ಬಳ್ಳಾರಿ : ಹತ್ತು ಆಹಾರ ಪದಾರ್ಥಗಳ ಮಾದರಿಗಳ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ವಿಶ್ಲೇಷಣೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಆಹಾರ ಸುರಕ್ಷತೆ ಅಧಿಕಾರಿ ನಂದಾಕಡಿ ಹೇಳಿದರು.
ನಗರದ ಪಾಲಿಕೆ ವ್ಯಾಪ್ತಿಯಲ್ಲಿನ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ವತಿಯಿಂದ ವಿಶೇಷ ಅಂದೋಲನದಡಿ ಆಹಾರ ಸುರಕ್ಷತೆ ಅಧಿಕಾರಿಗಳು ಬೀದಿ ಬದಿ ತಿಂಡಿ-ದಿನಸಿ ವ್ಯಾಪಾರಿಗಳ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಆಹಾರ ಮತ್ತು ಗುಣಮಟ್ಟದ ಕುರಿತು ಶುಕ್ರವಾರ ತಪಾಸಣೆ ನಡೆಸಿ ಮಾತನಾಡಿದರು. ವಿಶ್ಲೇಷಣಾ ವರದಿ ಬಂದ ನಂತರ ಆಹಾರ ಸುರಕ್ಷತೆ ಮತ್ತುಗುಣಮಟ್ಟ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ತಪಾಸಣೆ ಸಮಯದಲ್ಲಿ ಕಂಡುಬಅದ ಲೋಪಗಳಿಗೆ ನಿಯಮಾನುಸಾರ ತಿಳುವಳಿಕಯ ಪತ್ರವನ್ನು ಆಹಾರ ಉದ್ದಿಮೆದಾರರಿಗೆ ನೀಡಲಾಗಿದ್ದು, ದಂಡ ಸಹ ವಿಧಿಸಲಾಗಿದೆ. ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಅದ ಲೋಪದೋಷಗಳನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬಳಿಕ, ಆಹಾರ ನಿರ್ವಾಹಕರ ವೈಯಕ್ತಿಕ ಸ್ವಚ್ಛತೆ, ಆಹಾರದಲ್ಲಿ ಬಳಸುತ್ತಿರುವ ಕೃತಕ ಬಣ್ಣ, ಅಜಿನೋಮೋಟೊ (ಟೇಸ್ಟಿಂಗ್ ಪೌಡರ್), ಆಹಾರ ತಯಾರಿಸಲು ಬಳಸುತ್ತಿರುವ ನೀರು, ಗ್ರಾಹಕರಿಗೆ ಕುಡಿಯಲು ನೀಡುತ್ತಿರುವ ನೀರು ಮತ್ತು ನೋಂದಣಿ ಅಥವಾ ಪರವಾನಿಗೆ ಪಡೆದಿರುವ ಮಾಹಿತಿ ಕಲೆ ಹಾಕಿದರು.