ಹಾಸನ:ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ, ಸಮಾಜ ಸೇವಕ, ಹೋರಾಟಗಾರ ಜಿ.ಓ.ಮಹಾಂತಪ್ಪ ಅವರ ಅಂತ್ಯಕ್ರಿಯೆ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಚಿಕ್ಕಗೊಂಡನಹಳ್ಳಿಯಲ್ಲಿ ಗುರುವಾರ ಸಂಜೆ ನೆರವೇರಿತು.
ಇದಕ್ಕೂ ಮುನ್ನ ಬುಧವಾರ ರಾತ್ರಿ ಬೆಂಗಳೂರಿನಿಂದ ಮಹಾಂತಪ್ಪ ಅವರ ಪಾರ್ಥಿವ ಶರೀರವನ್ನು ಹಾಸನ ನಗರದ ಕೃಷ್ಣನಗರದ ನಿವಾಸದಲ್ಲಿ ಗುರುವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಧರ್ಮಪತ್ನಿ ಶಾಂತಲಾ ಅವರೊಂದಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಸಚಿವರು, ಸಮುದಾಯದ ವಿಚಾರ ಬಂದಾಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು. ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಓಡಾಡಿ ಸಮಾಜ ಸೇವೆ, ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅಪರೂಪದ ವ್ಯಕ್ತಿ ಮಹಾಂತಪ್ಪ ಎಂದು ಬಣ್ಣಿಸಿದರು.
ಇದೇ ವೇಳೆ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಪಂ ಸಿಇಒ ಪೂರ್ಣಿಮಾ, ಎಸಿ ಮಾರುತಿ, ತಹಸೀಲ್ದಾರ್ ಶ್ವೇತಾ ಅವರು ಆಗಮಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರಾದ ಶಿವಪ್ಪನಾಯಕ, ಧರ್ಮಪ್ಪನಾಯಕ, ಮಧುನಾಯಕ, ದೊಡ್ಡರಂಗಯ್ಯ ಹಾಗೂ ಆರ್.ಸಿ.ಭೈರಪ್ಪ ಮೊದಲಾದವರಿದ್ದರು.
ಕಸಾಪ ಆವರಣದಲ್ಲಿ ಅಂತಿಮ ದರ್ಶನ:
ನಂತರ ಜಿಲ್ಲಾ ಕಸಾಪ ಆವರಣಕ್ಕೆ ಮೃತದೇಹ ತರಲಾಯಿತು. ಹಲವು ಸಂಘಟನೆಗಳ ಮುಖಂಡರು, ಸಾಹಿತಿಗಳು, ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಜಮಾಯಿಸಿ ಅಂತಿಮ ದರ್ಶನ ಪಡೆದು ಹಿರಿಯ ಜೀವವನ್ನು ಬೀಳ್ಕೊಟ್ಟರು. ಆರಂಭದಲ್ಲಿ ಒಂದು ನಿಮಿಷ ಮೌನ ಆಚರಿಸಿ, ಸರ್ವ-ಧರ್ಮ ಪ್ರಾರ್ಥನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಮಹಾಂತಪ್ಪ ಇಂದು ನಮ್ಮ ಜತೆ ಇಲ್ಲ ಎಂಬ ನೋವಿದೆ. ಸಾಮಾನ್ಯ ಕಾರ್ಮಿಕನಾಗಿ ಬಂದು ಜನರ ವಿಶ್ಚಾಸ ಗಳಿಸಿ ಲವಲವಿಕೆಯಿಂದ ಸಮಾಜ, ಬಡವರ ಪರ ಕೆಲಸ ಮಾಡಿದ ಅವರ ಸೇವೆ ಅನುಕರಣನೀಯ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಮಹಾಂತಪ್ಪ ಅವರ ಹೆಸರನ್ನು ನಗರದ ಯಾವುದಾದರೊಂದಿಗೆ ರಸ್ತೆಗೆ ಇಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಇದೇ ವೇಳೆ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮದ್ ಸುಜಿತಾ, ಮಾಜಿ ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಆರ್.ಪಿ.ವೆಂಕಟೇಶ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ನಾಯಕರಲ್ಲಿ ಮಂಜೇಗೌಡಮ, ನಿಕಟಪೂರ್ವ ಗೌರವ ಅಧ್ಯಕ್ಷ ರವಿ ನಾಗಲಗೂಡು, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಅನಿಲ್‌ಕುಮಾರ್, ಕೆ.ಟಿ.ಜಯಶ್ರೀ, ಕೃಷ್ಣದಾಸ್, ಈರಪ್ಪ, ಅಂಬುಗ ಮಲ್ಲೇಶ್, ಕೆ.ಎಂ.ಶ್ರೀನಿವಾಸ್, ವಿಜಯಕುಮಾರ್, ಗಂಗಾಧರ್ ಬಹುಜನ್ ಮೊದಲಾದವರು ಅಂತಿಮ ದರ್ಶನ ಪಡೆದರು.