ಜಿಲ್ಲೆ

ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣ

ಗುಂಡ್ಲುಪೇಟೆ: ಕರ್ನಾಟಕ ಏಕೀಕರಣಕ್ಕಾಗಿ ಹಲವು ಮಹನೀಯರು ನಡೆಸಿದ ಹೋರಾಟದ ಫಲವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಡು, ನುಡಿಗಾಗಿ ಹಲವು ಮಹನೀಯರು ಹೋರಾಟ ಮಾಡಿದ್ದಾರೆ. ಇಂದು ಕನ್ನಡಿಗರಲ್ಲಿ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ಎಲ್ಲರೂ ಮಾತೃಭಾಷೆಯನ್ನು ಗೌರವಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.


ಮುಖ್ಯಭಾಷಣಕಾರ ರಂಗೇಗೌಡ ಮಾತನಾಡಿ, ವಿಶ್ವದ ಪ್ರಮುಖ 30 ಭಾಷೆಗಳಲ್ಲಿ ಕನ್ನಡವೂ ಒಂದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ಭಾಷೆ. ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಮಹನೀಯರು ಹೋರಾಟ ನಡೆಸಿ ಏಕೀಕರಣಗೊಳಿಸಿದರು. ಮೈಸೂರಿನ ಒಡೆಯರ್ ಕಾಲದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿ ಕೊಡುಗೆ ನೀಡಿದ್ದಾರೆ ಎಂದರು.


ತಹಸೀಲ್ದಾರ್ ಸಿ.ಜೆ.ರವಿಶಂಕರ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿದರು. ತಾಯಿ ಭುವನೇಶ್ವರಿ ಭಾವಚಿತ್ರವನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ರಾಷ್ಟ್ರಧ್ವಜವನ್ನು ತಹಸೀಲ್ದಾರ್ ರವಿಶಂಕರ್, ನಾಡಧ್ವಜವನ್ನು ಶಾಸಕ ನಿರಂಜನಕುಮಾರ್ ಆರೋಹಣ ಮಾಡಿ, ಪೊಲೀಸ್ ಹಾಗೂ ಸ್ಕೌಟ್ ತಂಡದಿಂದ ಧ್ವಜವಂದನೆ ಸ್ವೀಕರಿಸಿದರು. ನಾಡು ನುಡಿಗೆ ಹೋರಾಟ ಮಾಡಿದ್ದವರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಕನ್ನಡ ಅಭಿಮಾನ ಬಿಂಬಿಸುವ ಚಲನಚಿತ್ರ ಗೀತೆಗಳಿಗೆ ಮದ್ದಾನೇಶ್ವರ, ಜೆ.ಎಸ್.ಎಸ್. ಮತ್ತು ಸೆಂಟ್ ಜಾನ್ಸ್ ಶಾಲೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯಮಾಡಿದರು. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡಿಗೆ ಪೃಥ್ವಿ ಬುದ್ಧ್ದಿಮಾಂದ್ಯ ಶಾಲೆಯ ಮಕ್ಕಳು ಮಾಡಿದ ನೃತ್ಯ ಗಮನ ಸೆಳೆಯಿತು.


ಬಿಇಒ ಎಸ್.ಸಿ.ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಆರ್.ಹೇಮಂತರಾಜು, ಸದಸ್ಯರಾದ ನಾಗೇಶ್, ನಿರ್ಮಲ, ಸಿದ್ದಯ್ಯ, ರಾಜಗೋಪಾಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಕಸಪಾ ತಾಲೂಕು ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ಇತರರು ಇದ್ದರು.