ಕಮಲನಗರದ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಠಾಣಾಕುಶನೂರ ಕರ್ನಾಟಕ ಪಬ್ಲಿಕ್ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ಶಿವಪ್ರೀತ ವೈರಾಗೆ ಭಾಷಣ ಮಾಡಿ ಸಭಿಕರ ಗಮನ ಸೆಳೆದನು. ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಸಜ್ಜನ್, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ ಇತರರಿದ್ದರು. 
ಜಿಲ್ಲೆ

ಹೋರಾಟಗಾರರ ಬಲಿದಾನದ ಫಲವೇ ಸ್ವಾತಂತ್ರ್ಯ

ಕಮಲನಗರ: ತ್ಯಾಗ, ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳದೇ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ರಜಾಕಾರ ದೌರ್ಜನ್ಯದ ವಿರುದ್ಧ ಹೋರಾಡಿದ ಮಹಾತ್ಮರ ತತ್ವಗಳು ಯುವ ಜನಾಂಗಕ್ಕೆ ಪ್ರೇರಣೆಯಾಗಲಿ ಎಂದು ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹೈದರಾಬಾದ್ ನಿಜಾಂ ಆಳರಸರ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ಸ್ವಾತಂತ್ರ್ಯನಂತರ ೧೩ ತಿಂಗಳ ನಂತರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡಿತು. ಅಂದಿನ ಗೃಹಮಂತ್ರಿ ಸರ್ದಾರ ಪಟೇಲ್‌ರ ಮುತ್ಸದಿ ನಾಯಕತ್ವದ ಪ್ರತಿಫಲ ಇದಾಗಿದೆ ಎಂದರು.

ಠಾಣಾಕುಶನೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ಶಿವಪ್ರೀತ ವೈರಾಗೆ ಹಾಗೂ ೩ನೇ ತರಗತಿ ವಿದ್ಯಾರ್ಥಿನಿ ಬಸವಪ್ರಿಯಾ ಭೀಮಾಶಂಕರ ಅವರು ಕಲ್ಯಾಣ ಕರ್ನಾಟಕ ಉತ್ಸವದ ಕುರಿತು ಅದ್ಬುತವಾಗಿ ಮಾತನಾಡಿ ಸಭಿಕರ ಗಮನ ಸೆಳೆದರು.

ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಹಣಮಂತರಾಯ ಕೌಟಗೆ, ಸಿಪಿಐ ಶ್ರೀಕಾಂತ ಅಲ್ಲಪೂರ, ಶಿವಾನಂದ ವಡ್ಡೆ, ಶ್ರೀರಂಗ ಪರಿಹಾರ, ಶಾಂತಕುಮಾರ ಬಿರಾದಾರ, ಸುಭಾಷ ಮಿರ್ಚೆ, ವಿಠ್ಠಲರಾವ ಪಾಟೀಲ್ ಇತರರಿದ್ದರು.

ಉಮಾಕಾಂತ ಮಹಾಜನ ನಿರೂಪಣೆ ಮಾಡಿದರು. ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆಯಲ್ಲಿ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಮೃತಾ ವಿನೋದ ಹಾಗೂ ಭಾಷಣ ಸ್ಫರ್ಧೆಯಲ್ಲಿ ಮಹೇಶ್ವರಿ ಅವಿನಾಶ ಪ್ರಥಮ ಸ್ಥಾನ ಗಳಿಸಿದ ಪ್ರಯುಕ್ತ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.