ಜಿಲ್ಲೆ

ಹೋಬಳಿಗೆರಡು ರೈತ ಉತ್ಪಾದಕ ಸಂಸ್ಥೆ ರಚಿಸಿ

ಚಿಕ್ಕಬಳ್ಳಾಪುರ : ಪ್ರತಿ ಹೋಬಳಿಗೆ ಎರಡು ರೈತ ಉತ್ಪಾದಕರ ಸಂಸ್ಥೆ ರಚನೆ ಮತ್ತು ಹೆಚ್ಚಿನ ಬೇಡಿಕೆ ಇರುವ ಬೆಳೆ ಬೆಳೆಯುವ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮದ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಂದ ತಯಾರಾದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಜತೆಗೆ ಒಳ್ಳೆಯ ಬೆಲೆಯಿದೆ, ರೈತರು ಲಾಭ ಗಳಿಕೆಗೆ ಸಿರಿಧಾನ್ಯಗಳನ್ನು ಬೆಳೆಯಬೇಕು. ಈ ನಿಟ್ಟಿನಲ್ಲಿ ಪ್ರಚಾರ ಕೈಗೊಂಡು ಮಾರ್ಗದರ್ಶನದ ಮೂಲಕ ಪ್ರೋತ್ಸಾಹ ನೀಡಬೇಕೆಂದು ಸೂಚಿಸಿದರು.

ಬೆಳೆ ಸರ್ವೆಗೆ ವಿಶೇಷ ಆ್ಯಪ್ : ಮುಂಗಾರು ಅವಧಿಯಲ್ಲಿ ಬಿತ್ತನೆ ಚುರುಕುಗೊಂಡಿರುವ ನಡುವೆಯೇ ಬೆಳೆ ಸರ್ವೇ ಕಾರ್ಯವೂ ಪ್ರಾರಂಭವಾಗಿದ್ದು ಕೃಷಿ ಇಲಾಖೆ ವಿಶೇಷ ಆ್ಯಪ್ ಮೂಲಕ ಸ್ವಯಂ ರೈತರೇ ಮಾಹಿತಿ ಅಪ್‌ಡೇಟ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಕೃಷಿಕರು ಮತ್ತು ಇಲಾಖೆ ನಡುವೆ ಉತ್ತಮ ಬಾಂಧವ್ಯ, ರೈತರ ಅನುಕೂಲಕ್ಕಾಗಿ ರೈತ ಬೆಳೆ ಸಮೀಕ್ಷೆ ಆ್ಯಪ್ ಸಹಕಾರಿಯಾಗಿದ್ದು, ಅಂಗೈನಲ್ಲಿಯೇ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ತಿಳಿಸಿದರು.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ 'ಊಚ್ಟಞಛ್ಟಿ ಇ್ಟಟ ಖ್ಠ್ಟಛಿ ಅ 202021' ಅನ್ನು ಡೌನ್ ಮಾಡಿಕೊಳ್ಳಬೇಕು. ಆರ್ಥಿಕ ವರ್ಷ, ಋತು, ರೈತನ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ, ಮೊಬೈಲ್‌ಗೆ ಬಂದ ಔಖಿ ಸಂಖ್ಯೆ ನಮೂದಿಸಬೇಕು. ನೋಂದಣಿಯಾದ ಬಳಿಕ ಪಹಣಿ, ಮಾಲೀಕರ ಹೆಸರು, ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ, ಸ್ವಂತ ಜಮೀನು ಇಲ್ಲವೇ ಸಂಬಂಧಿಕರದ್ದಾಗಿದ್ದರೆ, ಬೆಳೆ ಮತ್ತು ಬೆಳೆ ವಿಸ್ತೀರ್ಣ ದಾಖಲಿಸಬೇಕು. ಛಾಯಾಚಿತ್ರಗಳನ್ನು ತೆಗೆದು ಅಪ್‌ಲೌಡ್ ಮಾಡಬೇಕು. ಇದನ್ನು ಪರಿಶೀಲಿಸಿ ಗ್ರಾಮ ಇಲಾಖೆ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್ ಅಮರೇಶ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ, ಕೃಷಿ ಇಲಾಖೆ ಉಪ ನಿರ್ದೇಶಕಿ ಅನುರೂಪಾ ಇತರರಿದ್ದರು.