ಕುಶಾಲನಗರ: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಲ್ ಹಾಗೂ ಬಾರ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್, ಪಿಡಿಒ ಸುಮೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಆಹಾರ ಪದಾರ್ಥಗಳನ್ನು ತಯಾರಿಸುವ ಪಾತ್ರೆಗಳು, ನೀರು ಹಾಗೂ ಅಡುಗೆ ಮನೆಯ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು. ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆಲವು ಹೊಟೇಲ್‌ಗಳಿಗೆ ಸ್ಥಳದಲ್ಲೇ 5 ಸಾವಿರ ರೂ. ದಂಡ ವಿಧಿಸಿ ವಸೂಲಿ ಮಾಡಲಾಯಿತು.