದ ಸ್ಪರ್ಧೆಗಳನ್ನು ಮೇ ಅಂತ್ಯದವರೆಗೂ ಆಯೋಜಿಸಲಾಗುತ್ತದೆ.
ತಾಲೂಕಿನಲ್ಲಿ ಮೊದಲ ಬಾರಿಗೆ ಶಿರಾಳಕೊಪ್ಪದಲ್ಲಿ 1997ರಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬವನ್ನು ಸ್ಥಳೀಯ ಹೋರಿ ಬೆದರಿಸುವ ಹಬ್ಬದ ಆಚರಣಾ ಸಮಿತಿಯಿಂದ ಆಚರಿಸಲಾಗಿತ್ತು. 90ರ ದಶಕದಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಕರ್ನಲ್ಲಿ ಮೂಲಿಮನೆ ಹಾಲಪ್ಪನವರ ಹೋರಿಗೆ ಒಂದು ವರ್ಷದವರೆಗೆ ಸರ್ಕಾರ ಅದರ ಪಾಲನೆ, ಪೋಷಣೆಗೆ ಅವರಿಗೆ ಪ್ರತಿ ತಿಂಗಳು ಗೌರವಧನ ನೀಡುತ್ತಿತ್ತು. ಇದು ಶಿಕಾರಿಪುರ ತಾಲೂಕಿನ ಹೆಮ್ಮೆ.
20 ಲಕ್ಷ ರೂ.ಗೆ ಮಾರಾಟವಾದ ಹೋರಿ
ಶಿಕಾರಿಪುರ ತಾಲೂಕಿನ ಗಾಂನಗರದ ಹೋರಿಯೊಂದು ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆಗಾಗಿ 20 ಲಕ್ಷ ರೂ.ಗೆ ಮಾರಾಟವಾಗಿದೆ. ನಮ್ಮ ಹೋರಿಗಳು ಓಡುವ ವೇಗದ ಆಧಾರದ ಮೇಲೆ ತಮಿಳುನಾಡಿನವರು ಜಲ್ಲಿಕಟ್ಟಿಗೆ ಹೋರಿಗಳನ್ನು ಖರೀದಿ ಮಾಡುತ್ತಾರೆ. ಇತ್ತೀಚೆಗೆ ಕರ್ನಾಟಕದ ಹೋರಿಗಳನ್ನು ತಮಿಳುನಾಡಿನವರು ಖರೀದಿಸುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಹೋರಿ ಬೆದರಿಸುವುದು ರಣರೋಚಕವಾದ ಹಬ್ಬ. ಅದು ನಮ್ಮ ಸಂಸ್ಕೃತಿ ಬಿಂಬಿಸುತ್ತದೆ. ಈ ಹಬ್ಬ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಬಳುವಳಿ. ರೈತಾಪಿ ಯುವಕರು ಹೋರಿ ಬೆದರಿಸುವ ಹಬ್ಬದಲ್ಲಿ ತಮ್ಮ ಸುರಕ್ಷತೆ ಬಗ್ಗೆ ಮೊದಲು ಗಮನ ಹರಿಸಬೇಕು. ಯಾವುದೇ ರೀತಿಯ ಗಲಾಟೆ, ಗದ್ದಲ, ಮನಸ್ತಾಪ ಇಲ್ಲದಂತೆ ನಾವು ಈ ಹಬ್ಬವನ್ನು ಆಚರಿಸಬೇಕು.
ಬಿ.ವೈ.ರಾಘವೇಂದ್ರ
ಸಂಸದ
ಈ ಹಿಂದೆ ಸರ್ಕಾರ ಹೋರಿ ಹಬ್ಬಕ್ಕೆ ಕಡಿವಾಣ ಹಾಕಿದ ಸಂದರ್ಭದಲ್ಲಿ ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡಿ ಹೋರಿ ಹಬ್ಬ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಇತ್ತೀಚೆಗೆ ಹೋರಿ ಹಬ್ಬವನ್ನು ಕೆಲವರು ಲಾಭಕ್ಕಾಗಿ ಬಳಸಿಕೊಂಡು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಬೇಸಿಗೆಯ ಬಿರುಬಿಸಿಲಿನಲ್ಲಿಯೂ ಸಹ ಹೋರಿ ಹಬ್ಬಗಳ ಆಚರಣೆಗೆ ಕೆಲ ಅಕಾರಿಗಳು ಅನುಮತಿ ನೀಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಮತ್ತು ಕಂಬಳದ ರೀತಿ ಹೋರಿ ಹಬ್ಬ ಸಾಂಪ್ರದಾಯಿಕ ಆಚರಣೆಯಾಗಿ ಉಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕು.
ಶಿವರಾಜ್ ಸುಣ್ಣದಕೊಪ್ಪ,
ಅಧ್ಯಕ್ಷರು, ಹೋರಿ ಹಬ್ಬ ಹೋರಾಟ ಸಮಿತಿ ಶಿಕಾರಿಪುರ
ಹೋರಿ ಬೆದರಿಸುವುದು ಅಕ್ಷರಶಃ ನಮ್ಮ ರೈತರ ಹಬ್ಬ. ವರ್ಷವಿಡೀ ಅದರೊಂದಿಗೆ ದುಡಿದು ದೀಪಾವಳಿ ದಿನ ಅದಕ್ಕೆ ಅಲಂಕರಿಸಿ ಬೆದರಿಸಿ ಸಂಭ್ರಮಪಡುವ ದಿನ. ನಾನೂ ಸಹ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಈಸೂರು ದಂಗೆ ಎನ್ನುವ ಎರಡು ಹೋರಿಗಳನ್ನು ಬೆಳೆಸಿದ್ದೆ. ಹಬ್ಬದಲ್ಲಿ ಅವುಗಳು ಇತಿಹಾಸ ನಿರ್ಮಿಸಿದ್ದವು. ಈ ಹಬ್ಬ ನಾಡಿನಾದ್ಯಂತ ಪಸರಿಸಬೇಕು. ಯಾವುದೇ ರೀತಿಯ ಮನಸ್ತಾಪಗಳಿಲ್ಲದಂತೆ ಹಬ್ಬಗಳು ನಡೆಯಬೇಕು.
ಡಾ. ಪ್ರಶಾಂತ್
ಶಿಕಾರಿಪುರ
ಹಲವು ನಿಬಂಧನೆಗಳು
ಅತ್ಯಂತ ಜನಪ್ರಿಯವಾದ ಹೋರಿ ಹಬ್ಬದ ನಿಯೋಜನೆಗೆ ಜಿಲ್ಲಾಡಳಿತ ಪ್ರತಿ ವರ್ಷವೂ ಹಲವು ನಿಬಂಧನೆಗಳನ್ನು ವಿಸುತ್ತದೆ. ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎಂಬುದು ಬೇರೆ ಸಂಗತಿ. ಆದರೆ ನಿಬಂಧನೆಗಳ ಪಟ್ಟಿ ಮಾತ್ರ ಬಹಳ ದೊಡ್ಡದಿದೆ. ಸುರಕ್ಷತೆ ದೃಷ್ಟಿಯಿಂದ ಕೆಲವು ಮುಂಜಾಗ್ರತೆಗಳು ಅವಶ್ಯವೂ ಹೌದು.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆ-2017ರ ಅನ್ವಯ ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ ಹೊರಿ ಬೆದರಿಸುವ ಸ್ಪರ್ಧೆಗೆ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಸ್ಪರ್ಧೆ ಆಯೋಜಿಸಿದರೆ ಕಾನೂನು ಕ್ರಮ ನಿಶ್ಚಿತ.
ಮೊದಲು ಗ್ರಾಪಂ ಮತ್ತು ಪಶುವೈದ್ಯರಿಂದ ನಿರಾಕ್ಷೇಪಣಾ ಪತ್ರ ಪಡೆದು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಪರಿಶೀಲಿಸಿ ಸೂಕ್ತ ಶಿಾರಸ್ಸಿನೊಂದಿಗೆ ಜಿಲ್ಲಾಕಾರಿ ಕಚೇರಿಗೆ ಕಳಿಸಬೇಕು. ಇಲ್ಲಿ ಸಾಧಕ ಬಾಧಕ ಪರಿಶೀಲಿಸಿ ಅರ್ಜಿ ವಿಲೇವಾರಿ ಮಾಡಲಾಗುತ್ತದೆ. ಅನುಮತಿ ಪಡೆಯದಿದ್ದರೆ ಸ್ಥಳೀಯ ಸಂಸ್ಥೆಗಳು ಜವಾಬ್ದಾರರಾಗುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳಿಗೆ ಇಲ್ಲವೇ ಯಾವುದಾದರೂ ವ್ಯಕ್ತಿಗಳಿಗೆ ಪೆಟ್ಟಾದರೆ ತುರ್ತು ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ಇತರೆ ವ್ಯವಸ್ಥೆ ಸೇರಿದಂತೆ ಮಾರ್ಗಸೂಚಿಯಲ್ಲಿನ ಎಲ್ಲ ಅಂಶಗಳನ್ನು ಅನುಸರಿಸಬೇಕು. ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಜನರನ್ನು ನಿಯಂತ್ರಿಸಲು ಸ್ಥಳೀಯರನ್ನು ನೇಮಿಸಬೇಕು. ಮದ್ಯ ಸೇವನೆ ಮಾಡಿದವರಿಗೆ ಭಾಗವಹಿಸಲು ಅವಕಾಶ ನೀಡಬಾರದು. ಹೋರಿಗಳಿಗೆ ಪ್ರತ್ಯೇಕ ಸಮತಟ್ಟಾದ ಟ್ರಾಕ್ ನಿರ್ಮಿಸಬೇಕು. ಅದು ಗರಿಷ್ಟ 100 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲವಿರಬೇಕು. ಮಧ್ಯಾಹ್ನ 12 ರಿಂದ 3 ಗಂಟೆ ನಡುವಿನ ಅವಯಲ್ಲಿ ಸ್ಪರ್ಧೆ ಆಯೋಜಿಸುವಂತಿಲ್ಲ.