ಜಿಲ್ಲೆ

ಹೋಬಳಿ ಮಟ್ಟದ ಕ್ರೀಡಾಕೂಟ: ಕಣತೂರು ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ಆಲೂರು: ಪಾಳ್ಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಲವು ಶಾಲೆಗಳು ಭಾಗವಹಿಸಿದ್ದವು. ಇದರಲ್ಲಿ ಕಣತೂರು ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇದರಲ್ಲಿ ಬಾಲಕರ ವಿಭಾಗದಿಂದ ಕಬ್ಬಡಿ, ವಾಲಿಬಾಲ್, ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ಖೋ-ಖೋ, ಥ್ರೋ ಬಾಲ್, 4*100 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅದೇ ರೀತಿ ಬಾಲಕಿಯರ ವಿಭಾಗದಲ್ಲಿ ಖೋ-ಖೋ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ವಾಲಿಬಾಲ್ ದ್ವಿತೀಯ ಸ್ಥಾನ ಪಡೆದುಕೊಂಡರೆ ವೈಯಕ್ತಿಕ ವಿಭಾಗದಲ್ಲಿ ಎಸ್.ಆರ್. ಕೌಶಿಕ್ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಸ್ಮಿತಾ ಉದ್ದ ಜಿಗಿತ ದ್ವಿತೀಯ ಸ್ಥಾನ, ಎಸ್.ಡಿ. ದಿವ್ಯಾ 400 ಮತ್ತು 600 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜನ್ ನಾಕಲಗೋಡು, ಕಣತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪೃಥ್ವಿರಾಮ್, ಎಸ್‌ಡಿಎಂಸಿ ಅಧ್ಯಕ್ಷ ಮಧು, ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಮ್ಮ, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಸ್. ಹಿಮಾ, ಸಹ ಶಿಕ್ಷಕರಾದ ಪ್ರಮೀಳಾ, ಎಚ್.ಎಸ್. ರಾಜೇಶ್ವರಿ, ಕೆ. ರೂಪಾ, ಸಿದ್ದಯ್ಯ, ನಯನಾ ಅವರು ಅಭಿನಂದಿಸಿದ್ದಾರೆ.